ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ಪ್ರಚಲಿತ ಸಾಮಾಜಿಕ ವ್ಯವಸ್ಥೆ, ಸಮಸ್ಯೆಗಳಿಗೆ ವರಕವಿ ದ.ರಾ. ಬೇಂದ್ರೆ ಅವರು ತಮ್ಮ ಕಾವ್ಯ ಹಾಗೂ ಸಾಹಿತ್ಯದ ಮೂಲಕ ಸ್ಪಂದಿಸುತ್ತಿದ್ದರು. ಕಠೋರವಾಗಿಯೇ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಅವರು ಜೈಲಿಗೂ ಹೋಗಿ ಬಂದಿದ್ದಾರೆ. ಆದರೆ, ಪ್ರಸ್ತುತ ಯಾವ ಸಾಹಿತಿಗಳು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ಜ್ಞಾನ ಹೊಂದಿಲ್ಲ ಎಂದು ಬೇಂದ್ರೆ ಸಂಶೋಧನಾ ಕೇಂದ್ರದ ನಿರ್ದೇಶಕರು, ಹಿರಿಯ ವಿಮರ್ಶಕರಾದ ಡಾ.ಕೆ.ಎಸ್. ಶರ್ಮಾ ಹೇಳಿದರು.ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತ್ಯ ಸಹವಾಸ ಎಂಬ ಕಾರ್ಯಕ್ರಮದಲ್ಲಿ ಬೇಂದ್ರೆ ಕುರಿತಾದ ಯು.ಆರ್. ಅನಂತಮೂರ್ತಿ ಅವರ ವಿಡಿಯೋ ಸರಣಿ ಬಿಡುಗಡೆ ಮಾಡಿ ಮಾತನಾಡಿದರು.
ಯಾವತ್ತೂ ಪ್ರಜಾಪ್ರಭುತ್ವ ರಾಕ್ಷಸಸತ್ತೆಯಾಗಬಾರದು ಎಂದಿದ್ದರು. ಆದರೆ, ಪ್ರಸ್ತುತ ಪ್ರಜಾಸತ್ತೆಯು ರಾಕ್ಷಸಸತ್ತೆಯಾಗುತ್ತಿರುವುದು ಖೇದಕರ ಸಂಗತಿ. ಈ ಕುರಿತಾಗಿ ಯಾವ ಸಾಹಿತಿಗಳು ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ವಿಶ್ವ ಸಾಹಿತ್ಯಕ್ಕೆ ಡಾ. ದ.ರಾ. ಬೇಂದ್ರೆ ಅವರ ಕೊಡುಗೆ ಅಪಾರ. ಆರು ಸಂಪುಟಗಳಲ್ಲಿ ಬೇಂದ್ರೆ ಅವರ 1427 ಕವನಗಳ ಸಂಗ್ರಹ ಹಾಗೂ 10 ಗದ್ಯ ಸಾಹಿತ್ಯ ಸೇರಿ 16 ಸಂಪುಟದಲ್ಲಿ ಅವರ ಸಾಹಿತ್ಯವಿದೆ. ಔದುಂಬರ ಗಾಥೆ ಅವರ ಜೀವನದ ಮಹಾಕಾವ್ಯ. ಪ್ರಸ್ತುತ ನಮ್ಮಲ್ಲಿ ಯುದ್ಧ-ಅಕ್ರಮ, ಸ್ತ್ರೀ ಸೇರಿದಂತೆ ಹಲವು ವಿಷಯಗಳಲ್ಲಿ ಮಹಾಕಾವ್ಯಗಳಿದ್ದು, ಮಾನವೀಯತೆಯ ಅವಿರ್ಭಾವ ಬಿಂಬಿಸುವ ಮಹಾಕಾವ್ಯ ಔದುಂಬರ ಗಾಥೆಯಾಗಿದೆ ಎಂದ ಅವರು, ಬೇಂದ್ರೆ ಅವರು ವಿಜ್ಞಾನದಲ್ಲಿ ಆಳವಾದ ಜ್ಞಾನ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಸಂಶೋಧನೆ ಮಾಡಿದವರು. ತಮ್ಮ ವಿಜ್ಞಾನ ಹಾಗೂ ಸಂಖ್ಯಾಶಾಸ್ತ್ರದ ಜ್ಞಾನವನ್ನು ಸಾಹಿತ್ಯದಲ್ಲೂ ಅಳವಡಿಸಿದ ಮೊದಲ ಕವಿ ಇವರು. ಅವರ ವೈಯಕ್ತಿಕ ಗ್ರಂಥಾಲಯದಲ್ಲಿ 16 ಸಾವಿರ ಕೃತಿಗಳಿವೆ. ಕೃತಿಗಳೆಂದರೆ ಬರೀ ಪುಸ್ತಕಗಳು ಮಾತ್ರವಲ್ಲದೇ ಟಿಪ್ಪಣಿಗಳು ಸಾಕಷ್ಟಿವೆ. ಅದರಲ್ಲೂ ವಿಜ್ಞಾನ ಹಾಗೂ ಸಂಖ್ಯೆಗಳ ಬಗ್ಗೆ ಟಿಪ್ಪಣಿಗಳಿರುವುದು ವಿಶೇಷ ಎಂದು ಬೇಂದ್ರೆ ಸಾಹಿತ್ಯದ ಸಂಪುಟಗಳನ್ನು ಪ್ರದರ್ಶಿಸಿ ಡಾ. ಶರ್ಮಾ ಬೇಂದ್ರೆ ಅವರನ್ನು ಸುವಿವರವಾಗಿ ಪರಿಚಯಿಸಿದರು.
ಬಡತನ ತೊಲಗಬೇಕು ಎಂಬುದಕ್ಕಿಂತ ಬಡತನ ನಿರ್ಬೀಜಗೊಳ್ಳಬೇಕು ಎಂಬ ಸಾಮಾಜಿಕ ಕಾಳಜಿ ಅವರಲ್ಲಿತ್ತು. ಸಾಹಿತ್ಯ ಬರೀ ಸಾಹಿತ್ಯವಾಗದೇ ಅದು ಕ್ರಿಯೆಗೂ ಬರಬೇಕು. ಸಾಮಾಜಿಕ ಕಳಕಳಿಯ ಸಾಹಿತ್ಯವೂ ಇರಬೇಕು ಎಂದಿದ್ದ ಬೇಂದ್ರೆ ಅವರ ಪ್ರತಿ ಜನ್ಮದಿನದ ದಿನ ಸಂದರ್ಶನ ಮಾಡುತ್ತಿದ್ದೇನು. ವಿಶ್ವದ ಶಾಂತಿ ಬಗ್ಗೆಯೂ ಮಾತನಾಡುತ್ತಿದ್ದ ಅವರು, ವಿಶ್ವಕ್ಕೆ ಬರೀ ಶಾಂತಿ ಮಾತ್ರವಲ್ಲದೇ ಸರಿ ಸಮಾನತೆಯ, ನವನಿರ್ಮಾಣದ ಅವಿರ್ಭಾವದ ಶಾಂತಿ ನೆಲಸಬೇಕು ಎಂದು ಡಾ. ಬೇಂದ್ರೆ ಪ್ರತಿಪಾದಿಸಿದ್ದರು ಎಂದು ಡಾ. ಶರ್ಮಾ ಬೇಂದ್ರೆ ಅವರನ್ನು ತೆರೆದಿಟ್ಟರು.ಅಜೀಂ ಪ್ರೇಮ್‌ಜಿ ಫೌಂಡೇಶನ್ ಮುಖ್ಯ ಸಂವಹನಾಧಿಕಾರಿ ಸುಧೀಶ ವೆಂಕಟೇಶ್ ವಿಶ್ವವಿದ್ಯಾಲಯ ರಾಜ್ಯದ ಬೇರೆ ಬೇರೆ ಪ್ರಾಂತದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ವಿವೇಕ ಶಾನಭಾಗ ಅಧ್ಯಕ್ಷತೆ ವಹಿಸಿ, ಮಾಸ್ತಿ-ಬೇಂದ್ರೆ-ಕಾರ್ನಾಡರು-ಯು.ಆರ್. ಅನಂತಮೂರ್ತಿ ಅವರ ಕಾಲದ ಸಾಹಿತಿಗಳು ತಮ್ಮ ತಮ್ಮಲ್ಲಿಯೇ ಸೃಜನಶೀಲ ಸ್ಪರ್ಧೆ ಎದುರಿಸುತ್ತಿದ್ದರು. ಈಗಿನ ಸಾಹಿತಿಗಳಲ್ಲಿ ಅದು ಕಾಣುತ್ತಿಲ್ಲ. ಬರೀ ಮಾರುಕಟ್ಟೆ ಆಧಾರಿತ ಸ್ಪರ್ಧೆ ಎದುರಿಸುವಂತಾಗಿದೆ ಎಂದರು. ಪುನರ್ವಸು ಬೇಂದ್ರೆ ಇದ್ದರು. ಸಿ.ಎಸ್. ಮಹೇಶಕುಮಾರ ನಿರೂಪಿಸಿದರು.