ಬದುಕಿನ ದಾರಿ, ಜವಾಬ್ದಾರಿ ತರಿಸುವ ಉಪನ್ಯಾಸ ಕೇಳಿ

| Published : Nov 06 2024, 12:39 AM IST

ಸಾರಾಂಶ

134 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘವು ಚರಿತ್ರಾರ್ಹ ಕಾರ್ಯಕ್ರಮ ಮಾಡುತ್ತಿದ್ದು ಪ್ರತಿಯೊಂದು ವಿಶ್ವವಿದ್ಯಾಲಯಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಯುವ ಜನಾಂಗಕ್ಕೆ ಮಾದರಿಯಾಗುವ ಇಂತಹ ಕಾರ್ಯಕ್ರಮ ನಡೆಯಬೇಕು.

ಧಾರವಾಡ:

ವಿದ್ಯಾರ್ಥಿಗಳು ಹಾಗೂ ಯುವ ಜನಾಂಗವು ಶಾಲಾ-ಕಾಲೇಜುಗಳ ಅಧ್ಯಾಪಕರ ಉಪನ್ಯಾಸಗಳ ಜತೆಗೆ ಬದುಕಿನ ದಾರಿ ಕಲಿಸುವ, ಜವಾಬ್ದಾರಿ ತರಿಸುವ ಹೊರಗೆ ನಡೆಯುವ ಉಪನ್ಯಾಸಗಳನ್ನು ಗಂಭೀರವಾಗಿ ಆಲಿಸಬೇಕು ಎಂದು ನಾಡೋಜ ಡಾ. ಹಂಪ ನಾಗರಾಜಯ್ಯ ಸಲಹೆ ನೀಡಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು 59ನೇ ರಾಜ್ಯೋತ್ಸವ ನಿಮಿತ್ತ ನವೆಂಬರ್‌ ತಿಂಗಳು ಆಯೋಜಿಸಿರುವ ಧರೆಗೆ ದೊಡ್ಡವರು ವಿಚಾರ ಸಂಕಿರಣ ಮಾಲಿಕೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, 134 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘವು ಚರಿತ್ರಾರ್ಹ ಕಾರ್ಯಕ್ರಮ ಮಾಡುತ್ತಿದ್ದು ಪ್ರತಿಯೊಂದು ವಿಶ್ವವಿದ್ಯಾಲಯಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಯುವ ಜನಾಂಗಕ್ಕೆ ಮಾದರಿಯಾಗುವ ಇಂತಹ ಕಾರ್ಯಕ್ರಮಗಳನ್ನು ಮಾಡಲು ತಿಳಿಸಿದರು.

ಶಿಕ್ಷಣದ ಹಂತದಲ್ಲಿ ಕುವೆಂಪು ಹಾಗೂ ಇತರ ಅಧ್ಯಾಪಕರಿಂದ ಕಲಿತಿರುವುದರ ಜತೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ ಹಾಗೂ ಇತರ ಸಾಹಿತಿಗಳೊಂದಿಗಿನ ಒಡನಾಟ ಜೀವನದ ಪಾಠ ಕಲಿಸಿದೆ. ಜವಾಬ್ದಾರಿ ಕಲಿಸಿದೆ ಎಂದ ಹಂಪನಾ, ತಮಗೆ 30ನೇ ವಯಸ್ಸಿನಲ್ಲಿಯೇ ಮಾಸ್ತಿ ಅವರು ಜೀವನ ಪತ್ರಿಕೆಯ ಸಂಪಾದಕ ಸ್ಥಾನದ ಜವಾಬ್ದಾರಿ ನೀಡಿದ ಸಂಗತಿಯನ್ನು ಸ್ಮರಿಸಿಕೊಂಡರು.

ಹಂಪ ನಾಗರಾಜಯ್ಯ ಜೀವನ ಕುರಿತು ಮಾತನಾಡಿದ ಡಾ. ಭೈರಹೊಂಗಲ ರಾಮೇಗೌಡ, ಹಂಪನಾ ಅವರ ವ್ಯಕ್ತಿತ್ವ-ಬದುಕು ಬಹು ಆಯಾಮದ್ದಾಗಿದೆ. ಹಿಡಿತಕ್ಕೆ ಸಿಗದ ಘನತೆ ಹೊಂದಿದೆ. ಐದು ದಶಕಗಳ ಕಾಲದಿಂದ ಅವರ ಶಿಷ್ಯನಾಗಿ ಅವರ ವ್ಯಕ್ತಿತ್ವ ಬಲ್ಲವನಾಗಿದ್ದು, 88ನೇ ಇಳಿ ವಯಸ್ಸಲ್ಲೂ ಚೈತನ್ಯ, ಉತ್ಸಾಹ, ಹುಮ್ಮಸ್ಸು, ತಾರುಣ್ಯದ ಕಾಂತಿ ಅವರನ್ನು ಆವರಿಸಿಕೊಂಡಿದೆ. ಈ ವಯಸ್ಸಲ್ಲೂ ದೇಶ-ವಿದೇಶಗಳಲ್ಲಿ ಉಪನ್ಯಾಸ ನೀಡುತ್ತಿದ್ದು ಕನ್ನಡಿಗರ ಸೌಭಾಗ್ಯ ಎಂದರು.

ಆಶಯ ನುಡಿಗಳನ್ನು ಹೇಳಿದ ಪ್ರಾಚಾರ್ಯ ಡಾ. ಎಂ.ಡಿ. ವಕ್ಕುಂದ, ಶಿಕ್ಷಣದಲ್ಲೂ ರಾಜಕಾರಣ, ಕೋಮುವಾದಿ ತುಂಬಿಕೊಂಡಿದ್ದು ಮಕ್ಕಳ ಮನಸ್ಸು ರೋಗಗ್ರಸ್ತವಾಗಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷ-ಅಸೂಯೆ ಬಿತ್ತಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘವು ಆಯೋಜಿಸಿರುವ ಈ ಕಾರ್ಯಕ್ರಮ ಯುವ ಮನಸ್ಸುಗಳಿಗೆ ಅಂಟಿಕೊಂಡಿರುವ ರೋಗ ನಿವಾರಣೆ ಮಾಡಲಿ ಎಂಬ ಆಶಯ ಹೊಂದಲಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಭವಿಷ್ಯದ ಜನಾಂಗಕ್ಕೆ ಕನ್ನಡದ ಅಸ್ಮಿತೆ ತಿಳಿಸಲು, ಕನ್ನಡದ ಇತಿಹಾಸ, ಕನ್ನಡಕ್ಕೆ ದುಡಿದವರ ಬಗ್ಗೆ ಮಾಹಿತಿಯನ್ನು ಯುವ ಜನಾಂಗಕ್ಕೆ ವರ್ಗಾಯಿಸಲು ಧರಗೆ ದೊಡ್ಡವರು. ಶಿಕ್ಷಣದ ಕಲಿಕೆಯು ಬರೀ ಅಂಕ ಗಳಿಕೆ, ಉದ್ಯೋಗಕ್ಕೆ ಮಾತ್ರವಲ್ಲದೇ ವ್ಯಕ್ತಿಯ ಸರ್ವಾಂಗೀಣ ಉನ್ನತಿಗೆ ಸಾಧನ ಆಗುವ ಕಲಿಕೆ ಇರಲಿ ಎಂಬುದು ಸಹ ಉಪನ್ಯಾಸಗಳ ಉದ್ದೇಶ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು. ಡಾ. ಸುಂಕಂ ಗೋವರ್ಧನ ಹಂಪನಾ ಅವರ ಕೊಡುಗೆ ಕುರಿತು ಮಾತನಾಡಿದರು. ಡಾ. ಜಿನದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿದರು. ಜೆಎಸ್ಸೆಸ್‌ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕರ್ನಾಟಕದ ಸಾಂಸ್ಕೃತಿಕ ಘನತೆ ತಂದುಕೊಟ್ಟ, 134 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ಶಾಶ್ವತ ಆರ್ಥಿಕ ಮಾನ್ಯತೆ ನೀಡದೇ ಇರುವುದು ಬೇಸರ ಮೂಡಿಸಿದೆ. ಸಂಘವು ಕನ್ನಡ ಉಳಿವಿಗಾಗಿ ಶ್ರಮಿಸುತ್ತಿದ್ದು, ಹಿರಿಯರನ್ನು ಗೌರವಿಸುವ ಹಾಗೂ ಕನ್ನಡ ನಾಡು ಕಟ್ಟುವ ಕೈಂಕರ್ಯ ಮಾಡುತ್ತಿದ್ದು, ಹಿರಿಯರಾದ ಹಂಪನಾ ಅವರು ಸರ್ಕಾರದ ಮೇಲೆ ಒತ್ತಡ ತಂದು ಸಂಘಕ್ಕೆ ಶಾಶ್ವತ ಅನುದಾನ ಒದಗಿಸುವ ಪ್ರಯತ್ನ ಮಾಡಲಿ ಎಂದು ಸಾಹಿತಿ ಎಂ.ಡಿ. ವಕ್ಕುಂದ ಹೇಳಿದರು.