ಮಕ್ಕಳ ಜ್ಞಾನ ದೀವಿಗೆ ಹೆಚ್ಚಿಸಲು ಅಕ್ಷರಾಭ್ಯಾಸ ಸಹಕಾರಿ: ನಿರ್ಮಲಾನಂದನಾಥ ಶ್ರೀ

| Published : Oct 10 2024, 02:19 AM IST

ಮಕ್ಕಳ ಜ್ಞಾನ ದೀವಿಗೆ ಹೆಚ್ಚಿಸಲು ಅಕ್ಷರಾಭ್ಯಾಸ ಸಹಕಾರಿ: ನಿರ್ಮಲಾನಂದನಾಥ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡ ತಟ್ಟೆಯಲ್ಲಿ ಅಕ್ಕಿಯನ್ನು ಇರಿಸಿ ಅದರಲ್ಲಿ ಮಕ್ಕಳ ಕೈಹಿಡಿದುಕೊಂಡು ನವಿಲುಗರಿಯ ಮೂಲಕ ಓಂ ಬೀಜಾಕ್ಷರವನ್ನು ಬರೆಸುವ ಮೂಲಕ ಅಕ್ಷರಭ್ಯಾಸ ಮಾಡಿಸಿದರು. 50ಕ್ಕೂ ಹೆಚ್ಚು ಮಕ್ಕಳು ಜಾತಿ, ಧರ್ಮ ಭೇದವಿಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಅದಿಚುಂಚನಗಿರಿ ಮಹಾಸಂಸ್ಥಾನಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಬುಧವಾರ ಬೆಳಗ್ಗೆ ಸರಸ್ವತಿ ಪೂಜೆ ಮತ್ತು ಚಿಕ್ಕಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.

ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಅಕ್ಷರಾಭ್ಯಾಸ ಅಥವಾ ವಿದ್ಯಾರಂಭ ನಡೆಸುವ ಪದ್ಧತಿ ಇರುವುದರಿಂದ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಶ್ರೀಮಠಕ್ಕೆ ಕರೆತಂದು ಶ್ರೀಗಳಿಂದ ಅಕ್ಷರಾಭ್ಯಾಸ ಮಾಡಿಸಿದರು.

ಅಕ್ಷರಾಭ್ಯಾಸಕ್ಕೂ ಮುನ್ನ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷವಾಗಿ ಅಲಂಕರಿಸಿದ ಸರಸ್ವತಿ ದೇವಿ ಸನ್ನಿಧಿಯಲ್ಲಿ ಗಣಪತಿ ಪೂಜೆ ನೆರವೇರಿಸಲಾಯಿತು. ನಂತರ ಸರಸ್ವತಿ ವಿಗ್ರಹಕ್ಕೆ ಹಾಲಾಭಿಷೇಕ ನೆರವೇರಿಸಿ ಪೂಜಿಸುವ ಮೂಲಕ ಮಕ್ಕಳಿಗೆ ಅಕ್ಷರಾಭ್ಯಾಸ ಕ್ರಿಯೆಯನ್ನು ಶ್ರೀಗಳು ಆರಂಭಿಸಿದರು.

ದೊಡ್ಡ ತಟ್ಟೆಯಲ್ಲಿ ಅಕ್ಕಿಯನ್ನು ಇರಿಸಿ ಅದರಲ್ಲಿ ಮಕ್ಕಳ ಕೈಹಿಡಿದುಕೊಂಡು ನವಿಲುಗರಿಯ ಮೂಲಕ ಓಂ ಬೀಜಾಕ್ಷರವನ್ನು ಬರೆಸುವ ಮೂಲಕ ಅಕ್ಷರಭ್ಯಾಸ ಮಾಡಿಸಿದರು. 50ಕ್ಕೂ ಹೆಚ್ಚು ಮಕ್ಕಳು ಜಾತಿ, ಧರ್ಮ ಭೇದವಿಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯ ಸಾಧಿಸಲು ಅಕ್ಷರಭ್ಯಾಸ ಚುಂಚಶ್ರೀ:

ಶಾಲೆಗೆ ಸೇರಿಸುವ ಮುನ್ನ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವುದು ಹಿಂದೂ ಧರ್ಮದಲ್ಲಿ ಆಚರಿಸಿಕೊಂಡು ಬಂದಿರುವ ಪದ್ಧತಿ. ನವರಾತ್ರಿಯ ಸಮಯದಲ್ಲಿ ಮಾಡಿಸುವ ಅಕ್ಷರಭ್ಯಾಸ ವಿಜಯದ ಸಂಕೇತವಾಗಿದೆ. ಅಂಧಕಾರದ ಮೇಲೆ ನಡೆಸುವ ವಿಜಯ ಎಂಬುದಾಗಿ ಇದನ್ನು ಕರೆಯಲಾಗಿದೆ. ಇದು ಮಕ್ಕಳ ಜ್ಞಾನ ದೀವಿಗೆಯನ್ನು ಬೆಳಗಿಸಲು ಸಹಕಾರಿಯಾಗಿದೆ ಎಂದು ಶ್ರೀಗಳು ತಿಳಿಸಿದರು.

ಸಂಜೆ ಶಿವಮೊಗ್ಗ ಶಾಖಾಮಠದ ವತಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ತಾಲೂಕಿನ ಅಂಚೇಚಿಟ್ಟನಹಳ್ಳಿ, ಭೈರನಹಳ್ಳಿ, ಬೇಗಮಂಗಲ, ಅಂಚೆಭೂವನಹಳ್ಳಿ, ವಡೇರಹಳ್ಳಿ, ಕಬ್ಬಿನಕೆರೆ, ಯಲಾದಹಳ್ಳಿ, ಚಿಕ್ಕಜಟಕ, ವಳಗೆರೆಪುರ, ಚೋಳಸಂದ್ರ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಈ ವೇಳೆ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಚೈತನ್ಯನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳು ಶ್ರೀಗಳು, ಮಕ್ಕಳ ಪೋಷಕರು ಮತ್ತು ಭಕ್ತರು ಉಪಸ್ಥಿತರಿದ್ದರು.