ಸಾರಾಂಶ
ತಾಲೂಕು ಮಟ್ಟದ ಕಥಾಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದ ಪತ್ರಿಕಾ ವರದಿ
ಕನ್ನಡಪ್ರಭ ವಾರ್ತೆ, ಅಜ್ಜಂಪುರವಿದ್ಯಾರ್ಥಿಗಳು ತನ್ನ ಓದು, ಅಭಿರುಚಿ, ಕೌಶಲ್ಯಗಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸದೇ, ಪರಿಪೂರ್ಣ ವ್ಯಕ್ತಿತ್ವರೂಪಿಸಿಕೊಳ್ಳುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕೆಂದು” ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಆರ್ ಚಂದ್ರಪ್ಪ ಕರೆ ನೀಡಿದರು. ಪಟ್ಟಣದ ಕನ್ನಡ ನೂತನ ವಿದ್ಯಾಸಂಸ್ಥೆಯಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್, ಅಜ್ಜಂಪುರ ತಾಲೂಕು ಸಮಿತಿಯಿಂದ ಆಯೋಜಿಸಿದ್ದ ಅಜ್ಜಂಪುರ-ತರೀಕೆರೆ ಉಭಯ ತಾಲೂಕು ಮಟ್ಟದ ಕಥಾಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಸಾಹಿತ್ಯ ವ್ಯಕ್ತಿಗೆ ಸಂಸ್ಕಾರ ಕೊಡುವ ಮೂಲಕ ಬದುಕಿಗೆ ಸಾರ್ಥಕತೆ ತಂದುಕೊಡುತ್ತದೆ. ಆದರ್ಶಗಳನ್ನು ಓದುತ್ತ, ತಾನೇ ಆದರ್ಶವಾಗಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಿಳಿಸಿದರು. ಸಮಿತಿಯ ಉಪಾಧ್ಯಕ್ಷ, ಕಾಂತೇಶ್ ಮಾತನಾಡಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸಾಹಿತ್ಯವನ್ನು ಜನರ ಮನೆ-ಮನ ಗಳಿಗೆ ಕೊಂಡೊಯ್ಯವ ಕೆಲಸ ಮಾಡುತ್ತಿದ್ದು, ಸಾಹಿತ್ಯ ಕೃಷಿಕರಿಗೆ ತನ್ನ ಪ್ರತಿಭೆ ಅನಾವರಣಗೊಳಿಸಲು ಸೂಕ್ತ ವೇದಿಕೆ ಒದಗಿಸುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನೂತನ್ ಶಾಲೆ ಮುಖ್ಯಸ್ಥ ಸೋಮಶೇಖರಪ್ಪ ಎಚ್.ಇ, ʼನಾಡಿನ ಶ್ರೀಮಂತಿಕೆ ಕೇವಲ ರಸ್ತೆ, ಕಟ್ಟಡ, ಕೈಗಾರಿಕೆಗಳಂತಹ ಭೌತಿಕ ಪ್ರಗತಿಯಿಂದ ಅಳೆಯದೆ, ಅಲ್ಲಿನ ಜನರ ಸಂಸ್ಕಾರ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಅಂಶಗಳ ಆಧಾರದಲ್ಲಿ ನಿರ್ಧರಿಸಬೇಕೆಂದೂ, ಈ ಮಾನದಂಡಗಳಲ್ಲಿ ಅಜ್ಜಂಪುರ ಶತಮಾನಗಳಿಂದ ಶ್ರೀಮಂತವಾಗಿದೆ ಎಂದು ತಿಳಿಸಿದರು. ರಂಗಕಲಾವಿದ ಶಿವಕುಮಾರಸ್ವಾಮಿ ಮಾತನಾಡಿ, ಇತ್ತೀಚೆಗೆ ಓದುವ ಅಭ್ಯಾಸ ಯುವಕಥೆಗಾರರಲ್ಲಿ ಕಡಿಮೆಯಾಗುತ್ತಿದ್ದು, ಸಾಹಿತ್ಯ ಲೋಕದಲ್ಲಿ ಗುಣಮಟ್ಟದ ಕಥೆಗಳ ಕೊರತೆ ಕಾಡುತ್ತಿದೆ. ಗಿಡದಲ್ಲಿ ಹೂವು ಅರಳುವಂತೆ ಸಹಜವಾಗಿ ಕಥೆಗಳು ರೂಪುಗೊಳ್ಳಬೇಕು. ಇದಕ್ಕಾಗಿ ಕಥೆಗಾರರು ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ಸಲಹೆನೀಡಿದರು. ಸಾಹಿತಿ ಅಪೂರ್ವ ಮಾತನಾಡಿ, ಜೀವನಾನುಭವ, ಸಂವೇದನಾಶೀಲತೆಯಿಂದ ಉತ್ತಮ ಕಥೆಗಳು ರೂಪಗೊಳ್ಳುತ್ತವೆ. ಕಥೆಗಾರರಿಗೆ ಸಮಾಜದ ಬೆಳವಣಿಗೆಗಳ ಕುರಿತು ಸೂಕ್ಷ್ಮಗ್ರಹಿಕೆ ಇರಬೇಕು. ಆಗ ಮಾತ್ರ ಜನರ ಮನಸ್ಸಿಗೆ ಹತ್ತಿರವಾದ ಕಥೆಗಳು ರಚನೆಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿ ಅಧ್ಯಕ್ಷ, ಎಚ್.ಎ. ಬಿಪಿನ್ ಕುಮಾರ್, ಕಥಾಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರೂ ಭಾಗವಹಿಸಿರುವುದು ಖುಷಿ ತಂದಿದೆ. ಸ್ಪರ್ಧೆಗಾಗಿ ಬಂದ ಬಹುತೇಕ ಕಥೆಗಳು ಮಾನವೀಯತೆ ಬಗ್ಗೆ ಅಪಾರ ಕಾಳಜಿ ಉಳ್ಳವಾಗಿದ್ದು, ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಣ್ಣ ಕಥಾಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಭವ್ಯ ಎಲ್, ದ್ವಿತೀಯ ಸ್ಥಾನ ಗಳಿಸಿದ ದೀಪಾ ಹವಾಲ್ದಾರ್, ತೃತೀಯ ಸ್ಥಾನ ಪಡೆದ ಕುಮಾರಿ ಶಿಲ್ಪ .ಎಸ್ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಆನಂದ್ ಎನ್.ಎಲ್, ಲಕ್ಷ್ಮಿಕಾಂತ್ ಎನ್, ಹೇಮಂತ್ ಕುಮಾರ್,ಲಕ್ಷ್ಮಿ ಬಿಪಿನ್ ಕುಮಾರ್, ಯೋಗಗುರುಗಳಾದ ಪ್ರಸಾದ್ ಕುಮಾರ್ ಜಿ.ಸಿ, ಪತಂಜಲಿ ಸಂಸ್ಥೆ ಸ್ವಾಮಿ ಕೆ.ವೈ.ಎಸ್, ಸಾಹಿತ್ಯಾಸಕ್ತರು, ಅಂಗನವಾಡಿ ಕಾರ್ಯಕರ್ತೆಯರು, ಶಾಲೆ ಶಿಕ್ಷಕವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))