.ಎಮ್ಮಿಗನೂರಿನಲ್ಲಿ ರಸಗೊಬ್ಬರ ಖರೀದಿಸಲು ಬಂದ ರೈತರಿಗೆ ಲಿಂಕ್ ಉತ್ಪನ್ನಗಳನ್ನು ಖರೀದಿಸುವಂತೆ ಒತ್ತಡ ಹೇರಲಾಗಿದೆ
ಕಂಪ್ಲಿ: ರೈತರಿಗೆ ರಸಗೊಬ್ಬರ ಮಾರಾಟ ಮಾಡುವ ಸಂದರ್ಭದಲ್ಲಿ ಅಗತ್ಯವಿಲ್ಲದ ಲಿಂಕ್ ಗೊಬ್ಬರ ಅಥವಾ ಇತರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುತ್ತಿರುವ ರಸಗೊಬ್ಬರ ವ್ಯಾಪಾರಿಗಳ ವಿರುದ್ಧ ಕೃಷಿ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ವಿ. ವೀರೇಶ್ ಒತ್ತಾಯಿಸಿದರು.ಎಮ್ಮಿಗನೂರಿನಲ್ಲಿ ರಸಗೊಬ್ಬರ ಖರೀದಿಸಲು ಬಂದ ರೈತರಿಗೆ ಲಿಂಕ್ ಉತ್ಪನ್ನಗಳನ್ನು ಖರೀದಿಸುವಂತೆ ಒತ್ತಡ ಹೇರಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈತರು ಹಾಗೂ ರಸಗೊಬ್ಬರ ವ್ಯಾಪಾರಿಯ ನಡುವೆ ಬುಧವಾರ ವಾಗ್ವಾದ ನಡೆಯಿತು. ಈ ವೇಳೆ ರೈತ ಸಂಘದ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ. ವೀರೇಶ್, ವೀರಾರೆಡ್ಡಿ ಎಂಬ ರೈತ ಯೂರಿಯಾ ರಸಗೊಬ್ಬರ ಖರೀದಿಸಲು ಬಂದಾಗ ಲಿಂಕ್ ಉತ್ಪನ್ನಗಳನ್ನು ಖರೀದಿಸಬೇಕು ಎಂದು ವ್ಯಾಪಾರಿ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದರು. ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ನೇರವಾಗಿ ನೀಡುವ ಬದಲು ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಲು ಒತ್ತಾಯಿಸುವುದು ನಿಯಮಬಾಹಿರ. ಇಂತಹ ಕ್ರಮಗಳಿಂದ ರೈತರಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಹೇಳಿದರು.ಕೆಲವು ವ್ಯಾಪಾರಿಗಳು ಕೃಷಿ ಇಲಾಖೆ ಅಧಿಕಾರಿಗಳ ಕುರಿತು ಅವಹೇಳನಕಾರಿ ಪದಗಳನ್ನು ಬಳಸಿರುವ ಆರೋಪವೂ ಕೇಳಿಬಂದಿದೆ. ಜೊತೆಗೆ ರೈತರು ದೊಡ್ಡ ಪ್ರಮಾಣದಲ್ಲಿ ಯೂರಿಯಾ ಸಂಗ್ರಹ ಮಾಡಿಟ್ಟಿದ್ದಾರೆ ಎಂಬ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಈ ಎಲ್ಲ ವಿಷಯಗಳನ್ನು ಸಂಬಂಧಿತ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ರೈತರು ಸಂಘಟಿತರಾಗಿ ಲಿಂಕ್ ಮಾರಾಟದ ವಿರುದ್ಧ ಧ್ವನಿ ಎತ್ತಬೇಕು. ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ರೈತರು ಕೃಷಿ ಅಧಿಕಾರಿಗಳ ಸಲಹೆ ಮತ್ತು ಶಿಫಾರಸಿನಂತೆ ಮಾತ್ರ ರಸಗೊಬ್ಬರ ಖರೀದಿಸಬೇಕು. ಅಂಗಡಿಗಳಿಂದ ನೀಡುವ ಅನಗತ್ಯ ಒತ್ತಡಕ್ಕೆ ಮಣಿಯಬಾರದು ಎಂದು ತಿಳಿಸಿದರು.ಆರೋಪಗಳಿಗೆ ಪ್ರತಿಕ್ರಿಯಿಸಿದ ರಸಗೊಬ್ಬರ ವ್ಯಾಪಾರಿ ರಾಮಕೃಷ್ಣ ರಾಜು, ಯೂರಿಯಾ ವಿತರಣೆ ವೇಳೆ ಕಂಪನಿಗಳಿಂದಲೇ ನಾನ್-ಯೂರಿಯಾ ಉತ್ಪನ್ನಗಳನ್ನು ಲಿಂಕ್ ಮಾಡಿ ನೀಡಲಾಗುತ್ತದೆ. ಆ ಕಾರಣದಿಂದ ರೈತರಿಗೆ ಅದರ ಬಗ್ಗೆ ಮಾಹಿತಿ ನೀಡಿ ಮಾರಾಟ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ರೈತರನ್ನು ಬಲವಂತವಾಗಿ ಲಿಂಕ್ ಉತ್ಪನ್ನ ಖರೀದಿಸಲು ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತ ಸಂಘದ ನಗರ ಅಧ್ಯಕ್ಷ ಕೊಟ್ಟೂರು ರಮೇಶ್, ರೈತರಾದ ಗುರು, ಕಾಗೆ ಈರಣ್ಣ, ಮರಿಸ್ವಾಮಿ, ಶರಣಬಸಪ್ಪ, ಸಣ್ಣ ಜಡೆಪ್ಪ, ಮಂಜುನಾಥ, ತಿಪ್ಪಣ್ಣ, ಏಳುಬೆಂಚಿ ಶರಣಬಸವರಾಜ ಇದ್ದರು.