ಕೃಷಿಯೊಂದಿಗೆ ಜೀವನ ನಡೆಸಿದರೆ ಆರೋಗ್ಯಯುತ ಬದುಕು

| Published : Feb 21 2025, 12:47 AM IST

ಸಾರಾಂಶ

ಹಿಂದೆ ಕೃಷಿಕರು ಹೆಚ್ಚು ಶಿಕ್ಷಣ ಪಡೆಯದಿದ್ದರೂ ತಮ್ಮ ಮನೆಯಲ್ಲಿ ಹತ್ತಾರು ದನಕರುಗಳು, ದೊಡ್ಡ ಕೊಟ್ಟಿಗೆ, ತಿಪ್ಪೆಯಲ್ಲಿ ಸೊಪ್ಪು ಸಗಣಿ ಸಂಗ್ರಹಿಸಿ ಗೊಬ್ಬರ ಮಾಡಿಕೊಂಡು, ತಮ್ಮ ಜಮೀನಿಗೆ ಹಾಕಿ ಉತ್ತಮ ಗುಣಮಟ್ಟದ ಬೆಳೆ ಬೆಳೆಯುತ್ತಿದ್ದರು. ತಾವು ಬೆಳೆದ ಬೆಳೆಯನ್ನು ಪರಿಷ್ಕರಿಸಿ ಆಹಾರವಾಗಿ ಬಳಸಿಕೊಂಡು ಆರೋಗ್ಯವಂತರಾಗಿದ್ದರು. ಹತ್ತಾರು ಮಕ್ಕಳನ್ನು ಹೆತ್ತು ಆರೋಗ್ಯಪೂರ್ಣರಾಗಿ ಸಾಕುತ್ತಿದ್ದರು. ಏನೇನೂ ಯಾಂತ್ರಿಕ ಸೌಲಭ್ಯವಿಲ್ಲದ ಕಾಲದಲ್ಲಿ ಕೃಷಿ ಮಾಡಿಕೊಂಡು, ತಮ್ಮ ಅಂತ್ಯದ ದಿನದವರೆಗೂ ಕಾಯಿಲೆಗಳನ್ನು ಕಂಡಿರಲಿಲ್ಲ. ಆಸ್ಪತ್ರೆಗಳ ಸಂಖ್ಯೆಯೂ ಕಡಿಮೆಯಿತ್ತು ಎಂದು ಡಾ. ವಿಜಯ್ ಅಂಗಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಆಲೂರು

ಯುವಜನರು ಜ್ಞಾನಕ್ಕೋಸ್ಕರ ಶಿಕ್ಷಣ ಪಡೆದುಕೊಂಡು ಗ್ರಾಮೀಣ ಪ್ರದೇಶದಲ್ಲಿ ಕೃಷಿಯೊಂದಿಗೆ ತಮ್ಮ ಜೀವನ ನಡೆಸಿದರೆ ಆರೋಗ್ಯವಂತರಾಗಿ ಬದುಕಬಹುದು ಎಂದು ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಆಕಾಶವಾಣಿ ಕಾರ್ಯ ನಿರ್ವಾಹಕ ಡಾ. ವಿಜಯ್ ಅಂಗಡಿ ಕರೆ ನೀಡಿದರು.

ಕಸಬಾ ಮರಸು ಗ್ರಾಮದಲ್ಲಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದಲ್ಲಿ, ಕೃಷಿ ತೋಟಗಾರಿಕೆ ಮತ್ತು ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ನೀಡಿದರು.

ಹಿಂದೆ ಕೃಷಿಕರು ಹೆಚ್ಚು ಶಿಕ್ಷಣ ಪಡೆಯದಿದ್ದರೂ ತಮ್ಮ ಮನೆಯಲ್ಲಿ ಹತ್ತಾರು ದನಕರುಗಳು, ದೊಡ್ಡ ಕೊಟ್ಟಿಗೆ, ತಿಪ್ಪೆಯಲ್ಲಿ ಸೊಪ್ಪು ಸಗಣಿ ಸಂಗ್ರಹಿಸಿ ಗೊಬ್ಬರ ಮಾಡಿಕೊಂಡು, ತಮ್ಮ ಜಮೀನಿಗೆ ಹಾಕಿ ಉತ್ತಮ ಗುಣಮಟ್ಟದ ಬೆಳೆ ಬೆಳೆಯುತ್ತಿದ್ದರು. ತಾವು ಬೆಳೆದ ಬೆಳೆಯನ್ನು ಪರಿಷ್ಕರಿಸಿ ಆಹಾರವಾಗಿ ಬಳಸಿಕೊಂಡು ಆರೋಗ್ಯವಂತರಾಗಿದ್ದರು. ಹತ್ತಾರು ಮಕ್ಕಳನ್ನು ಹೆತ್ತು ಆರೋಗ್ಯಪೂರ್ಣರಾಗಿ ಸಾಕುತ್ತಿದ್ದರು. ಏನೇನೂ ಯಾಂತ್ರಿಕ ಸೌಲಭ್ಯವಿಲ್ಲದ ಕಾಲದಲ್ಲಿ ಕೃಷಿ ಮಾಡಿಕೊಂಡು, ತಮ್ಮ ಅಂತ್ಯದ ದಿನದವರೆಗೂ ಕಾಯಿಲೆಗಳನ್ನು ಕಂಡಿರಲಿಲ್ಲ. ಆಸ್ಪತ್ರೆಗಳ ಸಂಖ್ಯೆಯೂ ಕಡಿಮೆಯಿತ್ತು. ವೈದ್ಯರೂ ಕಡಿಮೆ ಇದ್ದರು. ಈಗ ಜೀವನದ ಕ್ರಮ ಬದಲಾಗಿ ಎಲ್ಲವೂ ಇಮ್ಮಡಿಯಾಗಿದೆ. ಭೂಮಂಡಲವೇ ವಿಷಕಾರಿಯಾಗಿರುವುದರಿಂದ ಸರ್ಕಾರ ಪ್ರತಿ ವರ್ಷ ಸಾವಿರಾರು ವೈದ್ಯರನ್ನು ಸೃಷ್ಟಿ ಮಾಡುತ್ತಿದೆ. ಇದನ್ನು ನಾವು ಪರಾಮರ್ಶೆ ಮಾಡಿಕೊಳ್ಳಬೇಕು ಎಂದರು.

ವಕೀಲ ಕೆ. ಜಿ. ನಾಗರಾಜು ಮಾತನಾಡಿ, ಹಿಂದೆ, ಇಂದು ಮತ್ತು ಮುಂದಿನ ಜೀವನ ಹೇಗಿರುತ್ತದೆ ಎಂಬ ಬಗ್ಗೆ ಎಲ್ಲರೂ ಅರಿತು ಬಾಳಬೇಕು. ಹಿಂದೆ ಪ್ರತಿಯೊಂದು ಮನೆ ಮುಂದೆ ಸಗಣಿಯಲ್ಲಿ ಸಾರಿಸಿ ರಂಗೋಲಿ ಬಿಡಿಸುತ್ತಿದ್ದರು. ಮನೆ ಗೋಡೆಯನ್ನೂ ಸಹ ಸಗಣಿಯಲ್ಲಿ ಸಾರಿಸುತ್ತಿದ್ದರು. ಒಕ್ಕಲು ಕಣಗಳನ್ನು ಸಗಣಿಯಿಂದ ಸಾರಿಸಿ ಬೆಳೆ ಒಕ್ಕಣೆ ಮಾಡುತ್ತಿದ್ದರು. ಈಗ ಸಿಮೆಂಟ್ ರಸ್ತೆ ಮೇಲೆ ಒಕ್ಕಣೆ ಮಾಡುತ್ತಿದ್ದಾರೆ. ಕೈ, ಕಾಲು ತೊಳೆಯದೆ ಮನೆಗೆ ಪ್ರವೇಶ ಮಾಡುತ್ತಾರೆ. ಇದರಿಂದ ರೋಗರುಜಿನಗಳು ಎಡತಾಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರ ಬಳಸುವುದರೊಂದಿಗೆ, ಸಾವಯವ ಕೃಷಿಯೊಂದಿಗೆ ಬದುಕು ಕಟ್ಟಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಹಾಗೂ ಗುತ್ತಿಗೆದಾರ ಆನಂದ್, ಮಿಂಚು ಆನಂದ್, ಎಂ. ಆರ್. ನಾಗೇಶ್ ಉಪಸ್ಥಿತರಿದ್ದರು.