ಸೌಹಾರ್ದ ನೆಲೆಯಲ್ಲಿ ಮನುಷ್ಯನ ಬೆಸೆಯುವ ಸಾಹಿತ್ಯ: ಭಾರತ ಜ್ಞಾನ ವಿಜ್ಞಾನ ಸಮಿತಿಯ ಟಿ.ಎ.ಪ್ರಶಾಂತಬಾಬು

| Published : Mar 31 2024, 02:03 AM IST

ಸೌಹಾರ್ದ ನೆಲೆಯಲ್ಲಿ ಮನುಷ್ಯನ ಬೆಸೆಯುವ ಸಾಹಿತ್ಯ: ಭಾರತ ಜ್ಞಾನ ವಿಜ್ಞಾನ ಸಮಿತಿಯ ಟಿ.ಎ.ಪ್ರಶಾಂತಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಭಾರತ ಜ್ಞಾನ ವಿಜ್ಞಾನ ಸಮಿತಿಯು ಎವಿಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ಮಕ್ಕಳ ಸಾಹಿತ್ಯ ಸಂಭ್ರಮ

ಕನ್ನಡಪ್ರಭ ವಾರ್ತೆ ಹಾಸನ

ಕಲೆ ಮತ್ತು ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ಎಂದರೆ ಅದು ಎಲ್ಲವನ್ನು ಒಳಗೊಳ್ಳುವ ಗುಣ. ಅದಕ್ಕೆ ಹೆಣ್ಣು ಗಂಡು ಭೇದವಿಲ್ಲ. ಬಡವ ಶ್ರೀಮಂತ ಎನ್ನುವ ಭೇದವಿಲ್ಲ, ದೇಶ ಭಾಷೆಗಳ ಗಡಿಗಳಿಲ್ಲ ಹಾಗಾಗಿ ಕಲೆ ಮತ್ತು ಸಾಹಿತ್ಯ ಮನುಷ್ಯ ಕುಲವನ್ನು ಸೌಹಾರ್ದದ ನೆರಳಿನಲ್ಲಿ ಕಟ್ಟಬಲ್ಲ ಅತಿ ದೊಡ್ಡ ಆಕರಗಳಾಗಿವೆ. ಈ ಆಕರಗಳನ್ನು ಎಳೆಯ ವಯಸ್ಸಿನಲ್ಲೇ ಮಕ್ಕಳಲ್ಲಿ ಬೇರೂರಿಸಿದರೆ ನೆಲಕ್ಕೊಂದು ಸಾಂಸ್ಕೃತಿಕ ಪ್ರತಿಭೆಯನ್ನು ಕೊಟ್ಟಂತಾಗುತ್ತದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ. ಪ್ರಶಾಂತಬಾಬು ಹೇಳಿದರು.

ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿಯು ಎವಿಕೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.

ಫೆಬ್ರವರಿ - ಮಾರ್ಚ್ ತಿಂಗಳ ೨೦ ದಿನಗಳ ಅವಧಿಯಲ್ಲಿ ಇಡೀ ರಾಜ್ಯಾದ್ಯಂತ ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಅಧ್ಯಾಯ ರಚಿಸಲಾಯಿತು. ಅದೇ ಮಕ್ಕಳ ಸಾಹಿತ್ಯ ಸಂಭ್ರಮ. ಈ ಪರಿಕಲ್ಪನೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಆರ್.ಡಿ.ಪಿ.ಆರ್. ಜತೆಗೂಡಿ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ನಡೆಸಿದ ಬೃಹತ್ ಮಕ್ಕಳ ಹಬ್ಬವೇ ಮಕ್ಕಳ ಸಾಹಿತ್ಯ ಸಂಭ್ರಮ ಎಂದು ವಿಶ್ಲೇಷಿಸಿದರು.

ಆರ್.ಡಿ.ಪಿ.ಆರ್. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯಗಳನ್ನು ತೆರೆದಿದೆ, ಅದಕ್ಕೆ ಬೇಕಾಗಿರುವ ಮೂಲಭೂತ ಪರಿಕರಗಳನ್ನು ಕೂಡ ಒದಗಿಸಿದೆ. ಆದರೂ ಗ್ರಂಥಾಲಯಗಳಿಗೆ ಮಕ್ಕಳಾಗಲಿ, ಜನರಾಗಲಿ ಬರುತ್ತಿಲ್ಲ. ಕನ್ನಡ ಸಾಹಿತ್ಯದಲ್ಲಿ ಶ್ರೀಮಂತ ಸಾಹಿತ್ಯವಿದ್ದರೂ ಮಕ್ಕಳ ಸಾಹಿತ್ಯ ಬಹಳ ಕಡಿಮೆ ಇರುವುದು ಕಂಡು ಬಂದಿದೆ. ಹಾಗಾಗಿ ಮಕ್ಕಳ ಸಾಹಿತ್ಯ ರಚನೆ ಮಕ್ಕಳಿಂದಲೇ ಮಾಡಿಸಬೇಕು ಎಂದು ಮನಗಂಡು ಬಿ.ಜಿ.ವಿ.ಎಸ್. ಮಕ್ಕಳಲ್ಲಿಯೇ ಸಾಹಿತ್ಯ ಸೃಷ್ಟಿಸಿ ಪುಸ್ತಕ ಮಾಡಿ ಗ್ರಂಥಾಲಯಗಳಿಗೆ ತುಂಬಬೇಕು ಎಂಬ ಮಹದಾಸೆಯಿಂದ ಮಕ್ಕಳ ಸಾಹಿತ್ಯ ಸಂಭ್ರಮವನ್ನು ಆರ್‌ಡಿಪಿಆರ್ ನೇತೃತ್ವದಲ್ಲಿ ಆಯೋಜಿಸಿತ್ತು. ಕೇವಲ ೨೦ ದಿನಗಳಲ್ಲಿ ರಾಜ್ಯಾದ್ಯಂತ ೭೩ ಗ್ರಾಮ ಪಂಚಾಯಿತಿಗಳಲ್ಲಿ ಸುಮಾರು ೮೦೦೦ ಮಕ್ಕಳು, ಒಂದುವರೆ ಸಾವಿರ ಶಿಕ್ಷಕರು ಕೂಡಿಕೊಂಡು ೨೦,೦೦೦ ಪುಟಗಳ ಮಕ್ಕಳ ಸಾಹಿತ್ಯವನ್ನು ಮಕ್ಕಳು, ಒಂದು ಸಾವಿರ ಪುಟಗಳ ಮಕ್ಕಳ ಸಾಹಿತ್ಯವನ್ನು ಶಿಕ್ಷಕರು ರಚಿಸಿರುವುದು ಕನ್ನಡ ಸಾಹಿತ್ಯದ ಒಂದು ಮಹತ್ವ ಘಟ್ಟವೇ ಹೌದು ಎಂದು ಹೇಳಿದರು.ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷೆ ಡಾ.ಎ.ಸಾವಿತ್ರಿ ಮಾತನಾಡಿ, ವೈಜ್ಞಾನಿಕ ಮನೋವೃತ್ತಿ, ಪರಿಸರ ಕಾಳಜಿ, ಆರೋಗ್ಯದ ಚಿಂತನೆ ಹಾಗೂ ಸಾಂವಿಧಾನಿಕ ಮೌಲ್ಯಗಳು ಮಾನವೀಯ ಅಂತಃಕರಣದ ಮುತ್ತುರತ್ನಗಳು. ಇವನ್ನು ಜನತೆಯಲ್ಲಿ ಅಚ್ಚೊತ್ತಿಸಲು ಸಾಹಿತ್ಯ ಪರಿಣಾಮಕಾರಿ ಮಾಧ್ಯಮ. ಅದರಲ್ಲೂ ಮಕ್ಕಳಲ್ಲಿ ಸಾಹಿತ್ಯದ ಅಭಿವ್ಯಕ್ತಿಯನ್ನು ಎಳೆಯದರಲ್ಲಿಯೇ ಚಿಗುರಿಸಿದರೆ ಆ ಮಗು ಆದರ್ಶ ನಾಗರಿಕನಾಗುವುದರಲ್ಲಿ ಸಂಶಯವಿಲ್ಲ ಎಂದರು.

ಕೇವಲ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯ ಎಂಟು ತಾಲೂಕಿನ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಸುಮಾರು ೯೦೦ ಮಕ್ಕಳಿಗೆ ಸಾಹಿತ್ಯದ ಬೇರೆ ಬೇರೆ ಮಜಲುಗಳಲ್ಲಿ ಬರೆಯುವ ಕೌಶಲ್ಯ ಮೂಡಿಸಿ ಸಾಹಿತ್ಯ ಸೃಷ್ಟಿಸಲು ಕಾರಣಕರ್ತರಾದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಿದರು.ಮಕ್ಕಳ ಸಾಹಿತ್ಯ ಸಂಭ್ರಮದ ಜಿಲ್ಲಾ ಸಂಚಾಲಕಿ ಪ್ರಮೀಳಾ, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ, ರಾಜ್ಯ ಸಂಪನ್ಮೂಲ ವ್ಯಕ್ತಿ ತನ್ವೀರ್, ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜು, ಶಿಕ್ಷಕ ಬಿ.ಎಸ್.ದೇಸಾಯಿ, ಖ್ಯಾತ ಸಾಹಿತಿ, ಕಲಾವಿದ ಗ್ಯಾರಂಟಿ ರಾಮಣ್ಣ, ಎವಿಕೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಇದ್ದರು. ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷೆ ಸೌಭಾಗ್ಯ ನಿರೂಪಿಸಿದರು, ಬಿಜಿವಿಎಸ್ ಹಾಸನ ತಾಲೂಕು ಕಾರ್ಯದರ್ಶಿ ವನಜಾಕ್ಷಿ ಸ್ವಾಗತಿಸಿ, ಬಿಜಿವಿಎಸ್ ತಾಲೂಕು ಅಧ್ಯಕ್ಷೆ ಆರ್. ರಾಧಾ ವಂದಿಸಿದರು.ಹಾಸನದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಸಂಭ್ರಮ ಯಶಸ್ವಿಗೊಳಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಅಭಿನಂದಿಸಲಾಯಿತು.