ಜೀವನ ಸತ್ಯ, ಧರ್ಮಮಯವಾಗಲಿ: ಸ್ವರ್ಣವಲ್ಲೀ ಶ್ರೀ

| Published : Aug 09 2024, 12:54 AM IST

ಸಾರಾಂಶ

ವ್ಯಾವಹಾರಿಕ ಬದುಕಿನಲ್ಲಿ ಪ್ರತಿಕ್ಷಣವೂ ಎಚ್ಚರಿದ್ದಷ್ಟು ಹೊತ್ತು ನೆನಪಿಡಬೇಕಾದ ಅಂಶ ಯಾವುದು ಎಂದು ಕೇಳಿದರೆ ಇಂದು ಅನೇಕ ಉತ್ತರವನ್ನು ಈ ಪ್ರಶ್ನೆಗೆ ಕೊಡಬಹುದು.

ಶಿರಸಿ: ದೇವರಿಗೆ ಪ್ರತಿಕ್ಷಣ ನಮ್ಮನ್ನು ಒಪ್ಪಿಕೊಂಡರೆ ಜೀವನದಲ್ಲಿ ಸತ್ಯ ಹಾಗೂ ಧರ್ಮನಿಷ್ಠೆ ಪ್ರಾಪ್ತಿಯಾಗಲಿದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಸ್ವರ್ಣವಲ್ಲೀಯಲ್ಲಿ ಸಂಕಲ್ಪಿತ ತಮ್ಮ ೩೪ನೇ ಹಾಗೂ ಶ್ರೀ ಮಠದ ಕಿರಿಯ ಸ್ವಾಮೀಜಿ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಯ ಪ್ರಥಮ ಚಾತುರ್ಮಾಸ್ಯದಲ್ಲಿ ಶಿರಸಿ ಸೀಮೆಯ ಬೆಟ್ಟಳ್ಳಿ ಭಾಗಿಯ ಸಮಸ್ತ ಶಿಷ್ಯರಿಂದ ಗುರುಸೇವೆ ಸ್ವೀಕರಿಸಿ ಮಾತನಾಡಿದರು.ವ್ಯಾವಹಾರಿಕ ಬದುಕಿನಲ್ಲಿ ಪ್ರತಿಕ್ಷಣವೂ ಎಚ್ಚರಿದ್ದಷ್ಟು ಹೊತ್ತು ನೆನಪಿಡಬೇಕಾದ ಅಂಶ ಯಾವುದು ಎಂದು ಕೇಳಿದರೆ ಇಂದು ಅನೇಕ ಉತ್ತರವನ್ನು ಈ ಪ್ರಶ್ನೆಗೆ ಕೊಡಬಹುದು. ಆದರೆ ಪ್ರಮುಖವಾಗಿ ಒಂದು ಉತ್ತರ ಎಂದರೆ ದೇವರಿಗೆ ಒಪ್ಪಿಗೆಯಾಗುವ ಹಾಗೆ ನಾವು ನಡೆದುಕೊಳ್ಳಬೇಕು ಎನ್ನುವ ಚಿಂತನೆ. ನನ್ನ ಮಾತು, ನನ್ನ ಕೆಲಸ ಇವೆಲ್ಲವೂ ದೇವರು ಒಪ್ಪುವ ಹಾಗೆ ಇರಬೇಕು. ಎಲ್ಲ ಕೆಲಸ ಮಾಡುವಾಗಲೂ ಇದನ್ನು ಸತತ ಚಿಂತನೆಯೊಂದಿಗೆ ಮಾಡಿದರೆ ಆಗ ನಮ್ಮ ಜೀವನ ಸತ್ಯಮಯ ಹಾಗೂ ಧರ್ಮಮಯವಾಗುತ್ತದೆ ಎಂದರು.

ಪ್ರತಿದಿನ ನನ್ನಿಂದ ನೆರವೇರುವ ಚಟುವಟಿಕೆಗಳು ದೇವರು ಒಪ್ಪುವ ರೀತಿಯಲ್ಲಿ ಇರಲಿ ಎಂದು ಸಂಕಲ್ಪವನ್ನು ವೇದ ಓದಿದ ಒಬ್ಬ ವಿದ್ವಾಂಸ ಪ್ರತಿದಿನ ಬೆಳಗ್ಗೆ ದೇವರಲ್ಲಿ ಮಂತ್ರದ ಮೂಲಕ ಪ್ರಾರ್ಥಿಸುತ್ತಾನೆ. ಅದೇ ರೀತಿ ಪ್ರತಿಯೊಬ್ಬರೂ ಸಂಕಲ್ಪ ಮಾಡಿ ಮಾಡಿದರೆ ಉತ್ತಮ ಜೀವನವನ್ನು ನಡೆಸಲು ಸಾಧ್ಯ ಎಂದರು.

ಸೀಮೆಯ ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆಯನ್ನು ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಸೀಮಾ ಅಧ್ಯಕ್ಷ ಸತ್ಯನಾರಾಯಣ ಭಟ್ ವರ್ಗಾಸರ, ಕೇಂದ್ರ ಮಾತೃಮಂಡಳಿಯ ಮಾಜಿ ಅಧ್ಯಕ್ಷೆ ವೇದಾ ಹೆಗಡೆ ನೀರ್ನಳ್ಳಿ ಇದ್ದರು. ಸೀಮಾ ಪುರಸ್ಕಾರಕಳೆದ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ೬೨೫ಕ್ಕೆ ೬೨೪ ಅಂಕ ಪಡೆದ ಬೆಟ್ಟಳ್ಳಿ ಭಾಗಿಯ ಸುಬ್ರಾಯ ಭಟ್ ಮತ್ತು ವಿಜಯಾ ದಂಪತಿಗಳ ಪುತ್ರ ದಶ೯ನ್, ರವೀಂದ್ರ ಭಟ್ಟ ಮತ್ತು ಉಷಾ ದಂಪತಿಗಳ ಪುತ್ರಿ ಸ್ಪಂದನಾ ೬೨೫ ಕ್ಕೆ ೬೨೧ ಅಂಕಗಳನ್ನು ಪಡೆದು ಕ್ರಮವಾಗಿ ರಾಜ್ಯಕ್ಕೆ ದ್ವಿತೀಯ, ನಾಲ್ಕನೇ ಸ್ಥಾನ ಗಳಿಸಿದ ಇಬ್ಬರು ವಿದ್ಯಾರ್ಥಿಗಳ ಪಾಲಕರಿಗೆ ಶ್ರೀಗಳು ವಿಶೇಷ ಸುವರ್ಣ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.