ಹಾನಗಲ್ಲ, ಮೊಂಬತ್ತಿ ಬೆಳಗಿ ಮತದಾನ ಜಾಗೃತಿ

| Published : Apr 05 2024, 01:08 AM IST

ಸಾರಾಂಶ

ಹಾನಗಲ್ಲ ತಾಲೂಕು ಆಡಳಿತದಿಂದ ಹಾನಗಲ್ಲಿನಲ್ಲಿ ಜಾಗೃತಿ ಜಾಥಾ ಹಾಗೂ ಮೇಣ ಬತ್ತಿ ಬೆಳಗಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಹಾನಗಲ್ಲ: ತಾಲೂಕು ಆಡಳಿತದಿಂದ ಹಾನಗಲ್ಲಿನಲ್ಲಿ ಜಾಗೃತಿ ಜಾಥಾ ಹಾಗೂ ಮೇಣ ಬತ್ತಿ ಬೆಳಗಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹಾನಗಲ್ಲಿನ ತಾಲೂಕು ಪಂಚಾಯತ್ ಕಾರ್ಯಾಲಯದ ಬಯಲಿನಲ್ಲಿ ತಾಲೂಕು ತಹಸೀಲ್ದಾರ್‌ ಎಸ್. ರೇಣುಕಮ್ಮ, ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಮತದಾನದ ಅವಕಾಶ ಇರುವ ಯಾವೊಬ್ಬರೂ ಮತದಾನದಿಂದ ಹೊರಗುಳಿಯಬಾರದು. ಮತದಾನ ನಮ್ಮೆಲ್ಲರ ಹಕ್ಕು. ಅದನ್ನು ಪಾಲಿಸಬೇಕು. ತಾಲೂಕು ಆಡಳಿತ ಈ ಬಾರಿ ಹಳ್ಳಿ ಪಟ್ಟಣಗಳಲ್ಲಿ ಜಾಗೃತಿ ಜಾಥಾ ನಡೆಸಿ ಮತದಾನದ ಜಾಗೃತಿ ಮೂಡಿಸಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು. ಮತದಾನದ ಮಹತ್ವ ಅರಿತು ಮತದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.ಪಟ್ಟಣದ ತಾಲೂಕು ಪಂಚಾಯಿತಿಯಿಂದ ಹೊರಟ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾತ್ಮಾಗಾಂಧೀ ವೃತ್ತ ತಲುಪಿತು. ಜಾಥಾದುದ್ದಕ್ಕೂ ಮತದಾನಕ್ಕೆ ಮನವಿ ಮಾಡುವ ಘೋಷಣೆಗಳನ್ನು ಕೂಗಲಾಗುತ್ತಿತ್ತು. ನಂತರ ಮಹಾತ್ಮಾಗಾಂಧಿ ವೃತ್ತದಲ್ಲಿ ಮೇಣಬತ್ತಿಗಳನ್ನು ಹೊತ್ತಿಸಿ, ವೃತ್ತ ರಚಿಸಿ ಕೆಲ ಹೊತ್ತು ಜಾಗೃತಿ ಘೋಷಣೆಗಳನ್ನು ಕೂಗಿದರು. ಪುರಸಭೆ ಮುಖ್ಯಾಧಿಕಾರಿ ವಾಯ್.ಕೆ. ಜಗದೀಶ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.