ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಸ್ತುತ ವಿದ್ಯಾರ್ಥಿಗಳು ಸುಗಮ ಸಂಗೀತ ಕೇಳೋದರಿಂದ, ಮನೋಲ್ಲಾಸ ಮತ್ತು ಪಠ್ಯ ವಿಷಯಗಳ ಜ್ಞಾಪಕ ಶಕ್ತಿ ವೃದ್ದಿಸುತ್ತದೆ ಎಂದು ಸುಗಮ ಸಂಗೀತ ಪರಿಷತ್ತು ಮೈಸೂರು ಜಿಲ್ಲಾಧ್ಯಕ್ಷ ಡಾ.ನಾಗರಾಜು ವಿ.ಭೈರಿ ಅಭಿಪ್ರಾಯಪಟ್ಟರು.ನಗರದ ಡಿ.ದೇವರಾಜ ಅರಸು ಭವನದಲ್ಲಿ ಆಯೋಜಿಸಿದ್ದ, ನಾಡಿನ ಸುಪ್ರಸಿದ್ಧ ಕವಿಗಳಾದ ಕೆ.ಎಸ್. ನರಸಿಂಹಸ್ವಾಮಿ, ದ.ರಾ. ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಕೆ.ಎಸ್.ನಿಸಾರ್‌ಅಹಮದ್, ಗೋಪಾಲಕೃಷ್ಣ ಅಡಿಗ, ಪ್ರೊ.ದೊಡ್ಡರಂಗೇಗೌಡ ಹಾಗೂ ಡಾ. ಸಿದ್ದಲಿಂಗಯ್ಯರವರ ಜನ್ಮ ದಿನಾಚರಣೆಯ ಅಂಗವಾಗಿ ಮರೆಯಲಾಗದ ಮಹನೀಯರು ಕವಿಗಳ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪರೀಕ್ಷಾ ದಿನಗಳು ಪ್ರಾರಂಭವಾಗಿದೆ. ಈ ದಿನಗಳು ವಿದ್ಯಾರ್ಥಿಗಳಿಗೆ ಅತ್ಯಮೂಲ್ಯ ಕ್ಷಣಗಳಾಗಿವೆ. ನಿರಂತರ ಓದಿನೊಂದಿಗೆ ಮನೋಲ್ಲಾಸ ಮತ್ತು ಜ್ಞಾಪಕ ಶಕ್ತಿ ಹೆಚ್ಚಲಿಕ್ಕಾಗಿ ಸುಗಮ ಸಂಗೀತವನ್ನು ಆಲಿಸಿ, ನಂತರ ಪಠ್ಯ ಓದಿ ಮನನವಾಗುತ್ತವೆ. ಹೊಸ ಹೊಸ ಆಲೋಚನೆಗಳು ಬೆಳವಣಿಗೆ ಕಾಣುತ್ತವೆ ಎಂದು ನುಡಿದರು.ಸಿನಿಮಾ ಹಾಡುಗಳನ್ನು ಕೇಳುವುದು ಮತ್ತು ನೋಡುವುದನ್ನು ಪರೀಕ್ಷಾ ದಿನಗಳಲ್ಲಿ ದೂರವಿಡಿ, ಕ್ರೀಡೆಯನ್ನು ಅಭ್ಯಾಸ ಮಾಡಿ ಮತ್ತು ಸುಗಮ ಸಂಗೀತ ಕೇಳಿ. ನಿರಂತರವಾಗಿ ಎಲ್ಲಾ ಪಠ್ಯಗಳನ್ನು ಶ್ರದ್ಧೆಯಿಂದ ಓದಿ ಹಾಗೂ ಬರೆಯಿರಿ ಆಗ ಉತ್ತಮ ಅಂಕ ನಿಮ್ಮದಾಗುತ್ತದೆ. ಭವಿಷ್ಯಕ್ಕೆ ಹೊಸ ಬೆಳಕು ಅರಳುತ್ತದೆ ಎಂದು ಸಲಹೆ ನೀಡಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಕೆ. ಮಂಜುಳಾ ಮಾತನಾಡಿ, ಇವತ್ತಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕವಿಗಳ ಪರಿಚಯ ಮತ್ತು ಸುಗಮ ಸಂಗೀತ ಮೂಲಕ ಗೀತೆಗಳ ಸಾರ ಅವಶ್ಯವಿದೆ, 10 ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಮಾತ್ರ ಕವಿಗಳನ್ನು ಓದುತ್ತಾರೆ, ಗೀತೆಗಳನ್ನು ಕಲಿಯುತ್ತಾರೆ, ಆದರೆ ಕಾಲೇಜು ಹಂತದಲ್ಲಿ ನಾಡಿನ ಕವಿಗಳ ಪರಿಚಯ ಕಡಿಮೆಯಾಗಿಬಿಡುತ್ತದೆ ಎಂದು ನುಡಿದರು.ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಕೆ.ಟಿ. ಹನುಮಂತು ಮಾತನಾಡಿ, ಪರೀಕ್ಷಾ ಸಮಯದಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಸುಗಮ ಸಂಗೀತ ಆಲಿಸಿ ಸಹಕಾರಿಯಾಗುತ್ತದೆ. ವೈದ್ಯಲೋಕವು ಸಂಗೀತ ಥೆರಪಿಯಿಂದ ಸಾಕಷ್ಟು ರೋಗಳನ್ನು ಗುಣಪಡಿಸುವ ವಿಧಾನಗಳನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕವಿಗಳು ರಚಿಸದ ಗೀತೆಗಳನ್ನು ಸುಗಮ ಸಂಗೀತ ಗಾಯಕ, ಡೇವಿಡ್ ಪ್ರತಿಭಾಂಜಲಿ, ಶಂಕರ್, ಸಿಂಚನ ಗೋಪಾಲ್, ದಿಶಾ ಜೈನ್, ನೇತ್ರಾವತಿ, ವೃಂದಕಾಮತ್ರ ಅವರು ಹಾಡಿ ರಂಜಿಸಿದರು.ವೇದಿಕೆಯಲ್ಲಿ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಡೇವಿಡ್ ಪ್ರತಿಭಾಂಜಲಿ, ಹಿರಿಯ ಪತ್ರಕರ್ತ ನವೀನ್ ಚಿಕ್ಕಮಂಡ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮಂಜುನಾಥ ನಾಯ್ಡು, ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಘಟಕ-10ರ ನಿಲಯ ಮೇಲ್ವಿಚಾರಕ ಎಚ್.ಎನ್.ರವಿ, ಕೃಷಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ್, ಸಂಪುಟ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಖಚಾಂಚಿ ರಕ್ಷಿತ್‌ರಾಜ್ ಇತರರಿದ್ದರು.
ಮಂಡ್ಯದ ಡಿ.ದೇವರಾಜ ಅರಸು ಭವನದಲ್ಲಿ ನಡೆದ ಮರೆಯಲಾಗದ ಮಹನೀಯರು ಕವಿಗಳ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ಗಾಯಕರನ್ನು ಅಭಿನಂದಿಸಲಾಯಿತು.