ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವಿಶ್ವಗುರು, ಸಾಂಸ್ಕ್ರತಿಕ ನಾಯಕ ಬಸವೇಶ್ವರರು ನುಡಿದಂತೆ ನಡೆಯುವ ಮೂಲಕ ನಿಷ್ಕಲ್ಮಶವಾದ ಆಡಳಿತವನ್ನು ನೀಡುವ ಜೊತೆಗೆ ಆದರ್ಶ ಜೀವನ ಸಾಗಿಸಲು ಬೇಕಾದ ವಚನ ಸಾಹಿತ್ಯವನ್ನು ನೀಡಿದ್ದಾರೆ. ಅವರು ನೀಡಿದ ವಚನ ಸಾಹಿತ್ಯ ಅರಿತುಕೊಳ್ಳುವ ಜೊತೆಗೆ ಅದರಂತೆ ನಡೆದರೆ ನಮ್ಮ ಜೀವನ ಆದರ್ಶಮಯವಾಗುತ್ತದೆ ಎಂದು ತಾಳಿಕೋಟಿಯ ಜೆಎಸ್‌ಜಿ ಫೌಂಡೇಶನ್‌ದ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಹೇಳಿದರು.ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳಾವರಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಬಸವ ಜಯಂತಿ ಅಂಗವಾಗಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಸವೇಶ್ವರ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿದ ಅವರು, ಈ ಪಾವನ ನೆಲದಲ್ಲಿ ಜನಿಸಿದ ಬಸವೇಶ್ವರರು ವಚನ ಸಾಹಿತ್ಯ ನೀಡುವ ಮೂಲಕ ಸರ್ವರಿಗೂ ಸಮವಾಗಿ ಬಾಳಬೇಕೆಂಬ ತತ್ವ ಸಂದೇಶ ನೀಡಿದರು. ಬಸವೇಶ್ವರರ ಉದಾತ್ತ ಚಿಂತನೆ ಅರಿತುಕೊಂಡು ನಾವೆಲ್ಲರೂ ನಡೆದರೆ ನೈತಿಕ ಜೀವನ ನಮ್ಮದಾಗುತ್ತದೆ. ಕಾಯಕ-ದಾಸೋಹದ ಕಲ್ಪನೆಯನ್ನು ಜಗತ್ತಿಗೆ ನೀಡುವ ಮೂಲಕ ಕಾಯಕ ಗೌರವದ ಪ್ರತೀಕವಾಗಿದೆ. ಕಾಯಕದಿಂದ ಬರುವ ಸಂಪತ್ತಿನಲ್ಲಿ ದಾಸೋಹ ಮಾಡುವ ಮೂಲಕ ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕು ಸಾಗಿಸಬೇಕೆಂಬ ಸಂದೇಶ ಸಾರಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿ, ವೇದವನ್ನು ಓದಿದವರು ದೊಡ್ಡವರಲ್ಲ. ವೇದ ತಿಳಿದುಕೊಂಡವರು ದೊಡ್ಡವರು. ೧೨ನೇ ಶತಮಾನದ ಶರಣರು ನುಡಿದಂತೆ ನಡೆದು ತೋರಿಸಿದರು. ಬಸವೇಶ್ವರರ ತತ್ವಗಳ ಕುರಿತು ಕೇವಲ ಮಾತನಾಡುವುದು ಸರಿಯಲ್ಲ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಹಂಪಿ ಉತ್ಸವ ಮಾದರಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಬಸವ ಜನಿಸಿದ ಈ ನೆಲದಲ್ಲಿ ಪ್ರತಿ ವರ್ಷ ಬಸವ ಜಯಂತಿಯಂದು ಸರ್ಕಾರ ಆಚರಣೆ ಮಾಡುವಂತಾಗಬೇಕೆಂದರು.ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಈಗಾಗಲೇ ಬಸವೇಶ್ವರ ಜನಿಸಿದ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ಸರ್ಕಾರ ರಚನೆ ಮಾಡಿದ್ದು ಸ್ವಾಗತಾರ್ಹ. ಮುಂಬರುವ ದಿನಗಳಲ್ಲಿ ಈ ನೆಲದಲ್ಲಿ ಸರ್ಕಾರದಿಂದ ಅದ್ಧೂರಿ ಬಸವ ಜಯಂತಿ ಆಚರಣೆಗೆ ಸಚಿವ ಶಿವಾನಂದ ಪಾಟೀಲ ನೆರವೇರಿಸುವ ಭರವಸೆ ನೀಡಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಬದುಕಿಗೆ ಸ್ಫೂರ್ತಿದಾಯಕವಾಗಿದೆ. ಕೇವಲ ಅದರ ಅಧ್ಯಯನ ಸಾಲದು. ಅದರಲ್ಲಿ ಮೌಲ್ಯ ಪಾಲನೆಯಾಗುವುದು ಮುಖ್ಯವಾಗಿದೆ. ಶರಣರು ನುಡಿದಂತೆ ನಡೆದು ತಮ್ಮ ಅನುಭಾವವನ್ನು ವಚನ ಸಾಹಿತ್ಯದಲ್ಲಿ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಬಸವ ಜಯಂತಿ ಅದ್ಧೂರಿಯಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಇದರ ಬಗ್ಗೆ ಸಂಕಲ್ಪ ಮಾಡಬೇಕಿದೆ ಎಂದರು.ಕೂಡಸಂಗಮ ಅಭಿವೃದ್ಧಿ ಮಂಡಳಿ ತಹಸೀಲ್ದಾರ್ ಜೆ.ಎಸ್.ಚಿನಿವಾಲರ ಸ್ವಾಗತಿಸಿ, ಎಸ್.ಎಂ.ಬಿಸ್ಟಗೊಂಡ ನಿರೂಪಿಸಿ, ವಿರೇಶ ವಾಲಿ, ಸಾಕ್ಷಿ ಹಿರೇಮಠ ವಚನ ಸಂಗೀತ ನಡೆಸಿಕೊಟ್ಟರು. ಲಕ್ಷ್ಮೀ ತೇರದಾಳಮಠ ತಂಡದಿಂದ, ನಟರಾಜ ಅಕಾಡೆಮಿ, ನಾಟ್ಯ ಕಲಾ ಅಕಾಡೆಮಿಯಿಂದ ವಚನ ನೃತ್ಯರೂಪಕಗಳು ಜನಮನಸೂರೆಗೊಂಡವು. ನಂತರ ರಾತ್ರಿ ಅಲಂಕೃತ ಬಸವೇಶ್ವರ ಪಲ್ಲಕ್ಕಿ ಹಾಗೂ ಬಸವೇಶ್ವರ ಭಾವಚಿತ್ರ ಭವ್ಯ ಮೆರವಣಿಗೆ ಸಕಲ ಮಂಗಳ ವಾದ್ಯ ವೈಭವದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳಗಿನವರೆಗೂ ನಡೆಯಿತು.