ಸಾಹಿತ್ಯ-ಸಂಸ್ಕೃತಿ ಸಂಘಟಕ ‘ಪ್ರೊ.ಬಿ.ಜಯಪ್ರಕಾಶಗೌಡ’

| Published : Feb 14 2024, 02:20 AM IST

ಸಾರಾಂಶ

ಮಂಡ್ಯದ ಹವ್ಯಾಸಿ ರಂಗಭೂಮಿಯನ್ನು ಹೊಸ ಆಯಾಮದೊಂದಿಗೆ ಶ್ರೀಮಂತಗೊಳಿಸಲು ಪ್ರೊ.ಜಯಪ್ರಕಾಶಗೌಡರು ಮಾಡಿದ ಸಂಕಲ್ಪ ಕೆ.ವಿ.ಶಂಕರಗೌಡರ ಹತ್ತಿರದ ಒಡನಾಟವನ್ನು ತಂದುಕೊಟ್ಟಿತು. ಆ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಕಾರಣರಾದರು. ಅದಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯೇ ಗೆಳೆಯರ ಬಳಗ. ಈ ಸಂಘಟನೆಯ ಮೂಲಕ ಜಿಲ್ಲೆಯ ಕಲಾವಿದರನ್ನು, ಪ್ರೇಕ್ಷಕರನ್ನು ಹೊಸ ಅಲೆಯ ನಾಟಕಗಳಿಗೆ ಸಜ್ಜುಗೊಳಿಸಿದ್ದಲ್ಲದೆ, ರಾಜ್ಯದ ಹವ್ಯಾಸಿ ನಾಟಕ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಿದರು.

ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ

ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರೊ.ಬಿ.ಜಯಪ್ರಕಾಶಗೌಡರೆಂದರೆ ದೊಡ್ಡ ಹೆಸರು. ಸಂಘಟನೆಗೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ. ಸಾಹಿತ್ಯ, ಕಲೆ, ಸಂಸ್ಕೃತಿ, ಸಂಘಟನೆ ಜೊತೆಯಲ್ಲೇ ಬದುಕನ್ನು ರೂಪಿಸಿಕೊಂಡು ಸಾರ್ಥಕಪಡಿಸಿಕೊಂಡ ಚೈತನ್ಯಶೀಲ ವ್ಯಕ್ತಿ. ಸಾಹಿತ್ಯ, ಸಂಸ್ಕೃತಿಯ ದೈತ್ಯ ಸಂಘಟಕರಾಗಿರುವ ಪ್ರೊ.ಬಿ.ಜಯಪ್ರಕಾಶಗೌಡರನ್ನು ಅಭಿಮಾನಿ ಬಳಗ ಫೆ.೧೬ರಂದು ಆತ್ಮೀಯವಾಗಿ ಅಭಿನಂದಿಸಲಾಗುತ್ತಿದೆ.

ನಿತ್ಯ ಸಚಿವ ಕೆ.ವಿ.ಶಂಕರಗೌಡರ ಪ್ರೇರಣೆ ಮತ್ತು ಪ್ರಭಾವದ ತೆಕ್ಕೆಗೆ ಸಿಲುಕಿದ ಜಯಪ್ರಕಾಶಗೌಡರು ಸಂಸ್ಕೃತಿ ಪ್ರಿಯ ಹಾಗೂ ಜನಪರ ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಶಕ್ತಿ-ಸಾಮರ್ಥ್ಯಗಳನ್ನು ಕನ್ನಡದ ಏಳಿಗೆ, ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ದುಡಿಸಿಕೊಳ್ಳುವ ನೈಪುಣ್ಯತೆಯನ್ನೂ ಹೊಂದಿದ್ದಾರೆ. ಇದಕ್ಕೆ ಕರ್ನಾಟಕ ಸಂಘ ಪ್ರತ್ಯಕ್ಷ ಸಾಕ್ಷಿಯಾಗಿದೆ.

ಪ್ರೊ.ಬಿ.ಜಯಪ್ರಕಾಶಗೌಡರ ಹುಟ್ಟೂರು ದೊಡ್ಡ ಬಾಣಸವಾಡಿ. ರೈತ ಕುಟುಂಬದಲ್ಲಿ ಜನಿಸಿದ ಪ್ರೊ.ಬಿ.ಜಯಪ್ರಕಾಶಗೌಡರು ಗ್ರಾಮ ಸಂಸ್ಕೃತಿಯಿಂದ ಸಾಹಿತ್ಯ ಸಂಸ್ಕೃತಿಯವರೆಗೆ ಬದುಕನ್ನು ವಿಸ್ತರಿಸಿಕೊಂಡರು. ಬಿಎಸ್ಸಿ ಪದವೀಧರರಾದ ಗೌಡರು ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂಎ ಪದವಿಯನ್ನೂ ಗಳಿಸಿದ್ದಾರೆ. ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಬಂದವರಾಗಿದ್ದಾರೆ.

ವೃತ್ತಿಯೊಂದಿಗೆ ಸಂಘಟನಾ ಪ್ರವೃತ್ತಿ:

ಉನ್ನತ ಶಿಕ್ಷಣ ಪಡೆದು ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ೧೯೭೪ರಲ್ಲಿ ಜನತಾ ಶಿಕ್ಷಣ ಸಂಸ್ಥೆಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು, ವಿಜ್ಞಾನ ಕಲಾ ಕಾಲೇಜಿನ ಉಪನ್ಯಾಸಕರಾಗಿ, ಸಂಜೆ ಕಾಲೇಜಿನ ಪ್ರಾಂಶುಪಾಲರಾಗಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಗಳೆರಡನ್ನೂ ನಿರ್ವಹಿಸಿದರು. ೧೯೯೨ರಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೨೦೦೭ರಲ್ಲಿ ನಿವೃತ್ತರಾದರು.

ಸಂಸ್ಕೃತಿ ಪ್ರಿಯತೆ, ಸಂಘಟನಾ ಪ್ರವೃತ್ತಿಯನ್ನು ವೃತ್ತಿಯೊಂದಿಗೆ ಬೆಸೆದುಕೊಂಡು ಬಂದ ಗೌಡರು ಪಿಇಎಸ್ ಕಾಲೇಜಿನ ಆಸಕ್ತ ಅಧ್ಯಾಪಕರನ್ನು ಒಗ್ಗೂಡಿಸಿಕೊಂಡು ಕುರುಕ್ಷೇತ್ರ ನಾಟಕ ಕಲಿತರು ದುರ್ಯೋಧನನ ಪಾತ್ರ ಮಾಡಿದರು. ವಿಜ್ಞಾನ ಕಾಲೇಜಿನ ಕಟ್ಟಡ ನಿಧಿಯ ಸಹಾಯಾರ್ಥ ಪ್ರದರ್ಶನ ಏರ್ಪಡಿಸಿ ಒಂದು ಲಕ್ಷ ರು. ಸಂಗ್ರಹಿಸಿದರು. ಮರು ವರ್ಷ ಎರಡು ಲಕ್ಷ ರು. ಸಂಗ್ರಹಿಸಿದರು.

ಮಂಡ್ಯದ ಹವ್ಯಾಸಿ ರಂಗಭೂಮಿಯನ್ನು ಹೊಸ ಆಯಾಮದೊಂದಿಗೆ ಶ್ರೀಮಂತಗೊಳಿಸಲು ಪ್ರೊ.ಜಯಪ್ರಕಾಶಗೌಡರು ಮಾಡಿದ ಸಂಕಲ್ಪ ಕೆ.ವಿ.ಶಂಕರಗೌಡರ ಹತ್ತಿರದ ಒಡನಾಟವನ್ನು ತಂದುಕೊಟ್ಟಿತು. ಆ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ಕಾರಣರಾದರು. ಅದಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯೇ ಗೆಳೆಯರ ಬಳಗ. ಈ ಸಂಘಟನೆಯ ಮೂಲಕ ಜಿಲ್ಲೆಯ ಕಲಾವಿದರನ್ನು, ಪ್ರೇಕ್ಷಕರನ್ನು ಹೊಸ ಅಲೆಯ ನಾಟಕಗಳಿಗೆ ಸಜ್ಜುಗೊಳಿಸಿದ್ದಲ್ಲದೆ, ರಾಜ್ಯದ ಹವ್ಯಾಸಿ ನಾಟಕ ತಂಡಗಳನ್ನು ಕರೆಸಿ ಪ್ರದರ್ಶನಗಳನ್ನು ಏರ್ಪಡಿಸಿದರು.

ಶಿಕ್ಷಣದಲ್ಲಿ ಜಾನಪದಕ್ಕೆ ಪ್ರಾಮುಖ್ಯತೆ:

ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಭಾವಗೀತೆಗಳ ಗಾಯನ ಸ್ಪರ್ಧೆಯನ್ನು ಗೆಳೆಯರ ಬಳಗ ಆಯೋಜಿಸಿತು. ಹತ್ತಾರು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದು ಕೂರಿಸುವುದರೊಂದಿಗೆ ಮಂಡ್ಯ ನಗರದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ ಕೀರ್ತಿ ಪ್ರೊ.ಜಯಪ್ರಕಾಶಗೌಡರಿಗೆ ಸಲ್ಲುತ್ತದೆ. ಹುಬ್ಬಳ್ಳಿ-ಧಾರವಾಡದಲ್ಲಿ ಬೆಂಗಳೂರೇತರ ಸಂಘಟನೆಗಳ ಸಮಾವೇಶವನ್ನು ಏರ್ಪಡಿಸಿದ್ದು ಗೌಡರ ವಿಶೇಷ ಶ್ರಮದ ಫಲವಾಗಿದೆ. ಈ ಸಮಾವೇಶ ರಾಜ್ಯದ ಸಾಂಸ್ಕೃತಿಕ ಚಟುವಟಿಕೆಗಳ ವಿಕೇಂದ್ರೀಕರಣಕ್ಕೆ ನಾಂದಿಯಾಯಿತು. ಪಿಇಎಸ್ ವಿಜ್ಞಾನ, ಕಲೆ, ವಾಣಿಜ್ಯ ಕಾಲೇಜಿನಲ್ಲಿ ಜಾನಪದ ವಿಭಾಗವನ್ನು ತೆರೆದು ಪದವಿ ವಿದ್ಯಾರ್ಥಿಗಳು ಜಾನಪದವನ್ನು ಒಂದು ಐಚ್ಛಿಕ ವಿಷಯವಾಗಿ ಅಭ್ಯಾಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು.

ಸಾಹಿತ್ಯ ಪರಿಷತ್‌ಗೆ ಹೊಸ ರೂಪ:

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಪರಿಷತ್‌ನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದರು. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಾರ್ವಜನಿಕರ ನೆರವಿನಿಂದ ಕಂಪ್ಯೂಟರ್, ಫ್ಯಾಕ್ಸ್, ಫೋನ್‌ಗಳನ್ನು ತಂದರು. ಅಟೆಂಡರ್‌ಗಳನ್ನು ನೇಮಕ ಮಾಡಿ ಸಂಬಳಕ್ಕೆ ವ್ಯವಸ್ಥೆ ಮಾಡಿದರು. ವಾಚನಾಲಯ ಆರಂಭಿಸಿ ಹತ್ತು ದತ್ತಿಗಳನ್ನು ಸ್ಥಾಪಿಸಿದರು.

ಹವ್ಯಾಸಿ ಕಲಾವಿದರು ಮತ್ತು ತಜ್ಞರನ್ನು ಕಟ್ಟಿಕೊಂಡು ಹೊಸ ಅಲೆಯ ನಾಟಕಗಳನ್ನು ವೇದಿಕೆಗೆ ತಂದು ಮಂಡ್ಯದ ರಂಗಚಟುವಟಿಕೆಯನ್ನು ಜೀವಂತವಾಗಿಡುವುದೆಂದರೆ ಪ್ರೊ.ಜಯಪ್ರಕಾಶಗೌಡರಿಗೆ ಎಲ್ಲಿಲ್ಲದ ಉತ್ಸಾಹ. ಇದಕ್ಕಾಗಿ ಅವರು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಗತಗೊಳಿಸಿದರು. ರಂಗ ಶಿಬಿರ ಏರ್ಪಡಿಸಿ ಯುವಜನರನ್ನೊಳಗೊಂಡ ಹವ್ಯಾಸಿ ರಂಗತಂಡವನ್ನು ಕಟ್ಟಿದ್ದು ಈಗ ಇತಿಹಾಸ.

ಕರ್ನಾಟಕ ಸಂಘಕ್ಕೆ ಶಕ್ತಿ ತುಂಬಿದ ಗೌಡರು:

ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಸಂಘ ಪ್ರವೇಶ ಮಾಡಿದ ಜಯಪ್ರಕಾಶಗೌಡರುಉ ಅದರ ಏಳಿಗೆಗೆ ಜೀವನವನ್ನೇ ಪಣಕ್ಕಿಟ್ಟಿದ್ದಾರೆ. ಜಿಲ್ಲೆಯ ಗಣ್ಯರ ಹೆಸರಿನಲ್ಲಿ ದತ್ತಿಗಳು ಪ್ರಶಸ್ತಿಗಳನ್ನು ಸ್ಥಾಪಿಸಿದ್ದಾರೆ. ವಿಶೇಷ ಉಪನ್ಯಾಸ, ೧೦ ಸಾವಿರ ರು. ನಗದು, ಪ್ರಶಸ್ತಿ ಪತ್ರಗಳನ್ನುಒಳಗೊಂಡಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಮೈಸೂರಿನ ರಾಜ್ಯ ಮುಕ್ತ ವಿವಿ ಸಂಯೋಜನೆಯೊಂದಿಗೆ ಎಂ.ಎಲ್.ಶ್ರೀಕಂಠೇಗೌಡ ಸಂಶೋಧನಾ ಕೇಂದ್ರ, ಶಂಕರಗೌಡ ರಂಗ ತರಬೇತಿ ಶಾಲೆ ತೆರೆದಿದ್ದಾರೆ. ಕನ್ನಡ, ಇತಿಹಾಸ, ಪ್ರಾಚೀನ ಇತಿಹಾಸ, ಪುರಾತತ್ವಶಾಸ್ತ್ರ ಎಂ.ಫಿಲ್, ಪದವಿ ಕೋರ್ಸ್, ಪಿಎಚ್‌ಡಿ, ದೂರ ಶಿಕ್ಷಣ ಸ್ನಾತಕೋತ್ತರ, ಡಿಪ್ಲೋಮಾ ಕೋರ್ಸ್‌ಗಳನ್ನು ತೆರೆದಿದ್ದಾರೆ. ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನವನ್ನು ೧ ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಕರ್ನಾಟಕ ಸಂಘವನ್ನು ಸಂಸ್ಕೃತಿ ಪ್ರಿಯರು, ಕಲಾವಿದರಿಗೆ ಆಕರ್ಷಣೆಯ ಕೇಂದ್ರವನ್ನಾಗಿಸಿದ್ದಾರೆ.

ಜಾನಪದವನ್ನು ತಮ್ಮ ವಿಶೇಷ ಆಸಕ್ತಿ ಕ್ಷೇತ್ರಗಳಲ್ಲಿ ಒಂದನ್ನಾಗಿ ಮಾಡಿಕೊಂಡು ನಶಿಸಿಹೋಗುತ್ತಿರುವ ಮೂಡಲಪಾಯ ಯಕ್ಷಗಾನವನ್ನುಉ ಕಾಪಾಡಿಕೊಂಡು ವೃದ್ಧಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರ ಸಂಘಟನಾ ಶಕ್ತಿ, ಕ್ರಿಯಾಶೀಇಲತೆ, ರಂಗ ಚಟುವಟಿಕೆ, ಸಾಹಿತ್ಯ, ಸಂಸ್ಕೃತಿ, ಜಾನಪದಕ್ಕೆ ಸಲ್ಲಿಸುತ್ತಿರುವ ಅವಿರತ ಸೇವೆಯನ್ನು ಗುರುತಿಸಿ ೭೫ನೇ ವಸಂತಕ್ಕೆ ಕಾಲಿಡುತ್ತಿರುವ ಶುಭ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಗುತ್ತಿದೆ.