ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಗ್ರಾಮೀಣ ಪ್ರದೇಶದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳು ಶೇ.೯೨ಕ್ಕೂ ಹೆಚ್ಚು ಅಂಕ ಪಡೆದಿದ್ದು, ಇವರ ಉನ್ನತ ಶಿಕ್ಷಣಕ್ಕೆ ಪೂರಕವಾದ ಬುನಾದಿ ಹಾಕಿಕೊಡುವಲ್ಲಿ ಶಾಲೆಯ ಮುಖ್ಯ ಶಿಕ್ಷಕರ ಬದ್ಧತೆ ಅಡಗಿದೆ ಎಂದು ಶಿಕ್ಷಕರ ಕಾರ್ಯವನ್ನು ಬಿಇಒ ಸೋಮಲಿಂಗೇಗೌಡ ಅಭಿನಂದಿಸಿದರು.ಪಟ್ಟಣದ ಶಿಕ್ಷಕರ ಭವನದ ಸಭಾಂಗಣದಲ್ಲಿ ನರಸೀಪುರ ದೊಡ್ಡಮನೆ ಸುಜನಾ ಚಾರಿಟೆಬಲ್ ಟ್ರಸ್ಟ್ ಹಾಗೂ ಕೆನರ ಬ್ಯಾಂಕ್ ಜುಬಲಿ ಎಜುಕೇಶನ್ ಟ್ರಸ್ಟ್ ಸಂಸ್ಥೆಗಳ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ ಏಳು ವರ್ಷಗಳಿಂದ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ, ಉತ್ತೇಜಿಸುವ ಟ್ರಸ್ಟ್‌ಗಳ ಕಾರ್ಯ ಶ್ಲಾಘನೀಯವೆಂದರು. ಹಾಸನ ಜಿಲ್ಲೆ ಕೆನರ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ವತಿ ಮಾತನಾಡಿ, ಹಲವಾರು ಕ್ಷೇತ್ರದಲ್ಲಿ ಸಾಧಕರನ್ನು ಕಾಣಬಹುದಾಗಿದೆ. ಅಂತಹ ಸಾಧಕರಿಗೆ ಉತ್ತಮ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿ, ಅವುಗಳ ಪಾಲನೆ ಮಾಡುವಂತಹ ಸಂಸ್ಕಾರ ಕಲಿಸುವ ಶಿಕ್ಷಕರ ನಿಸ್ವಾರ್ಥ ಸೇವೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲವೆಂದು ತಿಳಿಸಿದರು. ನಂತರ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಶೇ.೧೦೦ ಫಲಿತಾಂಶ ಪಡೆದ ೪ ಶಾಲೆಗಳ ಮುಖ್ಯ ಶಿಕ್ಷಕರಿಗೆ ವೈಯಕ್ತಿಕವಾಗಿ ನೆನಪಿನ ಕಾಣಿಕೆ ನೀಡಿ ವಂದಿಸಿದರು. ಕೆನರ ಬ್ಯಾಂಕ್ ಜುಬಲಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ಅನಂತರಾಮ್ ಭಟ್, ಟ್ರಸ್ಟ್ ಸದಸ್ಯರಾದ ಅನಂತಮೂರ್ತಿ ಹಾಗೂ ಎನ್.ಎಸ್. ಪ್ರಕಾಶ್ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ೫ ಬಂದ ವಿದ್ಯಾರ್ಥಿಗಳು ಹಾಗೂ ಶೇ. ೮೯ಕ್ಕಿಂತ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಗಳ ೨೨ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ರಷ್ಟು ಫಲಿತಾಂಶ ಪಡೆದ ೪ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ, ಪಾರಿತೋಷಕ ನೀಡಿ ಗೌರವಿಸಲಾಯಿತು. ಇಸಿಒ ಕೇಶವ, ಟ್ರಸ್ಟ್ ಸದಸ್ಯರಾದ ಶೈಲಜಾ, ಭಾರತಿ ಗಿರೀಶ್, ಅಕ್ಷರ ದಸೋಹ ವಿಭಾಗದ ರಾಮಚಂದ್ರ, ಇತರರು ಇದ್ದರು.