ಮಂಡ್ಯ ಜಿಲ್ಲೆಯ ೨೨ ಮೈಕ್ರೋ ಫೈನಾನ್ಸ್‌ಗಳಲ್ಲಿ ೬.೫೦ ಲಕ್ಷ ಜನರಿಂದ ಸಾಲ

| Published : Jan 29 2025, 01:33 AM IST

ಮಂಡ್ಯ ಜಿಲ್ಲೆಯ ೨೨ ಮೈಕ್ರೋ ಫೈನಾನ್ಸ್‌ಗಳಲ್ಲಿ ೬.೫೦ ಲಕ್ಷ ಜನರಿಂದ ಸಾಲ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿರುವ ೨೨ ಮೈಕ್ರೋ ಫೈನಾನ್ಸ್‌ಗಳ ೧೫೪ ಶಾಖೆಗಳಲ್ಲಿ ೬.೫೦ ಲಕ್ಷ ಮಂದಿ ೧೬ ಕೋಟಿ ರು.ವರೆಗೆ ಸಾಲ ಪಡೆದಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಖಾಸಗಿ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿರುವ ೨೨ ಮೈಕ್ರೋ ಫೈನಾನ್ಸ್‌ಗಳ ೧೫೪ ಶಾಖೆಗಳಲ್ಲಿ ೬.೫೦ ಲಕ್ಷ ಮಂದಿ ೧೬ ಕೋಟಿ ರು.ವರೆಗೆ ಸಾಲ ಪಡೆದಿರುವ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಖಾಸಗಿ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸುತ್ತಿದ್ದಾರೆ.

ಸಕ್ಕರೆ ನಾಡಿನಲ್ಲಿ ಅಧಿಕೃತವಾಗಿ ಪರವಾನಗಿ ಪಡೆದು ಭಾರತೀಯ ರಿಸರ್ವ್‌ ಬ್ಯಾಂಕ್ ನಿಯಮಾನುಸಾರ ೨೨ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ೧೫೪ ಶಾಖೆಗಳನ್ನು ಹೊಂದಿರುವುದಾಗಿ ಹೇಳಲಾಗಿದೆ. ಒಂದೊಂದು ಶಾಖೆಯಲ್ಲಿ ಬರೋಬ್ಬರಿ ೪ ಸಾವಿರದಿಂದ ೫ ಸಾವಿರ ಮಂದಿ ಸಾಲ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

ಅನಧಿಕೃತ ಮೈಕ್ರೋ ಫೈನಾನ್ಸ್‌ಗಳು ಕಾರ್ಯನಿರ್ವಹಣೆ:

ಅಧಿಕೃತ ಮೈಕ್ರೋ ಫೈನಾನ್ಸ್‌ಗಳು ಮಾತ್ರವಲ್ಲದೇ, ಅನಧಿಕೃತ ಮೈಕ್ರೋ ಫೈನಾನ್ಸ್‌ಗಳೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಮಾರು ೩೦ಕ್ಕೂ ಹೆಚ್ಚು ಅನಧಿಕೃತ ಮೈಕ್ರೋ ಹಣಕಾಸು ಸಂಸ್ಥೆಗಳು ಸಾಲ ನೀಡುವ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ತಿಳಿದುಬಂದಿದೆ. ಈ ಅನಧಿಕೃತ ಹಣಕಾಸು ಸಂಸ್ಥೆಗಳನ್ನು ಗುರುತಿಸಿ ಪತ್ತೆಹಚ್ಚುವ, ಅವುಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಇದುವರೆಗೆ ಯಾರೊಬ್ಬರೂ ಮುಂದಾಗಿಲ್ಲ.

ಈ ಹಣಕಾಸು ಸಂಸ್ಥೆಗಳು ಕನಿಷ್ಠ ೩೦ ಸಾವಿರ ರು.ನಿಂದ ಗರಿಷ್ಠ ೧.೨೦ ಲಕ್ಷ ರು.ವರೆಗೆ ಸಾಲವನ್ನು ನೀಡುತ್ತವೆ. ಈ ಹಣಕ್ಕೆ ಕನಿಷ್ಠ ಶೇ.೧೫ ರಿಂದ ಶೇ.೨೦ರಷ್ಟು ಬಡ್ಡಿ ವಿಧಿಸುತ್ತವೆ. ಈ ಹಣಕಾಸು ಸಂಸ್ಥೆಗಳ ಪರವಾನಗಿ ನವೀಕರಣ, ವಾರ್ಷಿಕ ವರದಿ ಸಲ್ಲಿಕೆಯ ಮೇಲ್ವಿಚಾರಣೆಯಷ್ಟೇ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಅದನ್ನು ಹೊರತುಪಡಿಸಿ ಸಂಸ್ಥೆಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಅಧಿಕಾರವಿಲ್ಲ ಎಂದು ಹೇಳಲಾಗಿದೆ.

ಆಧಾರ್, ವೋಟರ್‌ ಐಡಿ ಇದ್ದರೆ ಸಾಕು:

ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಇದ್ದರೆ ಸಾಕು. ಆಂಡಿಮಾಂಡ್ ಪ್ರೋನೋಟ್, ಚೆಕ್ ಸೇರಿದಂತೆ ಬೇರೆ ಯಾವುದೇ ದಾಖಲೆಗಳನ್ನಾಗಲೀ ಕೇಳುವುದೇ ಇಲ್ಲ. ಆದರೆ, ಹಣಕಾಸು ಸಂಸ್ಥೆಗಳ ಕೆಲವೊಂದು ದಾಖಲೆಗಳಿಗೆ ಸಾಲಗಾರರ ಸಹಿ ಪಡೆದುಕೊಳ್ಳುತ್ತಾರೆ. ಈ ಸಂಸ್ಥೆಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರು, ಹಸುಗಳನ್ನು ಕೊಳ್ಳುವವರು, ಚಿಲ್ಲರೆ ವ್ಯಾಪಾರಿಗಳು, ಹೊಲಿಗೆ ಯಂತ್ರ ಖರೀದಿ, ಬೀದಿ ಬದಿಯ ವ್ಯಾಪಾರಿಗಳು, ಸಣ್ಣ ಉದ್ದಿಮೆ ನಡೆಸುವವರು ಸಾಲ ಪಡೆದುಕೊಂಡಿರುತ್ತಾರೆ.

ಈ ಸಂಸ್ಥೆಗಳು ನೀಡುವ ಕಿರುಸಾಲವನ್ನು ಪಡೆದು ಬದುಕನ್ನು ಕಟ್ಟಿಕೊಂಡವರೂ ಇದ್ದಾರೆ. ಹಣ ದುರುಪಯೋಗಪಡಿಸಿಕೊಂಡು ಸಾಲ ತೀರಿಸಲಾಗದೆ ಬದುಕನ್ನು ಕಳೆದುಕೊಂಡವರೂ ಇದ್ದಾರೆ. ಇಲ್ಲವೇ, ಬೇರೆಯವರ ಸಂಚು, ವಂಚನೆ ತಿಳಿಯದೆ ಸಾಲ ಕೊಡಿಸಿ ಅದರ ಹೊರೆಯನ್ನು ಹೊತ್ತುಕೊಂಡವರೂ ಇದ್ದಾರೆ.

ಮಹಿಳೆಯರಿಗಷ್ಟೇ ಸಾಲ:

ಈ ಮೈಕ್ರೋ ಫೈನಾನ್ಸ್‌ಗಳಲ್ಲಿ ಮಹಿಳೆಯರನ್ನು ಹೊರತುಪಡಿಸಿ ಪುರುಷರಿಗೆ ಸಾಲ ನೀಡುವುದಿಲ್ಲ. ಜೊತೆಗೆ ಕೇವಲ ಒಬ್ಬರಿಗೆ ಮಾತ್ರ ಸಾಲವನ್ನು ನೀಡುವುದೂ ಇಲ್ಲ. ಒಬ್ಬರಿಗೆ ಸಾಲ ಬೇಕಾದರೆ ಐವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಆ ಸಮಯದಲ್ಲಿ ಆರು ಜನರಿಗೂ ೧.೨೦ ಲಕ್ಷ ರು.ವರೆಗೆ ಸಾಲ ಕೊಡುವುದಕ್ಕೆ ಸಂಸ್ಥೆಯವರು ಸಿದ್ಧರಿರುತ್ತಾರೆ. ಒಬ್ಬರು ಸಾಲದ ಹಣ ಕಟ್ಟಲಿಲ್ಲವೆಂದರೆ ಅದಕ್ಕೆ ಉಳಿದವರನ್ನು ಜವಾಬ್ದಾರರನ್ನಾಗಿ ಮಾಡುತ್ತಾರೆ. ಅದಕ್ಕೆ ಒಪ್ಪಿದರಷ್ಟೇ ಸಾಲ ನೀಡುತ್ತಾರೆ. ಆಗ ಒಬ್ಬರ ಮೇಲೆ ಒಬ್ಬರು ನಂಬಿಕೆ, ವಿಶ್ವಾಸವಿಟ್ಟುಕೊಂಡು ಸಾಲ ಪಡೆದಿರುತ್ತಾರೆ.

ಸಾಲ ನೀಡುವ ಸಮಯದಲ್ಲಿ ಕೆಲವೊಂದು ದಾಖಲೆಗಳಿಗೆ ಅವರು ಸಾಲ ಪಡೆದವರು ಮತ್ತು ಹಣದ ಜವಾಬ್ದಾರಿ ಹೊತ್ತವರ ಸಹಿ ಹಾಕಿಸಿಕೊಳ್ಳುವರು. ಅದೆಲ್ಲವೂ ಇಂಗ್ಲಿಷ್‌ನಲ್ಲಿರುತ್ತದೆ. ಓದಿ ಅರ್ಥೈಸಿಕೊಳ್ಳುವ ಸ್ಥಿತಿಯಲ್ಲಿ ಸಾಲ ಪಡೆಯುವವರು ಇರುವುದಿಲ್ಲ. ಸುಲಭವಾಗಿ ಸಿಗುವ ಸಾಲದ ಹಣಕ್ಕೆ ಬಹುತೇಕರು ಕೈ ಚಾಚುತ್ತಾರೆ. ಸಾಲ ಪಡೆಯುವಾಗ ಬಡ್ಡಿ ಹಣದ ಬಗ್ಗೆಯೂ ಯೋಚನೆ ಇರುವುದಿಲ್ಲ.

ಪ್ರತಿ ವಾರ, ತಿಂಗಳಿಗೆ ಕಂತು ಪಾವತಿ:

ಪ್ರತಿ ವಾರ ಅಥವಾ ತಿಂಗಳಿಗೆ ಸಂಸ್ಥೆಗೆ ಕಂತಿನ ಹಣ ಪಾವತಿಸಬೇಕಿರುತ್ತದೆ. ಸಾಲ ವಸೂಲಿಗೆ ಸಂಸ್ಥೆಯ ಸಿಬ್ಬಂದಿಯೇ ಮನೆಗಳ ಬಳಿ ಬರುತ್ತಾರೆ. ನಿಗದಿತ ಹಣವನ್ನು ಸರಿಯಾಗಿ ಪಾವತಿಸಿದರೆ ಸಮಸ್ಯೆ ಇರುವುದಿಲ್ಲ. ಸಕಾಲದಲ್ಲಿ ಕಂತಿನ ಹಣ ಪಾವತಿಸದಿದ್ದಾಗ ಬಡ್ಡಿಯೂ ಅದರೊಂದಿಗೆ ಬೆಳೆಯುತ್ತಿರುತ್ತದೆ. ತಿಂಗಳು ಕಳೆದಂತೆ ಬಡ್ಡಿಯನ್ನೂ ಕಟ್ಟದೆ, ಅಸಲನ್ನೂ ತೀರಿಸದಿದ್ದಾಗ ಮೈಕ್ರೋ ಫೈನಾನ್ಸ್ ಸಂಸ್ಥೆಯವರು ಸಿಬ್ಬಂದಿ ಹಣ ಕಟ್ಟುವಂತೆ ಪೀಡಿಸುವುದು, ಮನೆಯನ್ನು ಜಪ್ತಿ ಮಾಡುವುದು ಸಾಮಾನ್ಯವಾಗಿದೆ.

ಬೇರೆಯವರನ್ನು ನಂಬಿಸಿ ಅವರಿಂದ ಲಕ್ಷಾಂತರ ರು. ಸಾಲ ಪಡೆದುಕೊಂಡು ಹಲವರು ಊರು ಬಿಟ್ಟು ಹೋಗಿದ್ದಾರೆ. ಇದೀಗ ತಮ್ಮ ಹೆಸರಿನಲ್ಲಿ ಸಾಲ ಕೊಡಿಸಿದವರು ಸಂಕಟ ಎದುರಿಸುವ ಪರಿಸ್ಥಿತಿ ಸೃಷ್ಟಿಯಾಗಿದೆ. ಹಣ ಕಟ್ಟುವುದಕ್ಕೆ ಸಾಧ್ಯವಾಗದೆ ಅವರು ಸಂಸ್ಥೆಗಳ ಸಿಬ್ಬಂದಿಯಿಂದ ಕಿರುಕುಳ ಎದುರಿಸುವಂತಾಗಿದೆ.

ಸಾಲ ಮನ್ನಾ ಆಗಬಹುದೆಂಬ ತಪ್ಪು ಕಲ್ಪನೆ:

ಸಹಕಾರಿ ಸಂಸ್ಥೆಗಳ ಮಾದರಿಯಲ್ಲೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದಿರುವ ಸಾಲವನ್ನೂ ಕೂಡ ಸರ್ಕಾರ ಮನ್ನಾ ಮಾಡಬಹುದೆಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇದರಿಂದಲೂ ಸಾಲದ ಹೊರೆಯನ್ನು ತಮ್ಮ ಮೇಲೆ ಎಳೆದುಕೊಂಡವರಿದ್ದಾರೆ. ಆದರೆ, ಈ ಸಂಸ್ಥೆಗಳಿಂದ ಪಡೆದ ಸಾಲ ಯಾವುದೇ ಕಾರಣಕ್ಕೂ ಮನ್ನಾ ಆಗುವುದಿಲ್ಲವೆಂಬ ತಿಳಿವಳಿಕೆ ಕೊರತೆ ಕೂಡ ಜನರಲ್ಲಿದೆ ಎಂದು ಹಲವರು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ೨೨ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿದ್ದು, ಅವುಗಳು ೧೫೪ ಶಾಖೆಯನ್ನು ಹೊಂದಿವೆ. ಈ ಶಾಖೆಗಳಲ್ಲಿ ೪ ಸಾವಿರ ಜನರಿಂದ ೫ ಸಾವಿರ ಜನರು ಸಾಲ ಪಡೆದಿರುವ ಸಾಧ್ಯತೆಗಳಿದ್ದು, ಅದರಂತೆ ೬.೫೦ ಲಕ್ಷ ಜನರು ಸಾಲ ಪಡೆದಿದ್ದಾರೆ. ೨೨ ಅಧಿಕೃತ ಮೈಕ್ರೋ ಫೈನಾನ್ಸ್‌ಗಳ ಜೊತೆಗೆ ಅನಧಿಕೃತ ಮೈಕ್ರೋ ಫೈನಾನ್ಸ್‌ಗಳೂ ಕಾರ್ಯನಿರ್ವಹಿಸುತ್ತಿದ್ದು, ಅವುಗಳು ಎಷ್ಟಿವೆ ಎಂಬ ಮಾಹಿತಿ ಇಲ್ಲ.

- ಗಣೇಶ್, ಮೈಕ್ರೋ ಫೈನಾನ್ಸ್‌ಗಳ ಮಂಡ್ಯ ಉಸ್ತುವಾರಿ ಅಧಿಕಾರಿ