ಸುಸ್ಥಿದಾರರ ಪಟ್ಟಿಯನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂಬುದಾಗಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ 2024-25 ನೇ ಸಾಲಿನ ಕಟ್ಟಡ ಮತ್ತು ನೀರಿನ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕರು ಈ ತಿಂಗಳ ಒಳಗಾಗಿ ಬಾಕಿಯನ್ನು ಪಾವತಿಸಿ ರಶೀದಿಯನ್ನು ಪಡೆದುಕೊಳ್ಳದಿದ್ದಲ್ಲಿ ಸುಸ್ಥಿದಾರರ ಪಟ್ಟಿಯನ್ನು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂಬುದಾಗಿ ಗುಡ್ಡೆಹೊ ಸೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ತೀರ್ಮಾನಿಸಲಾಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷ ಸೌಮ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅಧ್ಯಕ್ಷರು, ಐದು ವರ್ಷಗಳ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಈ ನಿಟ್ಟಿನಲ್ಲಿ ಗ್ರಾಮಸ್ಥರ ಸಹಕಾರವು ಸಹ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಸಾರ್ವಜನಿಕರು ಕಂದಾಯ ಪಾವತಿ ಮಾಡಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಕೈಜೋಡಿಸಬೇಕಾಗಿ ಕೋರಿದರು.ಅತ್ತೂರು ಗ್ರಾಮದ ರವಿ ಅವರು ಮಾತನಾಡಿ, ನೀರಾವರಿ ಇಲಾಖೆಯಿಂದ ಚೆಸ್ಕಾಂಗೆ ಅಂದಾಜು 68 ಲಕ್ಷ ರುಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಕಾಮಗಾರಿಗಳು ಅಪೂರ್ಣಗೊಂಡಿದ್ದು, ಐದು ವರ್ಷಗಳಾದರೂ ಸಹ ಕಾಮಗಾರಿಗಳ ವಿವರವನ್ನು ಗ್ರಾಮಸ್ಥರಿಗೆ ಚೆಸ್ಕಾಂನಿಂದ ನೀಡುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡುವಂತೆ ಚೆಸ್ಕಾಂ ಕಿರಿಯ ಅಭಿಯಂತರರನ್ನು ಅಗ್ರಹಿಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಗಳ ಮೇಲಿನ ಜಂಗಲ್ ಕಟಿಂಗ್ ಕಾರ್ಯ ತುರ್ತಾಗಿ ಆಗಬೇಕು. ಇದರಿಂದಾಗಿ ಆಗಾಗ ಪವರ್ ಕಟ್ ಆಗುತ್ತಿದ್ದು ಗ್ರಾಮಸ್ಥರಿಗೆ ಅನಾನುಕೂಲವಾಗುತ್ತಿರುವ ಬಗ್ಗೆ ಸಾರ್ವಜನಿಕರು ತಿಳಿಸಿದರು. ಚೆಸ್ಕಾಂ ನಿಂದ ಗಡಿಭಾಗದ ಹೊರ ಜಿಲ್ಲೆಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು ಸಂಪರ್ಕವನ್ನು ಕೂಡಲೇ ಕಡಿತಗೊಳಿಸಿ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡುವಂತೆ ಗ್ರಾಮಸ್ಥರಾದ ಜಗ ಅವರು ಆಗ್ರಹಿಸಿದರು.

ನೀರಾವರಿ ಇಲಾಖೆಯಿಂದ ಚಿಕ್ಲಿಹೊಳೆ ಕಾಲುವೆ ತುಂಬಿರುವ ಹೂಳನ್ನು ತೆಗೆಯುವುದು ಹಾಗೂ ಕಾಡನ್ನು ಕಡಿದು ಸ್ವಚ್ಛಗೊಳಿಸುವ ಕೆಲಸ ನಿರಂತರವಾಗಿ ಆಗಬೇಕು ಸಾರ್ವಜನಿಕರು ಚಾನಲ್ ಏರಿಯ ಮೇಲೆ ರಸ್ತೆಗಳಲ್ಲಿ ಓಡಾಡುವುದು ದುಸ್ತರವಾಗುತ್ತಿದೆ ಎಂಬುದಾಗಿ ಗ್ರಾಮಸ್ಥರು ಆಗ್ರಹಿಸಿದರು ಬಹಳಷ್ಟು ಪ್ರದೇಶಗಳಲ್ಲಿ ಚಾನಲ್ ಗಳ ಅಗತ್ಯವೇ ಇಲ್ಲ. ಚಾನೆಲ್ ಗಳನ್ನು ಮುಚ್ಚುವುದು ಒಳಿತು ಎಂಬುದಾಗಿ ಸಹ ಅಭಿಪ್ರಾಯ ಕೇಳಿ ಬಂತು. ಆದರೆ ನೀರಾವರಿ ಪ್ರದೇಶದಲ್ಲಿ ಯಾವುದೇ ಒಬ್ಬ ಕೃಷಿಕ ಇದ್ದರೂ ಸಹ ಆತನಿಗೆ ಅಗತ್ಯ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ ಎಂಬುದಾಗಿ ನೀರಾವರಿ ನಿಗಮದ ಕಿರಿಯ ಅಭಿಯಂತರರಾದ ಕಿರಣ್ ರವರು ತಿಳಿಸಿದರುಮರು ಸರ್ವೇ ನಡೆಸಲು ಆಗ್ರಹ:

ಕಂದಾಯ ಇಲಾಖೆಯಿಂದ ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ರವರು ಹಾಜರಿದ್ದು ಕಂದಾಯ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಚಿಕ್ಕಬೆಟಗೆರಿ ಗ್ರಾಮದಲ್ಲಿ ಸ್ಮಶಾನಕ್ಕೆಂದು ಗುರುತಿಸಿ ಹಸ್ತಾಂತರಿಸಿರುವ ಜಾಗವು ಹಾಗೂ ಸ್ಮಶಾನಕ್ಕಾಗಿ ಮಂಜೂರಾಗಿರುವ ಜಾಗವು ಬೇರೆ ಬೇರೆಯಾಗಿರುತ್ತದೆ. ಈ ಬಗ್ಗೆ ಮರು ಸರ್ವೇ ನಡೆಸಬೇಕೆಂದು ಚಿಕ್ಕಬೆಟಗೆರಿ ಗ್ರಾಮದ ಅನಿತಾ ರವರು ಆಗ್ರಹಿಸಿದರು ಅತ್ತೂರು ಗ್ರಾಮವನ್ನು ಗ್ರಾಮ ಠಾಣ ಎಂಬುದಾಗಿ ಘೋಷಿಸಿ ಎರಡು ವರ್ಷ ಕಳೆದರೂ ಸಹ ಇದುವರೆಗೂ ಪ್ರದೇಶವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸದೆ ಇರುವುದರಿಂದ ನಾಗರಿಕರಿಗೆ ಜಾಗದ ದಾಖಲಾತಿಗಳನ್ನು ಪಡೆದುಕೊಳ್ಳಲು ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮ ಸಭೆಯ ಗಮನಕ್ಕೆ ತರಲಾಯಿತು. ಈ ಬಗ್ಗೆ ಸಂತೋಷ ಅವರು ಮಾತನಾಡಿ ಕೂಡಲೇ ಸರ್ವೆ ಕಾರ್ಯ ಕೈಗೊಂಡು ಜಾಗವನ್ನು ಪಂಚಾಯಿತಿಗೆ ಹಸ್ತಾಂತರಿಸುವುದಾಗಿ ತಿಳಿಸಿದರು

ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಅಧಿಕಾರಿ ಫಿರೋಜ್ ಅಹಮದ್ ಅವರು ಉಪಸ್ಥಿತರಿದ್ದು ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ರಾಕೇಶ್ ರವರು ಕ್ಷಯರೋಗ ಹಾಗೂ ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರುಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಆಗಮಿಸಿದ ರವಿ ಅವರು ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದ್ದು ವಿವಿಧ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಉತ್ತಮ ಶಿಕ್ಷಕ ವರ್ಗ ಕೆಲಸ ಮಾಡುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಕೋರಿದರು. ಸ್ವಚ್ಛತೆಗೆ ಪ್ರಥಮ ಆದ್ಯತೆ:

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಹಿಂದಿನ ಗ್ರಾಮ ಸಭೆಯ ಅನುಪಾಲನ ವರದಿ ಮಂಡಿಸಿದರು. ಹಿಂದಿನ ಗ್ರಾಮ ಸಭೆಯಲ್ಲಿ ಚರ್ಚಿಸಿದಂತೆ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಸಲುವಾಗಿ ಈಗಾಗಲೇ ಜಾಗವನ್ನು ಗುರುತಿಸಿ ಯೋಜನಾ ಪ್ರಾಧಿಕಾರದಿಂದ ಬಡಾವಣೆ ನಕ್ಷೆಗೆ ಅನುಮೋದನೆ ಪಡೆಯಲಾಗಿರುತ್ತದೆ. ಸರ್ಕಾರದಿಂದ ಅನುಮೋದನೆ ದೊರೆತನಂತರ ಫಲಾನುಭವಿಗಳ ಆಯ್ಕೆಯನ್ನು ಗ್ರಾಮ ಸಭೆಯಲ್ಲಿ ಮಾಡುವುದಾಗಿ ತಿಳಿಸಿದರು. ಬಸವನಹಳ್ಳಿ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ಪ್ರಗತಿಯಲ್ಲಿದ್ದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುವಂತೆ ಕೋರಿದರುಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಅನ್ನು ನಿಷೇಧಿಸಲಾಗಿದ್ದು ಏಕಬಳಕೆ ಪ್ಲಾಸ್ಟಿಕ್ ನ ಬಳಕೆ ಹಾಗೂ ಮಾರಾಟ ಎರಡು ಕಂಡು ಬಂದಲ್ಲಿ ಸೂಕ್ತ ದಂಡ ವಿಧಿಸಲಾಗುವುದು ಎಂಬುದಾಗಿ ಗ್ರಾಮ ಸಭೆಯಲ್ಲಿ ತೀರ್ಮಾನಿಸಲಾಯಿತು

ಶಿಕ್ಷಣ ಇಲಾಖೆಯ ಮಂಜೇಶ್ ರವರು ನೋಡಲ್ ಅಧಿಕಾರಿ ಸಭೆ ನಡೆಸಿಕೊಟ್ಟರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ಅವರು ಉಪಸ್ಥಿತರಿದ್ದರು. ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಹಾಗೂ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.ಗ್ರಾಮ ಪಂಚಾಯಿತಿ ಸದಸ್ಯೆ ಉಷಾ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಕುಮಾರಸ್ವಾಮಿ ಅವರು ಸ್ವಾಗತಿಸಿ ವಂದಿಸಿದರು.