28 ಹಳ್ಳಿಗಳಲ್ಲಿ ಜೀವಜಲದ ಸಮಸ್ಯೆ

| Published : Apr 20 2024, 01:09 AM IST

28 ಹಳ್ಳಿಗಳಲ್ಲಿ ಜೀವಜಲದ ಸಮಸ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಯ ಅಳ್ನಾವರ ಪಟ್ಟಣ ಪಂಚಾಯಿತಿಗೆ ಸರಬರಾಜಾಗುತ್ತಿರುವ ದಾಂಡೇಲಿಯ ಕಾಳಿನದಿಯ ನೀರನ್ನು ಹಳಿಯಾಳದ ಆಯ್ದ ಗ್ರಾಮಗಳಿಗೆ ಸರಬರಾಜು ಮಾಡಲು ತಾಲೂಕಾಡಳಿತ ಕೈಗೊಂಡ ಪ್ರಯತ್ನ ಯಶಸ್ವಿಯಾಗಿದೆ.

ಓರವಿಲ್‌ ಫರ್ನಾಂಡೀಸ್

ಹಳಿಯಾಳ: ತಾಲೂಕಿನ ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಅಂದಾಜು 15 ಗ್ರಾಪಂಗಳ ವ್ಯಾಪ್ತಿಯ 28 ಗ್ರಾಮಗಳಲ್ಲಿ ಜೀವಜಲದ ಸಮಸ್ಯೆ ಭೀಕರವಾಗಿದೆ.

ತಾಲೂಕಾಡಳಿತ ನೀರಿನ ಸಮಸ್ಯೆ ನೀಗಲು ಹರಸಾಹಸ ಪಡುತ್ತಿದೆ. ನೆರೆಯ ಅಳ್ನಾವರ ಪಟ್ಟಣ ಪಂಚಾಯಿತಿಗೆ ಸರಬರಾಜಾಗುತ್ತಿರುವ ದಾಂಡೇಲಿಯ ಕಾಳಿನದಿಯ ನೀರನ್ನು ಹಳಿಯಾಳದ ಆಯ್ದ ಗ್ರಾಮಗಳಿಗೆ ಸರಬರಾಜು ಮಾಡಲು ತಾಲೂಕಾಡಳಿತ ಕೈಗೊಂಡ ಪ್ರಯತ್ನ ಯಶಸ್ವಿಯಾಗಿದೆ.

ತಾಲೂಕಾಡಳಿತ ನೀಡಿದ ಮಾಹಿತಿಯಂತೆ ತಾಲೂಕಿನ 15 ಗ್ರಾಮ ಪಂಚಾಯಿತಿಗಳಾದ ಚಿಬ್ಬಲಗೇರಿ, ಮದ್ನಳ್ಳಿ, ಅರ್ಲವಾಡ, ಹವಗಿ, ತತ್ವಣಗಿ, ಸಾಂಬ್ರಾಣಿ, ನಾಗಶೆಟ್ಟಿಕೊಪ್ಪ, ಮುರ್ಕವಾಡ, ತಟ್ಟಿಗೆರೆ, ಭಾಗವತಿ, ಬಿ.ಕೆ. ಹಳ್ಳಿ, ಕೆಸರೊಳ್ಳಿ, ಗುಂಡೊಳ್ಳಿ, ಜನಗಾ ಮತ್ತು ಕಾವಲವಾಡಗಳು ಜೀವಜಲಬಾಧಿತ ಗ್ರಾಪಂಗಳಾಗಿವೆ.

ಹಳಿಯಾಳ ತಾಪಂ ಇಒ ಪರಶುರಾಮ ಘಸ್ತೆ, ತಹಸೀಲ್ದಾರ್‌ ಆರ್.ಎಚ್. ಭಾಗವಾನ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇಇ ಸತೀಶ ಅಧಿಕಾರಿಗಳ ತಂಡವು ಜೀವಜಲ ಬಾಧಿತ ಗ್ರಾಪಂಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.ಸದ್ಯ ತಾಲೂಕಿನ ಗ್ರಾಮಾತರ ಭಾಗಗಳಲ್ಲಿ 70 ರೈತರ ಹೊಲಗಳಲ್ಲಿರುವ ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತಿದೆ. ಇನ್ನು ಹೆಚ್ಚುವರಿ ಕೊಳವೆ ಬಾವಿಯಿಂದ ನೀರು ಪೂರೈಸಲು ಗ್ರಾಪಂ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ.

ಅಳ್ನಾವರದಿಂದ ಕಾಳಿನದಿ ನೀರು: ನೆರೆಯ ಅಳ್ನಾವರ ಪಟ್ಟಣ ಪಂಚಾಯಿತಿಗೆ ದಾಂಡೇಲಿಯ ಕಾಳಿ ನದಿಯಿಂದ ನಿರಂತರ ನೀರು ಯೋಜನೆಯಡಿ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ದಾಂಡೇಲಿಯಿಂದ ಅಳ್ನಾವರದವರೆಗೆ ಅಳವಡಿಸಿರುವ ಪೈಪ್‌ಲೈನ್‌ಗಳ ಮಾರ್ಗದಲ್ಲಿ ಬರುವ 5 ಗ್ರಾಮ ಪಂಚಾಯಿತಿಗಳ 14 ಗ್ರಾಮಗಳಿಗೆ ಕಾಳಿನದಿ ನೀರನ್ನು ತಾತ್ಕಾಲಿಕವಾಗಿ ಕೊಡುವಂತೆ ಹಳಿಯಾಳ ತಾಲೂಕಾಡಳಿತ ಸಲ್ಲಿಸಿದ ಪ್ರಸ್ತಾವನೆಗೆ ಅಳ್ನಾವರ ಪಟ್ಟಣ ಪಂಚಾಯಿತಿ ಒಪ್ಪಿಗೆ ಸೂಚಿಸಿದೆ.

ಈ 14 ಗ್ರಾಮಗಳಿಗೆ ಪೂರೈಸಲ್ಪಡುವ ನೀರಿನ ಪ್ರಮಾಣವನ್ನು ಅಳೆಯಲು ಮೀಟರ್ ಅಳವಡಿಸುವ ಕಾರ್ಯ ನಡೆದಿದ್ದು, ನೀರಿನ ಬಳಕೆಯನ್ನು ಪ್ರಮಾಣವನ್ನು ಆಧರಿಸಿ ನೀರಿನ ಬಿಲ್‌ಅನ್ನು ಟಾಸ್ಕ್‌ಫೋರ್ಸ್‌ ಮೂಲಕ ಪಾವತಿಸಲಾಗುವುದು ಎಂದು ತಾಲೂಕಾಡಳಿತ ತಿಳಿಸಿದೆ.ನೀರು ಪೂರೈಕೆಗೆ ಒಪ್ಪಿಗೆ: ಅಳ್ನಾವರಕ್ಕೆ ಪೂರೈಸಲ್ಪಡುತ್ತಿರುವ ಕಾಳಿ ನದಿಯ ನೀರನ್ನು ಹಳಿಯಾಳ ತಾಲೂಕಿನ ಆಯ್ದ ಗ್ರಾಮಗಳಿಗೆ ಪೂರೈಸುವ ವಿಷಯವು ಅಂತರ್‌ ಜಿಲ್ಲಾ ವಿಷಯವಾಗಿದ್ದರಿಂದ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತದ ಮಧ್ಯೆ ಸಭೆ ನಡೆಯಿತು. ಸಭೆಯಲ್ಲಿ ಅಳ್ನಾವರ ಪಟ್ಟಣ ಪಂಚಾಯಿತಿಯು ನೀರು ಪೂರೈಕೆಗೆ ಒಪ್ಪಿಗೆ ಸೂಚಿಸಿದೆ ಎಂದು ತಾಪಂ ಇಒ ಪರಶುರಾಮ ಘಸ್ತೆ ತಿಳಿಸಿದರು.