ಸೇತುವೆ ಕಾಮಗಾರಿಗೆ ಸ್ಥಳೀಯರ ವಿರೋಧ

| Published : Apr 29 2024, 01:32 AM IST

ಸಾರಾಂಶ

ಗಂಗಾವಳಿಯಲ್ಲಿ ಆರಂಭಗೊಂಡಿದ್ದ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ತಡೆಯೊಡ್ಡಿದ್ದರು. ಈ ಮಳೆಗಾಲದೊಳಗೆ ಈ ರಸ್ತೆ ಕಾಮಗಾರಿ ಮುಕ್ವಾತಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಸಹಜವಾಗಿಯೇ ನೋವಾಗಿದೆ.

ಅಂಕೋಲಾ: ನನೆಗುದಿಗೆ ಬಿದ್ದಿದ್ದ ಮಂಜಗುಣಿ- ಗಂಗಾವಳಿ ನಡುವಿನ ಸೇತುವೆ ಕಾಮಗಾರಿಗೆ ತಾತ್ಕಾಲಿಕವಾಗಿ ಬಾರಿ ವಾಹನ ಸಂಚರಿಸುವಂತೆ ಮಾಡಲು ಅಧಿಕಾರಿಗಳ ಸಮ್ಮುಖದಲ್ಲಿ ಗುತ್ತಿಗೆದಾರರು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಸ್ಥಗಿತಗೊಳಿಸಿದ ಘಟನೆ ನಡೆದಿದೆ.

ಕಳೆದ 7 ವರ್ಷಗಳಿಂದ ಈ ಕಾಮಗಾರಿ ನಡೆಯುತ್ತಿದ್ದು, ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಮಂಜಗುಣಿ ಮತ್ತು ಗಂಗಾವಳಿಯಲ್ಲಿ ರಸ್ತೆ ಜೋಡಣೆಯ ಕಾಮಗಾರಿ ಮಾತ್ರ ಬಾಕಿ ಉಳಿದಿತ್ತು. ಇದರಿಂದಾಗಿ ಕೇವಲ ದ್ವಿಚಕ್ರ ವಾಹನ ಮಾತ್ರ ಸಂಚರಿಸಲು ಸಾಧ್ಯವಾಗಿತ್ತು. ರಸ್ತೆ ನಿರ್ಮಾಣ ಮಾಡಲು ಸ್ಥಳೀಯರು ಅನೇಕ ಬಾರಿ ಹೋರಾಟ ಮಾಡುತ್ತಲೇ ಬಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.

ಈ ಸೇತುವೆ ಕಾಮಗಾರಿಯನ್ನು ಗುತ್ತಿಗೆ ಪಡೆದ ಡಿಆರ್‌ಎನ್ ಇನ್‌ಪ್ರಾಸ್ಟ್ರಕ್ಚರ್ ಕಂಪನಿಯವರು ನಿರ್ಲಕ್ಷ್ಯ ತೋರಿದ ಹಿನ್ನೆಲೆ ಕಳೆದ ಒಂದು ವರ್ಷದಿಂದ ಯಾವುದೇ ಕಾಮಗಾರಿ ನಡೆದಿರಲಿಲ್ಲ. ಇತ್ತೀಚೆಗೆ ಸಭೆಯೊಂದರಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಹನೀಫ್ ಶೇಖ್ ಗಮನಕ್ಕೆ ತಂದರು.

ತಕ್ಷಣ ಅವರು ದೂರವಾಣಿಯ ಮೂಲಕ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ತಕ್ಷಣ ಕಾಮಗಾರಿ ಮುಗಿಯಬೇಕು. ಇಲ್ಲದಿದ್ದರೆ ಮಾಡಿದ ಕೆಲಸಕ್ಕೆ ಮಾತ್ರ ಬಿಲ್ ಪಾವತಿಸಿ ಉಳಿದ ಕಾಮಗಾರಿಯನ್ನು ಬೇರೆ ಕಂಪನಿಗೆ ವಹಿಸಬೇಕಾಗುತ್ತದೆ ಎಂದು ಹೇಳಿದ ಹಿನ್ನೆಲೆ ಈಗ ಗುತ್ತಿಗೆ ಪಡೆದ ಕಂಪನಿಯವರು ತರಾತುರಿಯಲ್ಲಿ ಮಣ್ಣು ಹಾಕಿ ಕೈತೊಳೆದುಕೊಳ್ಳಲು ಮುಂದಾಗಿದ್ದರು. ಆದರೆ ಸ್ಥಳೀಯರು ಈ ತರಾತುರಿಗೆ ತಡೆಯೊಡ್ಡಿದ್ದಾರೆ.

ಕೆಆರ್‌ಡಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ಅಳಂಗಳಿ ಹಾಗೂ ಎಂಜಿನಿಯರ್ ಸುಧೀರ ಮೇತ್ರಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಮಂಜಗುಣಿಯಲ್ಲಿ ಅಂಡರ್‌ಪಾಸ್ ಮಾಡಿ ಕಾಮಗಾರಿ ನಡೆಸಬೇಕು. ಇಲ್ಲದಿದ್ದರೆ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸಲಿದೆ ಎಂದರು.

ಗಂಗಾವಳಿಯಲ್ಲಿ ಆರಂಭಗೊಂಡಿದ್ದ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ತಡೆಯೊಡ್ಡಿದ್ದರು. ಈ ಮಳೆಗಾಲದೊಳಗೆ ಈ ರಸ್ತೆ ಕಾಮಗಾರಿ ಮುಕ್ತಾವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಸಹಜವಾಗಿಯೇ ನೋವಾಗಿದೆ. ಈಗಲೂ ತಾತ್ಕಾಲಿಕ ರಸ್ತೆ ನಿರ್ಮಿಸಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ. ತಕ್ಷಣ ಮಂಜಗುಣಿಯಲ್ಲಿ ಅಂಡರ್‌ಪಾಸ್ ಸೇತುವೆ ನಿರ್ಮಿಸಿ ಅದಕ್ಕೆ ಅಗತ್ಯವಿರುವ ಸಹಕಾರ ನೀಡಲಿದ್ದೇವೆ. ಅದನ್ನು ಬಿಟ್ಟು ತೇಪೆ ಹಾಕುವ ಕಾರ್ಯಕ್ಕೆ ವಿರೋಧವಿದೆ ಎಂದು ಸ್ಥಳೀಯರು ಹೇಳಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

ಈ ಸಂದರ್ಭದಲ್ಲಿ ಹೊನ್ನೆಬೈಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಮಣ ಕೆ. ನಾಯ್ಕ, ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ ಗೌಡ, ಸ್ಥಳೀಯ ಪ್ರಮುಖರಾದ ಶ್ರೀಪಾದ ನಾಯ್ಕ, ಈಶ್ವರ ಎಸ್. ನಾಯ್ಕ, ಅನಿಲ ಜೆ. ನಾಯ್ಕ, ಕೆ.ಆರ್. ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

₹28.70 ಕೋಟಿ ಪಾವತಿ

ಮಂಜಗುಣಿ- ಗಂಗಾವಳಿ ನಡುವಿನ ಸೇತುವೆ ಕಾಮಗಾರಿಗೆ ಇನ್ನುವರೆಗೂ ಹಣ ಪಾವತಿಯಾಗಿಲ್ಲ. ಹೀಗಾಗಿ ನಾವು ಕೆಲಸ ಮಾಡುವುದು ಹೇಗೆ ಎಂದು ಗುತ್ತಿಗೆ ಕಂಪನಿಯವರು ಸ್ಥಳೀಯರಿಗೆ ಪದೇ ಪದೇ ತಪ್ಪು ಮಾಹಿತಿ ನೀಡುತ್ತಲೇ ಬಂದಿದ್ದರು. ಆದರೆ ನಾಡುಮಾಸ್ಕೇರಿ ಗ್ರಾಪಂ ಮಾಜಿ ಅಧ್ಯಕ್ಷ ಹನೀಫ್ ಶೇಖ್ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಗುತ್ತಿಗೆ ಕಂಪನಿಗೆ ₹28.70 ಕೋಟಿ ಹಣ ಪಾವತಿಯಾಗಿರುವುದು ದೃಢಪಟ್ಟಿದೆ. ಇನ್ನು ₹4 ಕೋಟಿ ಬರಬೇಕಾಗಿದ್ದು, ಕಾಮಗಾರಿ ಮುಗಿದ ತಕ್ಷಣ ಅದು ಕೂಡ ಪಾವತಿಯಾಗಲಿದೆ.

ಮೇಲಧಿಕಾರಿಗಳ ಜತೆ ಚರ್ಚೆ: ಇಲ್ಲಿಯ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಕೊಡುವ ಉದ್ದೇಶವಿಲ್ಲ. ಮಂಜಗುಣಿಯಲ್ಲಿ ಅಂಡರ್‌ಪಾಸ್ ಸೇತುವೆ ಆಗುವುದು ಅತಿಮುಖ್ಯವಾಗಿದೆ. ಸ್ಥಳೀಯರ ಸಲಹೆಯಂತೆ ಸದ್ಯ ಕಾಮಗಾರಿ ಮಾಡದೇ ತಕ್ಷಣ ಅಂಡರ್‌ಪಾಸ್ ಕಾಮಗಾರಿಗೆ ಒತ್ತು ನೀಡಲು ಮೇಲಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹುಬ್ಬಳ್ಳಿಯ ಕೆಆರ್‌ಡಿಸಿಎಲ್ ಎಂಜಿನಿಯರ್ ಸುಧೀರ ಮೇತ್ರಿ ತಿಳಿಸಿದರು.