ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಮುಂದಿನ ಪೀಳಿಗೆಗಾಗಿ ಸಾವಿರಾರು ಪುಸ್ತಕಗಳನ್ನು ಸಂರಕ್ಷಣೆ ಮಾಡುವ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿರುವ ಸಾಹಿತಿ ಹರಿಹರ ಪ್ರಿಯ ಅವರು ತಮ್ಮ ವೈದ್ಯಕೀಯ ಚಿಕಿತ್ಸೆಗಾಗಿ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಗೆ ಸ್ಪಂದನೆ ಸಿಗದ ಕಾರಣ ಮನನೊಂದು ತಾವು ಸಂಗ್ರಹಿಸಿದ ಪುಸ್ತಕಗಳನ್ನು ಸುಟ್ಟುಹಾಕಲು ಮುಂದಾಗಿದ್ದನ್ನು ಅರಿತ ತಾಲೂಕು ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಸಾಹಿತಿಯ ಮನವೊಲಿಸುವ ಮೂಲಕ ಪುಸ್ತಕ ದಹನ ತಪ್ಪಿಸಿದ್ದಾರೆ. ಸಾಹಿತಿ ಹರಿಹರಪ್ರಿಯ ಇತ್ತಿಚೆಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ವೈದ್ಯಕೀಯ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಇವರ ಮನವಿಗೆ ಸರ್ಕಾರ ಸ್ಪಂದಿಸದ ಕಾರಣ ಬೇಸರಗೊಂಡ ಹರಿಹರಪ್ರಿಯ ತಾವು ಸಂಗ್ರಹಿಸಿದ ಸಾವಿರಾರು ಪುಸ್ತಕಗಳನ್ನು ತಮ್ಮ ಜನ್ಮದಿನವಾದ ಸೋಮವಾರ ಮಧ್ಯಾಹ್ನ ಅಗ್ನಿಗೆ ಆಹುತಿ ನೀಡಲು ಮುಂದಾಗಿದ್ದರು.ಸೌಲಭ್ಯ ಕಲ್ಪಿಸುವ ಭರವಸೆಇದನ್ನು ಅರಿತ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಹಾಗೂ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಹಿತಿಯ ನಿವಾಸಕ್ಕೆ ತೆರಳಿದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವು ಹರಿಹರಪ್ರಿಯ ಅವರನ್ನು ಭೇಟಿ ಮಾಡಿ, ತಮಗೆ ವೈದ್ಯಕೀಯ ಪರಿಹಾರ ಸೇರಿದಂತೆ ಇನ್ನಿತರೆ ಸವಲತ್ತುಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಪತ್ರವನ್ನು ನೀಡಿ ಮನವೊಲಿಸಿದರು. ಬಳಿಕ ಸಾಹಿತಿ ಹರಿಹರ ಪ್ರಿಯ ಅವರು ಪುಸ್ತಕ ದಹನ ಕಾರ್ಯ ಹಿಂಪಡೆಯುವುದಾಗಿ ತಿಳಿಸಿದರು.ಪತ್ರಕ್ಕೆ ಸ್ಪಂದಿಸದ ಸರ್ಕಾರ
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ಹರಿಹರ ಪ್ರಿಯ, ತಾವು ಸಚಿಸಿದ ಹಾಗೂ ಸಂಗ್ರಹಿಸಿದ ಸಾವಿರಾರು ಪುಸ್ತಕಗಳನ್ನು ಮುಂದಿನ ಪೀಳಿಗೆ ಓದಲು ಅನುವಾಗುವಂತೆ ಸಂಗ್ರಹಿಸಿಟ್ಟಿದ್ದೇನೆ. ಆದರೆ ಇತ್ತೀಚಿಗೆ ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಚಿಕಿತ್ಸೆ ಪಡೆದಿದ್ದು, ವೈದ್ಯಕೀಯ ಪರಿಹಾರಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದೆ. ಪ್ರಾಧಿಕಾರಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಿಗೆ ಪತ್ರ ಬರೆದಿದ್ದರು ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.ಇದರಿಂದ ಮನನೊಂದ ನಾನು ಸಂಗ್ರಹಿಸಿರುವ ಪುಸ್ತಕಗಳನ್ನು ಅಗ್ನಿಗೆ ಆಹುತಿ ಮಾಡಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೆ. ತಾಲೂಕು ಆಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ನನ್ನ ಪ್ರತಿಭಟನೆಯನ್ನು ಹಿಂಪಡೆಯುತ್ತಿರುವುದಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಹರಿಹರಪ್ರಿಯ ಅವರ ಜನ್ಮದಿನದ ಪ್ರಯುಕ್ತ ಅಧಿಕಾರಿಗಳೇ ಕೇಕ್ ತರಿಸಿ ಟ್ಟು ಹಬ್ಬ ಆಚರಿಸಿ ಶುಭಕೋರಿದರು. ನೊಸಗೆರೆ ಗ್ರಾಪಂ ಅಧ್ಯಕ್ಷ ವಿನಯ್ ಗೌಡ, ಪೊಲೀಸ್ ಇನ್ಸ್ಪೆಕ್ಟರ್ ವಸಂತ್, ಸಬ್ ಇನ್ಸ್‌ಕ್ಟರ್ ವರಲಕ್ಷ್ಮಿ, ಎ ಎಸ್ ಐ ಆನಂದ್, ರಾಜಸ್ವನಿರೀಕ್ಷಕ ನಾರಾಯಣಸ್ವಾಮಿ, ಗ್ರಾಮ ಆಡಳಿತಾಧಿಕಾರಿ ದಿನೇಶ್ ಹಾಜರಿದ್ದರು.