ಒಂದೇ ಸೂರಿನಡಿ ಬದುಕು ಸಾಗಿಸೋದೇ ನೈಜಕುಟುಂಬ

| Published : Mar 23 2024, 01:15 AM IST

ಸಾರಾಂಶ

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಭಕ್ತರಿಗೆ ಅನ್ನ, ಅಕ್ಷರ ಹಾಗೂ ನ್ಯಾಯದಾನಗಳಂತಹ ತ್ರಿವಿಧ ದಾಸೋಹ ನೀಡುತ್ತಿರುವ ಹಿರೇಕಲ್ಮಠದ ಲಿಂಗೈಕ ಗುರುಗಳ ಪುಣ್ಯಾರಾಧನೆ ಪ್ರಯುಕ್ತ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸತಿ-ಪತಿ ಆಗುವವರು ನಿಜಕ್ಕೂ ಪುಣ್ಯವಂತರು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಭಕ್ತರಿಗೆ ಅನ್ನ, ಅಕ್ಷರ ಹಾಗೂ ನ್ಯಾಯದಾನಗಳಂತಹ ತ್ರಿವಿಧ ದಾಸೋಹ ನೀಡುತ್ತಿರುವ ಹಿರೇಕಲ್ಮಠದ ಲಿಂಗೈಕ ಗುರುಗಳ ಪುಣ್ಯಾರಾಧನೆ ಪ್ರಯುಕ್ತ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸತಿ-ಪತಿ ಆಗುವವರು ನಿಜಕ್ಕೂ ಪುಣ್ಯವಂತರು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಹೊನ್ನಾಳಿ ಹಿರೇಕಲ್ಮಠದಲ್ಲಿ ಗುರುವಾರ ಆಯೋಜಿಸಲಾಗಿದ್ದ ಲಿಂಗೈಕ್ಯ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಅವರ 54ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂಗೈಕ್ಯ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 9ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬ ಎಂದರೆ ಕೇವಲ ಗಂಡ-ಹೆಂಡತಿ-ಮಕ್ಕಳು ಮಾತ್ರವಲ್ಲ. ಬದಲಿಗೆ ಅಪ್ಪ, ಅಮ್ಮ, ಅಣ್ಣ, ತಮ್ಮ ಅತ್ತಿಗೆ ಮೈದುನ ಚಿಕ್ಕಪ್ಪ, ಚಿಕ್ಕಮ ಹೀಗೆ ಹತ್ತು ಹಲವು ಸಂಬಂಧಗಳ ವ್ಯಕ್ತಿಗಳು ಒಂದು ಸೂರಿನಡಿ ಬದುಕು ಸಾಗಿಸುವುದೇ ನಿಜವಾದ ಕುಟುಂಬ ಎಂದು ಹೇಳಿದರು,

ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಮೊದಲು ಮಠ- ಮಂದಿರಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ನೂರಾರು ಸಂಖ್ಯೆಯಲ್ಲಿ ಜೋಡಿಗಳು ಸತಿ-ಪತಿ ಆಗುತ್ತಿದ್ದರು. ಆದರೆ ಇದೀಗ ಎಲ್ಲ ಕಡೆಗಳಲ್ಲಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮೂಹಿಕ ವಿವಾಹಗಳು ನಡೆಯುತ್ತಿವೆ. 123 ವರ್ಷಗಳ ಇತಿಹಾಸದಲ್ಲಿ ಬಾರದಂತಹ ಬರಗಾಲ ಈ ಬಾರಿ ಬಂದಿದೆ. ಎಲ್ಲ ಹರಗುರುಚರ ಮೂರ್ತಿಗಳ ಆಶೀರ್ವಾದದಿಂದ ಮುಂದಿನ ಬಾರಿ ಉತ್ತಮ ಮಳೆ-ಬೆಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡುವಂತಾಗಲಿ ಎಂದು ಆಶಿಸಿದರು.

ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ಜಿ.ಎಂ.ಸಿದ್ದೇಶ್ವರ ಅವರು ನೂತನ ವಧುವರರಿಗೆ ಶುಭ ಕೋರಿ ಪುಣ್ಯ ಕ್ಷೇತ್ರದಲ್ಲಿ ಸತಿಪತಿಗಳಾಗಿದ್ದೀರಿ. ಎಲ್ಲ ಗುರುಗಳ, ಹಿರಿಯ ಆಶೀರ್ವಾದದಿಂದ ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವಂತೆ ಎಂದು ಹಾರೈಸಿದರು.

ಮುಷ್ಟೂರು ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಾನ್ನಿಧ್ಯ ವಹಿಸಿದ್ದರು. ಕಡೆನಂದಿಹಳ್ಳಿ ರೇವಣಸಿದ್ದ ಶಿವಾಚಾರ್ಯ ಸ್ವಾಮಿಜಿ, ರಾಂಪುರದ ಶಿವಕುಮಾರ ಹಾಲಸ್ವಾಮೀಜಿ, ಗೋವಿನಕೋವಿ ಮಠದ ವಿಶ್ವಾರಾಧ್ಯ ಮಹಾಲಿಂಗ ಹಾಲಸ್ವಾಮಿಜಿ, ಹಲವಾರು ಮಠಾಧಿಪತಿಗಳು ಭಾಗವಹಿಸಿದ್ದರು.

ಶ್ರೀ ಮಠದ ವಿದ್ಯಾಸಂಸ್ಥೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆಸಲ್ಲಿಸಿ, ನಿವೃತ್ತಿ ಹೊಂದಿರುವ ಎಚ್.ಆರ್. ಬಸವರಾಜಪ್ಪ ಅವರಿಗೆ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುಖಂಡರಾದ ಎಚ್.ಎ. ಉಮಾಪತಿ ಮುಂತಾದವರು ಮಾತನಾಡಿದರು. ಎಚ್.ಎ.ಗದ್ದಿಗೇಶ್, ದೀಪುಕುಮಾರ ಸೇರಿದಂತೆ ಹಲವಾರು ಜನ ಮುಖಂಡರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಚನ್ನಯ್ಯ ಬೆನ್ನೂರುಮಠ ಸ್ವಾಗತಿಸಿದರು. ವಿಜಯಾನಂದ ಸ್ವಾಮಿ ನಿರೂಪಿಸಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 5 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.

- - - -21ಎಚ್.ಎಲ್.ಐ1:

ಹಿರೇಕಲ್ಮಠದಲ್ಲಿ ಲಿಂಗಕ್ಯ ಗುರುಗಳ ಪುಣ್ಯಾರಾಧನೆ, ಸಂಸ್ಮರಣೆ ಅಂಗವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ ಸತಿ-ಪತಿಗಳಾದ ದಂಪತಿಗೆ ಮಠಾಧೀಶರು, ರಾಜಕೀಯ ಗಣ್ಯರು ಆಶೀರ್ವದಿಸಿ, ಶುಭ ಕೋರಿದರು.