ಜಾತಿ ಹೆಸರಲ್ಲಿ ಸಾಹಿತ್ಯ ವಿಮರ್ಶೆ ವಿಷಾದನೀಯ

| Published : Aug 26 2024, 01:40 AM IST

ಸಾರಾಂಶ

ತಮ್ಮ ಬದುಕನ್ನೇ ನಿಷ್ಕರ್ಷಕ್ಕೊಡ್ಡಿ, ಜೀವನದುದ್ದಕ್ಕೂ ನೋವನ್ನುಂಡು ಸೃಜನಶೀಲ ಸಾಹಿತ್ಯ ಕಟ್ಟಿಕೊಟ್ಟಿರುವ ಮಹಿಳಾ ಹರಿದಾಸರ ಬಗ್ಗೆ, ಅವರ ಬದುಕು- ಬರಹ, ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆಗಳನ್ನು ದಾಖಲಿಸುವಲ್ಲಿ ರಾಜ್ಯ ಸರ್ಕಾರ ತೀವ್ರ ಅಲಕ್ಷತನ ತೋರಿದೆ ಎಂದು ಹರಿದಾಸ ಸಾಹಿತ್ಯ ವಿಧ್ವಾಂಸರು, ಸಂಶೋಧಕರು ಖೇದ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ತಮ್ಮ ಬದುಕನ್ನೇ ನಿಷ್ಕರ್ಷಕ್ಕೊಡ್ಡಿ, ಜೀವನದುದ್ದಕ್ಕೂ ನೋವನ್ನುಂಡು ಸೃಜನಶೀಲ ಸಾಹಿತ್ಯ ಕಟ್ಟಿಕೊಟ್ಟಿರುವ ಮಹಿಳಾ ಹರಿದಾಸರ ಬಗ್ಗೆ, ಅವರ ಬದುಕು- ಬರಹ, ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆಗಳನ್ನು ದಾಖಲಿಸುವಲ್ಲಿ ರಾಜ್ಯ ಸರ್ಕಾರ ತೀವ್ರ ಅಲಕ್ಷತನ ತೋರಿದೆ ಎಂದು ಹರಿದಾಸ ಸಾಹಿತ್ಯ ವಿಧ್ವಾಂಸರು, ಸಂಶೋಧಕರು ಖೇದ ವ್ಯಕ್ತಪಡಿಸಿದ್ದಾರೆ.

ದಾಸ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯಕ್ಕೆ ಮಹಿಳಾ ಹರಿದಾಸರ ಕೊಡುಗೆ ವಿಶೇಷ ಉಪನ್ಯಾಸದಲ್ಲಿ ಪಾಲ್ಗೊಂಡು ವಿಷಯ ಮಂಡಿಸಿದ ಸಂಶೋಧಕರು ಸಾಹಿತ್ಯವನ್ನು ಜ್ಞಾನ, ಶಕ್ತಿ ಹಾಗೂ ಅನುಭಾವದ ಹಿನ್ನೆಲೆಯಲ್ಲಿ ಕಾಣದೆ, ಜಾತಿ ಕನ್ನಡಕ ಹಾಕ್ಕೊಂಡು ನೋಡಲಾಗುತ್ತಿದೆ, ಇದರಿಂದ ಮೌಲಿಕ ಸಾಹಿತ್ಯದ ಅವಗಣನೆ ಸಾಗಿದೆ ಎಂದು ಎಚ್ಚರಿಸಿದರು.

ಉತ್ತಮ ಅಂಶಗಳನ್ನು ಯಾರು ನೀಡುತ್ತಾರೋ ಅಂತಹವರ ಸಾಹಿತ್ಯ ದಾಖಲೀಕರಣಕ್ಕೆ ಮುಂದಾಗದೆ, ಸಾಹಿತ್ಯದಲ್ಲೂ ಆ ಜಾತಿ, ಈ ಜಾತಿ ಸಾಹಿತ್ಯವೆಂದು ವರ್ಗೀಕರಣ ಮಾಡುತ್ತ ಜೀವನದ ಉತ್ತಮ ಮೌಲ್ಯಗಳಿರುವಂತಹ ಮಹಿಳಾ ಹರಿದಾಸರ ಸಾಹಿತ್ಯವನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುವ ಹುನ್ನಾರ ಸಾಗಿದೆ ಎಂಬ ಅಸಮಾಧಾನ ಸಭೆಯಲ್ಲಿ ವ್ಯಕ್ತವಾಯ್ತು.

ಯಾರೇನೇ ಷಡ್ಯಂತ್ರ ಮಾಡಿದರೂ ಇಂತಹ ಮೌಲಿಕ ಸಾಹಿತ್ಯವನ್ನು ಅಲುಗಾಡಿಸಲಾಗದು, ಕಾಲಾಂತರದಿಂದ ಇಂತಹ ಸಾಹಿತ್ಯದ ಸೆಲೆ ಒರತೆಯಂತೆ ಸದಾ ಜಿನುಗುತ್ತ ಸಮಾಜದಲ್ಲಿ ಮೌಲ್ಯ, ಸಂಸ್ಕೃತಿ ಬಿತ್ತುವ ಕೆಲಸ ಮಾಡುತ್ತದೆ ಎಂದೂ ವಿಷಯ ಪರಿಣಿತರು ಅಭಿಪ್ರಾಯಪಟ್ಟರು.

ಮಹಿಳಾ ಹರಿದಾಸರ ಬಗ್ಗೆ ಯಾಕೆ ಅವಜ್ಞೆ? ಗುಂಡೂರ ಪ್ರಶ್ನೆ:

ಹರಪನಹಳ್ಳಿ ಭೀಮವ್ವ, ಹೆಳವನಕಟ್ಟಿ ಗಿರಿಯಮ್ಮ, ಗುರುಬಾಯಿ ಲಕ್ಷ್ಮೀದೇವಿ, ಬಳ್ಳಾರಿ ಸುಧಾಬಾಯಿ ಸೇರಿದಂತೆ ನೂರಾರು ಮಹಿಳಾ ಹರಿದಾಸಾರ ತವರೂರು ಕಲ್ಯಾಣ ನಾಡು ಎಂದು, ಹರಿದಾಸರ ಹೆಸರು, ಅವರ ಕೃತಿಗಳನ್ನು ಸೋದಾಹರಣವಾಗಿ ವಿವರಿಸುತ್ತ ವಿಷಯ ಮಂಡಿಸಿದ ದಾಸ ಸಾಹಿತ್ಯ ವಿದ್ವಾಂಸ ಪವನಕಮಾರ್‌ ಗುಂಡೂರ್‌ ಗಂಗಾವತಿ ಇವರು ಕುಟುಂಬ ವ್ಯವಸ್ಥೆಯೇ ಅವನತಿ ಅಂಚಲ್ಲಿರುವ ಇಂದಿನ ಕಲದಲ್ಲಿ ಮಹಿಳಾ ಹರಿದಾಸರ ಪರಿಪೂರ್ಣ ಕುಟುಂಬ ಪರಿಕಲ್ಪನೆಯ ಮೇಲೆಯೇ ನಿಂತಿರುವ ಸಾಹಿತ್ಯ ಹೆಚ್ಚು ಅಧ್ಯಯನಕ್ಕೊಳಗಾಬೇಕಿದೆ ಎಂದರು.

ಹರಪನಹಳ್ಳಿ ಭೀಮವ್ವ ಮಧ್ವ ಸಿದ್ದಾಂತವನ್ನೇ ತ್ರಿಪದಿಯಲ್ಲಿ ಸಾರಿದ್ದಾರೆ, ಕೃಷ್ಣ ಭಕ್ತಿ ಮಹಿಳಾ ಹರಿದಾಸರು ತಾಯಿ ಭಾಷೆಯಲ್ಲಿ ಸೇರೆಹಿಡಿದಿಟ್ಟ ಪರಿ ಅನನ್ಯ. ನಮ್ಮ ಸರ್ಕಾರದವರು ದಾಸ ಸಾಹಿತ್ಯ, ವಚನ ಸಾಹಿತ್ಯ, ತತ್ವ ಪದಕಾರರ ಸಾಹಿತ್ಯದ ಸಂಪುಟಗಳನ್ನು ಹೊರತಂದರೆ ಹೊರತು ಮಹಿಲಾ ಹರಿದಾಸರ ಸಾಹಿತ್ಯ ಸಂಪುಟದ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ, ಆಡು ಭಾಷೆಯಲ್ಲಿ ಪುರಾಣ, ಉಪನಿಷತ್ತುಗಳ ಸಾರ ಸಂಗ್ರಿಸಿರುವ ಮಹಿಳಾ ಹರಿದಾಸರ ಬಗ್ಗೆ ಯಾಕೆ ಈ ಪರಿ ಅವಜ್ಞೆ? ಎಂದು ಪ್ರಶ್ನಿಸಿದರು.

ಭಕ್ತಿ ಪರಂಪರೆಯ ಒಟ್ಟಾರೆ ಕನ್ನಡ ಸಾಹಿತ್ಯವನ್ನು ಮಹಿಳಾ ಹರಿದಾಸಾರ ಕೊಡುಗೆಗೆ ಹೋಲಿಸಿದಲ್ಲಿ ಇವರಷ್ಟು ಸಾಹಿತ್ಯ ಕನ್ನಡ ಸಾಹಿತ್ಯವನ್ನ ಸಿರಿವಂತಗೊಳಿಸಿದ ಕೃತಿಗಳು ಬೇರಾವುದು ಸಿಗೋದಿಲ್ಲ. ಮಹಿಲಾ ಹರಿದಾಸ ಪಂರಪರೆಯ ಸಂಪುಟ ರಚನೆಯಾದಲ್ಲಿ ಕನಿಷ್ಠ 100 ಸಂಪುಟಗಳಾದರೂ ಸಾಕಾಗೋದಿಲ್ಲ, ಅಷ್ಟೊಂದು ವಿಫುಲ ಜೀವನಾನುಭವದ ಸಾಹಿತ್ಯದ ಹೂರಣ ಇದ್ದರೂ ಜಾತಿ ಕಾರಣದಿಂದ, ಸಂಕುಚಿತ ಮನೋಭಾವದವರ ಅವಜ್ಞೆಯಿಂದಾಗಿ ಮಹಿಳಾ ಹರಿದಾಸರ ಕೊಡುಗೆ ಗುರುತಿಸಲಾಗುತ್ತಿಲ್ಲವೆಂದು ಪವನ ಕುಮಾರ್‌ ಗುಂಡೂರ ವಿಷಾದಿಸಿದರು.

ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ , ಸಾಹಿತಿ ಶ್ರೀನಿವಾಸ ಸಿರನೂರಕರ್‌ ಪ್ರಸ್ತಾವಿಕ ನುಡಿಗಳನ್ನಾಡಿದರು. ತಮ್ಮ ಅಜ್ಜಿ ಲಕ್ಷ್ಮೀಬಾಯಿ ಗುಡಗುಂಟಿ ಅವರ ಸ್ಮರಣಾರ್ಥ ದತ್ತಿ ಸ್ಥಾಪಿಸರುವ ಸಿರನೂರಕರ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯ್ತು. ಸಂಜೀವ ಸಿರನೂರಕರ್‌ ನಿರೂಪಿಸಿದರು, ನಾರಾಯಣ ಕುಲಕರ್ಣಿ ವಂದಿಸಿದರು. ಸಾಹಿತ್ಯಾಸಕ್ತರು, ದಾಸಸಾಹಿತ್ಯ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮೌಲಿಕ ಸಾಹಿತ್ಯಗಳು ಅವಗಣನೆ: ಡಾ. ಸ್ವಾಮೀರಾವ

ದಾಸರು, ವಚನಕಾರರು, ತತ್ವ ಪದಕಾರರು, ಸೂಫಿ ಸಂತರು ಹೀಗೆ ಅನೇಕರು ಸಮಾಜ ಸುಧಾರಣೆಗೆ ತಾವಿರುವ ಪರಿಸರದಲ್ಲೇ ಕ್ರಾಂತಿ ಮಾಡಿದವರು. ಇವರೆಲ್ಲರ ಮೌಲಿಕ ಸಾಹಿತ್ಯವನ್ನ ಜಾತಿ ಕನ್ನಡ ಹಾಕಿಕೊಂಡು ವಿಮರ್ಶೆ, ವಿಶ್ಲೇಷಣೆ ಮಾಡೋದರಿಂದಲೇ ಅನೇಕ ಮೌಲಿಕ ಸಾಹಿತ್ಯಗಳು ಅವಗಣನೆಗೆಗೊಳಗಾಗುತ್ತಿವೆ ಎಂದು ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ, ದಾಸ ಸಾಹಿತ್ಯ ಸಂಶೋಧಕ ಡಾ. ಸ್ವಾಮೀರಾವ ಕುಲಕರ್ಣಿ ವಿಷಾದಿಸಿದರು.

ಸಾಹಿತ್ಯಕ್ಕೆಲ್ಲಿದೆ ಜಾತಿ? ಉತ್ತಮ ವಿಷಯಗಳಿದ್ದಲ್ಲಿ ಅದನ್ನು ಯಾರೇ ಹೇಳಲಿ ಎಲ್ಲರೂ ಸ್ವೀಕರಿಸುವ ಉದಾರೀತನ ಇರಲಿ, ದಾಸರು ವ್ಯವಸ್ಥೆಯೊಳಗಿದ್ದೇ ಬಂಡಾಯ ಸಾರಿದರು. ಹೀಗಾಗಿ ದಾಸ ಸಾಹಿತ್ಯ, ಅದರಲ್ಲೂ ಮಹಿಳಾ ಹರಿದಾಸ ಸಾಹಿತ್ಯ ಈ ಹಿನ್ನೆಲೆಯಲ್ಲಿ ತುಂಬ ಮಹತ್ವದ್ದಾಗುತ್ತದೆ. ಮಹಿಳಾ ಹರಿದಾಸರ ಕೊಡುಗೆ ಸಾಹಿತ್ಯಕ್ಕೆ ಅಪಾರವಾಗಿದ್ದರೂ ಇಂದಿಗೂ ಡಬ್ಬಲ್‌ ಅವಜ್ಞೆಗೊಳಗಾಗಿದೆ ಎಂದು ಖೇದ ವ್ಯಕ್ತಪಡಿಸಿದರು.

ಬದುಕೆಂದರೆ ಹಾಸ್ಪಿಟಲ್‌, ಹಾಸ್ಟೆಲ್‌ ಅಂತಾಗಿರೋ ಈ ದಿನಮಾನಗಳಲ್ಲಿ ಬದುಕಿನ ಮೌಲ್ಯಗಳನ್ನು ಸಾರುವ ಸಾಹಿತ್ಯ ಮಹಿಳಾ ಹರಿದಾಸರು ಕಟ್ಟಿ ಕೊಟ್ಟಿದ್ದಾರೆ. ಹೀಗಿದ್ರೂ ಜಾತಿ ಆಧಾರದಲ್ಲಿ ಸಾಹಿತ್ಯವನ್ನು ಅವಲೋಕಿಸೋದರಿಂದಲೇ ಈ ಮೌಲಕ ಸಾಹಿತ್ಯ ಅವಗಣೆನೆಗೊಳಗಾಗಿದೆ ಎಂದು ವಿಜಯದಾಸರ ಜಾತ್ಯತೀತ ಪರಿಕಲ್ಪನೆ, ಪಿಂಜಾರ ಬಡೇಸಾಬರು ರಾಮದಾಸರಾದ ಪ್ರಸಂಗ ವಿವರಿಸುತ್ತ ದಾಸ ಪರಂಪರೆಯಲ್ಲಿ ಸಾಮರಸ್ಯದ ಸಾಹಿತ್ಯವಿದೆ, ಲಾಲಿತ್ಯವಿದೆ, ಜಾತಿ ಕನ್ನಡಕದಲ್ಲಿ ಅದನ್ನು ನೋಡೋದು ಸರಿಯಲ್ಲ ಎಂದು ಪ್ರತಿಪಾದಿಸಿದರು.