ಸಾರಾಂಶ
ಶಿರಸಿ:
ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ನ. 1ರಿಂದ ಸ್ಥಳೀಯ ಬಸ್ ಮತ್ತು ಸ್ಥಳೀಯರ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲು ನಿರ್ಧರಿಸಲಾಗಿದೆ.ಶಾಸಕ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ನಗರದ ಮಿನಿವಿಧಾನ ಸೌಧದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರ ಆರ್‌ಎನ್‌ಎಸ್ ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ರಸ್ತೆ ಕೇವಲ 12.5 ಮೀ. ಮಾತ್ರ ಅಗಲ ಇರುವುದರಿಂದ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದರೆ ಕಾಮಗಾರಿ ನಡೆಸಲಾಗುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಿನಂತಿಸಿದರು.ಇದಕ್ಕೂ ಮುನ್ನ ಮಾತನಾಡಿದ ಉಪವಿಭಾಗಾಧಿಕಾರಿ ದೇವರಾಜ ಆರ್, ೨೦೧೮ರಲ್ಲಿಯೇ ರಸ್ತೆ ಬಂದ್‌ಗೊಳಿಸಿ ನಿರ್ಮಾಣಕ್ಕೆ ಸಹಕಾರ ನೀಡುವಂತೆ ಎನ್‌ಎಚ್ಐ ಬೇಡಿಕೆ ಸಲ್ಲಿಸಿತ್ತು. ಆಗ ಸಹ ಜಿಲ್ಲಾಧಿಕಾರಿಗಳು ರೋಡ್ ಬಂದ್ ಮಾಡಲು ಸೂಚನೆ ನೀಡಿದ್ದರು. ಆದರೆ, ಕೆಲ ಕಾರಣದಿಂದ ರಸ್ತೆ ಕಾಮಗಾರಿ ವಿಳಂಬ ಆಗಿದೆಯಲ್ಲದೇ ರಸ್ತೆ ಸಂಚಾರ ಎಂದಿನಂತೆ ಇತ್ತು. ಈಗ ನ. 1ರಿಂದ 2024ರ ಮೇ ಅಂತ್ಯದವರೆಗೆ ರಸ್ತೆ ಸಂಚಾರ ಸ್ಥಗಿತಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿದರೆ ಎಷ್ಟು ದಿನ ಮುಂಚಿತವಾಗಿ ಕಾಮಗಾರಿ ಮುಗಿಸಬಹುದು ಎಂಬುದನ್ನೂ ನಾವು ಪರಿಗಣಿಸಬೇಕಾಗುತ್ತದೆ. ನವೆಂಬರ್, ಮಾರ್ಚ್ ತಿಂಗಳ ವರೆಗೆ ಜಿಲ್ಲೆಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಏಳು ತಿಂಗಳು ರಸ್ತೆ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರ ಅವಕಾಶ ಕೇಳಿದೆ. ದೇವಿಮನೆ ಘಟ್ಠದಲ್ಲಿ ಟೈಂ ಪೀರಿಯಡ್ ಕಡಿಮೆ ಮಾಡಲು ವಿನಂತಿಸಿದ್ದೇವೆ. ಯಲ್ಲಾಪುರ, ಮಾವಿನಗುಂಡಿ, ಸಿದ್ದಾಪುರ ಮೂಲಕ ಬದಲಿ ಮಾರ್ಗ ಸೂಚಿಸಲಾಗಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಅಭಿವೃದ್ದಿಯ ವೇಳೆ ಅರಣ್ಯ ಇಲಾಖೆಯೂ ಸಹಕರಿಸಬೇಕು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಾಗ ಸ್ಥಳೀಯ ವಾಹನಕ್ಕೂ ಅವಕಾಶ ನೀಡಿ. ಮಾರ್ಚ್ ತಿಂಗಳಿನಲ್ಲಿ ಶಿರಸಿಯ ಮಾರಿಕಾಂಬಾ ದೇವಿ ಜಾತ್ರೆ ಇದ್ದು, ಭಕ್ತರಿಗೆ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.ಶಿರಸಿ ನಗರದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ನೀಲೇಕಣಿಯಿಂದ ಮೀನು ಮಾರ್ಕೆಟ್ ವರೆಗೆ ಒಂದು ಟೆಂಡರ್, ಇನ್ನೊಂದು ಬೇರೆ ಟೇಂಡರ್ ಮಾಡಿದ್ದಾರೆ. ಕಾಮಗಾರಿ ಮಾಡುವಾಗ ಸಮರ್ಪಕವಾಗಿ ಮುಂದಾಲೋಚನೆ ಹಾಕಿಕೊಳ್ಳಿ ಎಂದು ಶಾಸಕರು ಹೇಳಿದರು.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿ, ೫೮.೯೨ ಕಿಮಿ ಒಟ್ಟೂ ರಸ್ತೆಯ ೩೦.೫ ಕಿಮಿ ಬಹುತೇಕ ಪೂರ್ಣಗೊಂಡಿದೆ. ಉಳಿದ ರಸ್ತೆಗೆ ರಸ್ತೆ ಬಂದ್‌ಗೊಳಿಸುವುದು ಅನಿವಾರ್ಯ. ಇನ್ನೂ ೧೨ ಕಡೆ ಬ್ರಿಜ್ ಆಗಬೇಕಿದೆ. ಬೆಣ್ಣೆಹೊಳೆ ಬ್ರಿಜ್ ನಿರ್ಮಾಣ ಮಾಡುವಾಗ ಸಂಚಾರಕ್ಕೆ ತೀವ್ರ ಸಮಸ್ಯೆ ಆಗಲಿದೆ. ದೇವಿಮನೆ ಘಟ್ಠದಲ್ಲಿ ೩.೫ ಮೀಟರ್ ತಡೆಗೋಡೆ ಮಾಡುತ್ತಿದ್ದೇವೆ ಎಂದರು.ಕೋಳಿ ಸಾಗಾಟಕ್ಕೂ ಅವಕಾಶ
ಇಕ್ಕಟ್ಟಾದ ಸ್ಥಳದಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡುವುದು ಸಮಸ್ಯೆ ಆಗುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಮಿನಿ ಬಸ್‌ಗಳಿಗೆ ಮಾತ್ರ ಸಂಚರಿಸುವ ಬಗ್ಗೆಯೂ ಪ್ರಸ್ತಾಪ ಕೇಳಿಬಂತು. ಆದರೆ, ಸಭೆಯಲ್ಲಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು, ಮಿನಿ ಬಸ್‌ಗಳು ಅಗತ್ಯ ಸಂಖ್ಯೆಯಲ್ಲಿಲ್ಲ. ಅಲ್ಲದೇ ಅವು ಸುಸಜ್ಜಿತ ಸ್ಥಿತಿಯಲ್ಲಿರದ ಕಾರಣ ಘಟ್ಟ ಪ್ರದೇಶದಲ್ಲಿ ಸಂಚಾರ ಕಷ್ಟ ಎಂದು ಉತ್ತರಿಸಿದರು. ಈ ಮಾರ್ಗದ ಬಂಡಲದಲ್ಲಿ ಅನೇಕ ಕಡೆ ಕುಕ್ಕುಟ ಉದ್ಯಮವಿದೆ. ಕೋಳಿಗಳ ಸಾಗಾಟಕ್ಕೆ ಅವಕಾಶ ನೀಡದಿದ್ದರೆ ಹಾನಿ ಅನುಭವಿಸಬೇಕಾಗುತ್ತದೆ ಎಂದು ಸ್ಥಳೀಯರು ವಿನಂತಿಸಿದಾಗ ಕೋಳಿ ಸಾಗಾಟಕ್ಕೆ ವಾಹನ ಸಂಚರಿಸಲು ಒಪ್ಪಿಗೆ ಸೂಚಿಸಲಾಯಿತು.