ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ; ಹೋರಾಟ ನಿಲ್ಲದು: ಟಿ.ಈರಮ್ಮ

| Published : Jun 20 2024, 01:02 AM IST

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ-ಯುಕೆಜಿ; ಹೋರಾಟ ನಿಲ್ಲದು: ಟಿ.ಈರಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಎಲ್‌ಕೆಜಿ-ಯುಕೆಜಿ ಆರಂಭಿಸುವ ವಿಚಾರದಲ್ಲಿ ನಮ್ಮ ಯಾವ ವಿರೋಧವಿಲ್ಲ. ಆದರೆ, ಶಾಲೆಗಳ ಬದಲು ಅಂಗನವಾಡಿಗಳಲ್ಲಿಯೇ ಮುಂದುವರಿಸಲಿ.

ಬಳ್ಳಾರಿ: ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ (ಎಲ್‌ಕೆಜಿ-ಯುಕೆಜಿ) ಆರಂಭಿಸಬೇಕು ಎಂದು ಆಗ್ರಹಿಸಿ ಹೋರಾಟ ಮುಂದುವರಿಯಲಿದೆ. ರಾಜ್ಯ ಸರ್ಕಾರ ಹೋರಾಟಕ್ಕೆ ಮಣಿಯುವವರೆಗೂ ಬಿಡುವುದಿಲ್ಲ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಟಿ.ಈರಮ್ಮ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್‌ಕೆಜಿ-ಯುಕೆಜಿ ಆರಂಭಿಸುವ ವಿಚಾರದಲ್ಲಿ ನಮ್ಮ ಯಾವ ವಿರೋಧವಿಲ್ಲ. ಆದರೆ, ಶಾಲೆಗಳ ಬದಲು ಅಂಗನವಾಡಿಗಳಲ್ಲಿಯೇ ಮುಂದುವರಿಸಲಿ. ನಮ್ಮಲ್ಲೂ ಶೈಕ್ಷಣಿಕವಾಗಿ ಅರ್ಹರಿದ್ದಾರೆ. ಶೇ.40 ಜನ ಬಿಎ ಹಾಗೂ ಎಂಎ ಪದವಿಗಳನ್ನು ಪಡೆದವರಿದ್ದಾರೆ. ಇದನ್ನು ಪರಿಗಣಿಸದೆ ಸರ್ಕಾರ ಏಕಾಏಕಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸುವುದು ಸರಿಯಲ್ಲ. ಇದನ್ನು ನಾವು ಒಪ್ಪಲೂ ಸಾಧ್ಯವಿಲ್ಲ. ಸಿಎಂ ಸಿದ್ಧರಾಮಯ್ಯ ಜನಪರವಾಗಿ ಯೋಚಿಸುತ್ತಾರೆ ಎಂದುಕೊಂಡಿದ್ದೆವು. ಆದರೆ, ಅವರು ದುಡಿವ ಜನರ ವಿರೋಧಿಯಾಗಿ ವರ್ತಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳನ್ನು ಮುಚ್ಚುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಶುರುಗೊಂಡಿದೆ. ಈಗಾಗಲೇ ಶಾಸಕರು, ಸಚಿವರು ಹಾಗೂ ಸಂಸದರಿಗೆ ಮನವಿ ಕೊಟ್ಟು ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದೇವೆ. ಇನ್ನೆರೆಡು ದಿನಗಳಲ್ಲಿ ಶಾಸಕರುಗಳ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸಂಘಟನೆಯ ಜಿಲ್ಲಾ ಪ್ರಮುಖರಾದ ಗೀತಮ್ಮ, ಗಂಗಮ್ಮ, ನೀಲಮ್ಮ, ರಾಣಿ ಎಲಿಜಬತ್, ಮಲ್ಲಮ್ಮ, ಸಿಐಟಿಯು ಮುಖಂಡರಾದ ಸತ್ಯಬಾಬು, ಎಂ.ತಿಪ್ಪೇಸ್ವಾಮಿ, ಜನವಾದಿ ಮಹಿಳಾ ಸಂಘಟನೆಯ ಚಂದ್ರಕುಮಾರಿ ಸುದ್ದಿಗೋಷ್ಠಿಯಲ್ಲಿದ್ದರು.

19 ಬಿಆರ್‌ವೈ 2

ಬಳ್ಳಾರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಎಲ್‌ಕೆಜಿ-ಯುಕೆಜಿಯನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಆರಂಭಿಸಬೇಕು ಎಂದು ಆಗ್ರಹಿಸಿದರು.