ಜಿಗಜಿಣಗಿ ಬಗ್ಗೆ ಹಗುರ ಮಾತು ಶೋಭೆ ತರಲ್ಲ

| Published : Sep 13 2024, 01:43 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ತಾಲೂಕಿನ ನಾದ ಗ್ರಾಮದಲ್ಲಿ ಕೆಪಿಟಿಸಿಎಲ್‌ 110 ಕೆವಿ ವಿದ್ಯುತ್‌ ವಿತರಣಾ ಕೇಂದ್ರದ ಉದ್ಘಾಟನೆ ವೇಳೆ ಸಂಸದ ರಮೇಶ ಜಿಗಜಿಣಗಿ ಬಗ್ಗೆ ಟೀಕೆ ಮಾಡಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ವಿರುದ್ಧ ಬಿಜೆಪಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯ ಹಿರಿಯ ರಾಜಕಾರಣಿ, ಸಂಸದರಾದ ರಮೇಶ ಜಿಗಜಿಣಗಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆ ತರಲ್ಲ. ಇದೇ ಮುಂದುವರಿದರೇ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ನಾದ ಗ್ರಾಮದಲ್ಲಿ ಕೆಪಿಟಿಸಿಎಲ್‌ 110 ಕೆವಿ ವಿದ್ಯುತ್‌ ವಿತರಣಾ ಕೇಂದ್ರದ ಉದ್ಘಾಟನೆ ವೇಳೆ ಸಂಸದ ರಮೇಶ ಜಿಗಜಿಣಗಿ ಬಗ್ಗೆ ಟೀಕೆ ಮಾಡಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಅವರ ವಿರುದ್ಧ ಬಿಜೆಪಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಜಿಲ್ಲೆಯ ಹಿರಿಯ ರಾಜಕಾರಣಿ, ಸಂಸದರಾದ ರಮೇಶ ಜಿಗಜಿಣಗಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಶೋಭೆ ತರಲ್ಲ. ಇದೇ ಮುಂದುವರಿದರೇ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಸೇರಿ ಇತರರು ಶಾಸಕ ಯಶವಂತರಾಯಗೌಡ ಅವರ ನಡೆಯನ್ನು ಖಂಡಿಸಿದರು. ಜಿಗಜಿಣಗಿ 40 ವರ್ಷ ರಾಜಕಾರಣದಲ್ಲಿ ಕಪ್ಪುಚುಕ್ಕೆ ಇಲ್ಲದೆ ರಾಜಕೀಯ ಮಾಡಿದವರು. ಜಾತ್ಯಾತೀತ ಮನೋಭಾವ ಹೊಂದಿರುವ ಅವರನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಜಿಲ್ಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳು ತರುವುದರ ಮೂಲಕ ಜಿಲ್ಲೆ ಅಭಿವೃದ್ದಿಪಡಿಸಿದ್ದಾರೆ. ಕೇಂದ್ರ ಸರ್ಕಾರದ ಸಾವಿರ ಕೋಟಿ ಯೋಜನೆಯ ಕಾರ್ಯಕ್ರಮ ಇಂಡಿಯಲ್ಲಿ ಮಾಡಿದ್ದು ಸಹಿಸಿಕೊಳ್ಳಲು ಆಗದೆ ಹೊಟ್ಟೆ ಉರಿಯಿಂದ ಶಾಸಕರು ಹತಾಸೆಗೊಂಡು ಸಂಸದ ಬಗ್ಗೆ ಮಾತನಾಡಿದ್ದಾರೆ. ಇದು ತಮ್ಮ ಘನತೆಗೆ ಶೋಭೆಯಲ್ಲ ಎಂದು ವಾಗ್ದಾಳಿ ನಡೆಸಿದರು.

ನಿಂದಿಸಿ ರಾಜಕೀಯ ಮಾಡಬೇಡಿ

ಹಿರಿಯರನ್ನು ಗೌರವಿಸುವ ಗುಣ ಇರಬೇಕೆ ವಿನಃ ಅಧಿಕಾರದಲ್ಲಿದ್ದೇನೆ ಎಂದು ಅಗೌರವದಿಂದ ಮಾತನಾಡುವುದು ಸರಿಯಲ್ಲ. ರಾಜಕಾರಣ ಮಾಡುವುದಾದರೆ ಮಾಡಿ, ಆದರೆ ಒಬ್ಬರಿಗೆ ನಿಂದಿಸಿ ರಾಜಕಾರಣ ಮಾಡಬಾರದು ಎಂದರು.

ಬಗಲಿ ಹೆಸರು ಹೇಳಲಿಲ್ಲವಲ್ಲ

ಕೇಂದ್ರ ಸಚಿವ ನೀತಿನ ಗಡ್ಕರಿ ಅವರು ಬೆಳಗಾವಿಯಲ್ಲಿ ರಾಜ್ಯದ ಹೆದ್ದಾರಿಗಳಿಗೆ ಸಾಮೂಹಿಕ ಚಾಲನೆ ನೀಡಿದ್ದಾರೆ ವಿನಃ ಭೂಮಿಪೂಜೆ ಮಾಡಿಲ್ಲ. ಆದರೆ, ಇಂಡಿಯಲ್ಲಿ ನಡೆದಿದ್ದು ಭೂಮಿ ಪೂಜೆ ಕಾರ್ಯಕ್ರಮ. ಈ ಹಿಂದೆ ಬಿಜೆಪಿ ಸರಕಾರದ ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿಯವರ ಕಾಲದಲ್ಲಿ ಮಂಜೂರು ಮಾಡಿದ ಅನೇಕ ಕಾಮಗಾರಿಗಳಿಗೆ ಶಾಸಕರಾದ ಮೇಲೆ ಭೂಮಿ ಪೂಜೆ ಮಾಡಿದ್ದೀರಿ. ಆದರೆ, ಒಮ್ಮೇಯೂ ಅವರ ಹೆಸರು ಹೇಳಲಿಲ್ಲ. ಮಾಡಿದವರ ಹೆಸರು ಹೇಳಬೇಕು ಎನ್ನುವ ನೀವು ಮಿನಿ ವಿಧಾನಸೌಧ, ಬಸ್‌ ನಿಲ್ದಾಣ ಉದ್ಘಾಟನೆ ಸಮಾರಂಭದಲ್ಲಿ ಅವರ ಹೆಸರು ಹೇಳಬಹುದಿತ್ತು ಎಂದರು.

ಘಟನೆ ಹೆಚ್ಚಿಸಿಕೊಂಡಿದ್ದಾರೆ

ಕೂಡಗಿ ವಿದ್ಯುತ್ ಸ್ಥಾವರ ಕೇಂದ್ರ ಇಂಧನ ಸಚಿವ ಸುಶೀಲಕುಮಾರ ಸಿಂಧೆ ಅವರು ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್‌ ಸರ್ಕಾರದ ಅಂದಿನ ಪ್ರಧಾನಮಂತ್ರಿ ಮನಮೋಹನ್‌ಸಿಂಗ್‌ ಅವರ ಕಾಲು ಹಿಡಿದು ಮಂಜೂರು ಮಾಡಿಸಿದ್ದೆ ಎಂದು ಹಲವು ಭಾರಿ ಸಂಸದರು ವೇದಿಕೆ ಮೇಲೆಯೇ ಹೇಳಿದ್ದಾರೆ. ಈ ಮೂಲಕ ಅವರು ಘನತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಿರಿಯರಿಗೆ ಅಗೌರವ ತೋರುವ ಕಾರ್ಯ ನಡೆಯಬಾರದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಮುಖಂಡರಾದ ಹಣಮಂತರಾಯಗೌಡ ಪಾಟೀಲ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ, ದೇವೇಂದ್ರ ಕುಂಬಾರ, ಮಹಾದೇವ ರಜಪೂರತ ಇತರರು ಇದ್ದರು.

ಕೋಟ್‌

ಪುರಸಭೆ ಚುನಾವಣೆಯಲ್ಲಿ ಹಣ, ಅಧಿಕಾರ ಬಳಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, 2019ರಲ್ಲಿ ಪುರಸಭೆ ಸದಸ್ಯರ ಚುನಾವಣೆ ನಡೆದಾಗ ಶಾಸಕರಿದ್ದ ತಮಗೆ ಜನರು ಬಹಳಷ್ಟು ಕಾಂಗ್ರೆಸ್‌ ಪಕ್ಷದ ಸದಸ್ಯರನ್ನು ಗೆಲ್ಲಿಸಲಿಲ್ಲ. ಬಿಜೆಪಿ ಸದಸ್ಯರನ್ನು ಹೆಚ್ಚು ಗೆಲ್ಲಿಸಿದ್ದರು. ಗೆರೆ ಕೊರೆದು ರಾಜಕಾರಣ ಮಾಡುವವರು ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ನೋಡೋಣ.

ಕಾಸುಗೌಡ ಬಿರಾದಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ