ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಜಮೀನಿನ ಮಾಲೀಕ ಹೊರ ಹಾಕಿದ್ದರಿಂದ ಗುಡಿಸಲು ಕಳೆದುಕೊಂಡು ನೆಲೆ ಇಲ್ಲದೆ ಬೀದಿಗೆ ಬಿದ್ದು ರಸ್ತೆ ಬದಿಯಲ್ಲಿ ಜೀವನ ನಡೆಸುತ್ತಿರುವ ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದ ಪ. ಜಾತಿ ಹಂದಿಜೋಗಿ ಸಮುದಾಯದ ಎರಡು ಕುಟುಂಬಗಳವರನ್ನು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ರಂಗೇಗೌಡ ಭೇಟಿ ನೀಡಿ ಆಹಾರ ಸಾಮಗ್ರಿ ಮತ್ತು ಮನೆಯ ಕೀ ಹಸ್ತಾಂತರಿಸಿದರು.ಈ ವೇಳೆ ಸಂತ್ರಸ್ತೆ ಎಲ್ಲಮ್ಮ ಮಾತನಾಡಿ, ನಾವು ಇದುವರೆಗೂ ಒತ್ತುವರಿ ಜಮೀನಿನಲ್ಲಿ ಜೀವಿಸುತ್ತಿದ್ದೆವು, ಜಮೀನಿನ ಮಾಲೀಕರ ಮೋಸದಿಂದಾಗಿ ನಮ್ಮ ಗುಡಿಸಲು ಕಳೆದುಕೊಂಡು ನೆಲೆ ಇಲ್ಲದೆ ರಸ್ತೆ ಬದಿಯಲ್ಲಿ ಜೀವನ ನಡೆಸುವಂತಾಗಿದೆ. ಆದ್ದರಿಂದ ಜಮೀನಿನ ಸರ್ವೆ ಕಾರ್ಯ ನಡೆಸಿ ನಮಗೆ ನ್ಯಾಯ ಒದಗಿಸಬೇಕು, ನೆಲೆ ಕಳೆದುಕೊಂಡ ಜಾಗದಲ್ಲೇ ನಮಗೆ ನೆಲೆ ಒದಗಿಸಬೇಕು ಎಂದು ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ರಂಗೇಗೌಡ ಮಾತನಾಡಿ, ಈಗಾಗಲೇ ತಾಲೂಕಿನ ಗೋಳೂರು ಗ್ರಾಮದ ಬಳಿ ಇರುವ ವಿದ್ಯಾಪೀಠದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಗೆ ಸೇರಿದ 10 ಎಕರೆ ಪ್ರದೇಶದಲ್ಲಿ ವಿಶಾಲವಾದ ಎರಡು ಕೊಠಡಿಗಳನ್ನು ಸಿದ್ಧಪಡಿಸಿ, ನೀರಿನ ಸೌಲಭ್ಯವನ್ನು ಕಲ್ಪಿಸಿ ತಾತ್ಕಾಲಿಕ ನೆಲೆ ಒದಗಿಸಲಾಗಿದೆ. ಅಲ್ಲದೆ ಒಂದು ತಿಂಗಳ ಪಡಿತರ ಸಾಮಗ್ರಿ, ಹೊದಿಕೆಗಳನ್ನು ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಸಮಾಜ ಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಭೀಮರಾವ್ ವಡ್ಡಾರ್ ಮಾತನಾಡಿ, ಸಂತ್ರಸ್ತ ಕುಟುಂಬಗಳ ಬೇಡಿಕೆಯಂತೆ ಜಮೀನಿನ ಸರ್ವೆ ಕಾರ್ಯ ನಡೆಸಲು ಈಗಾಗಲೇ ಭೂಮಾಪನ ಇಲಾಖೆಗೆ ಪತ್ರ ಬರೆಯಲಾಗಿದೆ, ನಾಳೆ ಭೂಮಾಪನ ಇಲಾಖೆಯ ಅಧಿಕಾರಿಗಳು ಜಮೀನಿನ ಸರ್ವೆ ಕಾರ್ಯ ನಡೆಸಲಿದ್ದಾರೆ, ಈಗ ತಾತ್ಕಾಲಿಕವಾಗಿ ನೆಲೆ ಒದಗಿಸಲು ವಿದ್ಯಾಪೀಠದ ಬಳಿಯಿರುವ ಕೌಶಲ ಅಭಿವೃದ್ಧಿ ಇಲಾಖೆಯ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಸಿದ್ಧಪಡಿಸಿ ಕೀ ಹಸ್ತಾಂತರಿಸಲಾಗಿದೆ. ಅಲ್ಲಿ ವಿಶಾಲ ಪ್ರದೇಶವಿದ್ದು, ಹಂದಿ ಸಾಕಣೆಯನ್ನು ನಡೆಸಬಹುದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಶಾಶ್ವತ ನೆಲೆ ಕಲ್ಪಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಅಂಬೇಡ್ಕರ್ ಸೇನೆಯ ಮುಳ್ಳೂರು ಸ್ವಾಮಿ, ಶಿವರಾಜು, ಹಲವಾರು ಪ್ರಮುಖರು ಇದ್ದರು.