ಪೂನಾ ಒಪ್ಪಂದವನ್ನು ನವಭಾರತ ನಿರ್ಮಾಣದ ವಿಷಯವಾಗಿ ಚರ್ಚಿಸಬೇಕು

| Published : Sep 25 2024, 12:49 AM IST

ಪೂನಾ ಒಪ್ಪಂದವನ್ನು ನವಭಾರತ ನಿರ್ಮಾಣದ ವಿಷಯವಾಗಿ ಚರ್ಚಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧೀಜಿ ಅವರ ಪ್ರಾಣ ಕಾಪಾಡುವ ಉದ್ದೇಶದಿಂದ ಒತ್ತಡಕ್ಕೆ ಮಣಿದು ಡಾ. ಅಂಬೇಡ್ಕರ್ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದು, ಪೂನಾ ಒಪ್ಪಂದಕ್ಕೆ ಒಪ್ಪಿಕೊಂಡಿದ್ದರು

----ಕನ್ನಡಪ್ರಭ ವಾರ್ತೆ ಮೈಸೂರು

ಪೂನಾ ಒಪ್ಪಂದದ ವಾಗ್ವಾದವನ್ನು ಕೇವಲ ರಾಜಕೀಯ ದೃಷ್ಟಿಕೋನದಿಂದ ಗ್ರಹಿಸದೆ, ವರ್ತಮಾನದ ರಾಜಕೀಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಚಿಂತಿಸಬೇಕು. ಪೂನಾ ಒಪ್ಪಂದವನ್ನು ನವಭಾರತ ನಿರ್ಮಾಣದ ವಿಷಯವಾಗಿ ಚರ್ಚಿಸಬೇಕು ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಪೀಠದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಸಾಹಿತಿ ಪ್ರೊ. ರಹಮತ್‌ ತರೀಕೆರೆ ತಿಳಿಸಿದರು.

ಮಾನಸಗಂಗೋತ್ರಿಯ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರವು ಮಂಗಳವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಪೂನಾ ಒಪ್ಪಂದ– ಒಂದು ನೋಟ ಕುರಿತು ಮಾತನಾಡಿದ ಅವರ, ಪೂನಾ ಒಪ್ಪಂದದ ಘಟನೆಯಿಂದ ಭಾರತದ ಕುರಿತು ಡಾ. ಅಂಬೇಡ್ಕರ್‌ ಪರಿಕಲ್ಪನೆ ಬದಲಾಗಿ ಸಂವಿಧಾನ ರೂಪುಗೊಂಡಿತು ಎಂದರು.

ಮಹಾತ್ಮ ಗಾಂಧೀಜಿ ಅವರ ಪ್ರಾಣ ಕಾಪಾಡುವ ಉದ್ದೇಶದಿಂದ ಒತ್ತಡಕ್ಕೆ ಮಣಿದು ಡಾ. ಅಂಬೇಡ್ಕರ್ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದು, ಪೂನಾ ಒಪ್ಪಂದಕ್ಕೆ ಒಪ್ಪಿಕೊಂಡಿದ್ದರು. ನಂತರ ದಲಿತರನ್ನು ಮುನ್ನಲೆಗೆ ತರಲು ಬೇರೆ ಶಕ್ತಿಯ ಹುಡುಕಾಟ ಮಾಡಬೇಕಿದೆ ಎಂದಿದ್ದರು. ಅಲ್ಲದೆ, ಬೌಧ ಧರ್ಮ ಸ್ವೀಕರಿಸಿ ದಮನಿತರ ವಿಮುಕ್ತಿಗೆ ಕೆಲಸ ಮಾಡಿದರು ಎಂದು ಅವರು ಹೇಳಿದರು.

ದೇಶದ ದಮನಿತ ವರ್ಗಗಳನ್ನು ಪ್ರತಿನಿಧಿಸುವ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಕಾಲಘಟ್ಟದಲ್ಲಿ ಡಾ. ಅಂಬೇಡ್ಕರ್ ಮತ್ತು ಗಾಂಧೀಜಿ ಅವರನ್ನು ಮುಖಾಮುಖಿಯಾಗಿಸಿ ದೇಶ ಕಟ್ಟುವ ಚಿಂತನೆ ನಡೆಸಬೇಕು. ಬದಲಾಗಿ ಅವರನ್ನು ನಾಯಕ, ಖಳನಾಯಕರಾಗಿ ಬೇರ್ಪಡಿಸಬಾರದು ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಎನ್‌.ಕೆ. ಲೋಕನಾಥ್‌ ಮಾತನಾಡಿ, ಮಾಹಿತಿ ಯುಗದಲ್ಲಿ ಇತಿಹಾಸದ ಓದು ಮರೆಯಾಗಿದೆ. ಓದಿನಿಂದ ಪ್ರಮುಖ ವ್ಯಕ್ತಿಗಳ ಪರಿಚಯವಾಗುತ್ತದೆ. ಅವರು ದೇಶದಲ್ಲಿ ತಂದ ಬದಲಾವಣೆಯ ಬಗ್ಗೆ ತಿಳಿಯುತ್ತದೆ. ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡವರು ದೊಡ್ಡ ಮಟ್ಟಿನಲ್ಲಿ ಬೆಳೆದಿದ್ದಾರೆ ಎಂದು ಹೇಳಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಜೆ. ಸೋಮಶೇಖರ್, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರಕುಮಾರ್ ಇದ್ದರು.

----

ಕೋಟ್...

ಪ್ರಸ್ತುತ ದೇಶದಲ್ಲಿ ಎರಡು ಸಿದ್ಧಾಂತಗಳ ಸಂಘರ್ಷ ನಡೆಯುತ್ತಿದೆ. ಒಂದು ಸಿದ್ಧಾಂತವು ಒಂದೇ ಚುನಾವಣೆ, ನಾಯಕ, ಧರ್ಮ, ಸಂಸ್ಕೃತಿ ಹೇರಲು ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಮತ್ತೊಂದು ಸಿದ್ಧಾಂತ ದೇಶದ ವೈವಿಧ್ಯತೆ ಮತ್ತು ಭಾತೃತ್ವ ಕಾಪಾಡಲು ಕೆಲಸ ಮಾಡುತ್ತಿದೆ.

- ಪ್ರೊ. ರಹಮತ್ ತರೀಕೆರೆ, ಸಾಹಿತಿ