ಯತ್ನಾಳ ವಿರುದ್ಧ ಲಿಂಗಾಯತ ಸಂಘಟನೆಗಳ ಪ್ರತಿಭಟನೆ

| Published : Dec 08 2024, 01:19 AM IST

ಯತ್ನಾಳ ವಿರುದ್ಧ ಲಿಂಗಾಯತ ಸಂಘಟನೆಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣನವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿವಿಧ ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿಶ್ವಗುರು ಬಸವಣ್ಣನವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ವಿವಿಧ ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ರಾಷ್ಟ್ರೀಯ ಬಸವದಳ, ಲಿಂಗಾಯತ ಸಂಘಟನೆ, ಜಾಗತಿಕ ಲಿಂಗಾಯತ ಮಹಾಸಭಾ, ಚನ್ನಬಸವ ಫೌಂಡೇಶನ್, ಬಸವ ಕಾಯಕ ಜೀವಿಗಳ ಸಂಘ, ಹಡಪದ ಸಮಾಜದ ವತಿಯಿಂದ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಯತ್ನಾಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ, ನೂಕಾಟ, ತಳ್ಳಾಟ ಕೂಡ ನಡೆಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಶಾಸಕ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸತ್ಯಕ್ಕ ಮಾತಾಜಿ ಮಾತನಾಡಿ, ಬಸವಣ್ಣನವರು ಹೊಳೆಗೆ ಹಾರಿದ್ದನ್ನು ಯತ್ನಾಳ​ ನೋಡಿದ್ದರೇ? ಹೀಗೆ ಹೇಳುವ ಯತ್ನಾಳ​ ಇದಕ್ಕೆ ಸಾಕ್ಷಿ ನೀಡಬೇಕು. ಬಸವಣ್ಣ ಹೇಡಿ ಆಗಿರಲಿಲ್ಲ. ನಾಳೆ ಬಪ್ಪುದು ಇಂದೇ ಬರಲಿ, ಇಂದು ಬಪ್ಪುದು ನಮಗೆ ಈಗಲೇ ಬರಲಿ ಎಂದವರು. ಅಂಥವರ ಬಗ್ಗೆ ಯಾವುದೇ ಆಧಾರವಿಲ್ಲದೆ ಶಾಸಕ ಯತ್ನಾಳ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಶಾಸಕ ಸ್ಥಾನದಿಂದ ಯತ್ನಾಳ​ ಅವರನ್ನು ತಕ್ಷಣ ವಜಾಗೊಳಿಸಬೇಕು. ಇನ್ಮುಂದೆ ಲಿಂಗಾಯತ ಶಾಸಕ ಎಂದು ಅವರನ್ನು ಯಾರೂ ಕರೆಯಬಾರದು. ವಿನಾಕಾರಣ ಹೇಳಿಕೆ ನೀಡುವುನ್ನು ಬಿಟ್ಟು, ವಚನ ಸಾಹಿತ್ಯ ಓದಿ ಬುದ್ಧಿ ಕಲಿಯಲಿ ಎಂದು ಒತ್ತಾಯಿಸಿದರು.

ಲಿಂಗಾಯತ ಮುಖಂಡ ಶಂಕರ ಗುಡಸ ಮಾತನಾಡಿ, ಯತ್ನಾಳ​ಗೆ ಲಿಂಗಾಯತ ಧರ್ಮದ ಸಂಸ್ಕಾರ, ವಚನ ಸಾಹಿತ್ಯದ ಗಂಧ ಗಾಳಿಯೂ ಗೊತ್ತಿಲ್ಲ. ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡಿದ ಪ್ರತಿಯೊಬ್ಬರೂ ಹಾಳಾಗಿ ಹೋಗಿದ್ದಾರೆ.‌ ಅಧಿವೇಶನದೊಳಗೆ ಕ್ಷಮೆ ಕೇಳದಿದ್ದರೆ ಮುಂದೆ ತೀವ್ರ ಹೋರಾಟ ಮಾಡಬೇಕಾಗುತ್ತದೆ. ಕರ್ನಾಟಕದ ಸಾಂಸ್ಕೃತಿಕ‌ ನಾಯಕ‌ ಬಸವಣ್ಣನವರಿಗೆ ಅಪಮಾನ ಮಾಡಿರುವ ಯತ್ನಾಳ ವಿರುದ್ಧ ರಾಜ್ಯ ಸರ್ಕಾರ ಸ್ವ-ಇಚ್ಛೆಯಿಂದ ಕೇಸ್ ದಾಖಲಿಸಬೇಕು. ಶಾಸಕ‌ ಸ್ಥಾನ ರದ್ದುಪಡಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಲಿಂಗಾಯತ ಮುಖಂಡರಾದ ಬಸವರಾಜ ರೊಟ್ಟಿ, ಅಶೋಕ ಬೆಂಡಿಗೇರಿ, ಕೆ.ಬಸವಪ್ರಸಾದ, ಮಹಾಂತೇಶ ಗುಡಸ, ಈರಣ್ಣ ಧೇಯನ್ನವರ, ಸೂರ್ಯಕಾಂತ ಭಾಂವಿ, ಪ್ರೇಮ್ ಚೌಗುಲಾ, ವಂದನಾ ಬಾಬಾನಗರ, ಸುಶೀಲಾ ಲಿಂಗಾಯತ ಇತರರು ಪಾಲ್ಗೊಂಡಿದ್ದರು.