ಸಾರಾಂಶ
ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಾಣವಾಗಲಿರುವ ಗ್ರೀನ್ ಫೀಲ್ಡ್ ಬಂದರು ಕಾಮಗಾರಿಗೆ ಸ್ಥಳೀಯ ಮೀನುಗಾರರ ವಿರೋಧವಿದ್ದರೂ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕರ್ನಾಟಕ ಮರಿಟೈಮ್ ಗೋಲ್ಡ್ ಇದರ ಕಾರ್ಯನಿರ್ವಹಣಾಧಿಕಾರಿ ಜಯರಾಮ ರಾಯಪುರ ಕಾರವಾರದಲ್ಲಿ ಹೇಳಿಕೆ ನೀಡಿರುವುದು ಸಂಪೂರ್ಣ ಸುಳ್ಳಾಗಿದೆ. ಇದೇ ರೀತಿ ಹೇಳಿಕೆ ನೀಡುತ್ತಿದ್ದರೆ ಬಂದರು ಸ್ಥಳದಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧ ಎಂದು ಹೋರಾಟ ಸಮಿತಿಯ ಶ್ರೀಕಾಂತ ದುರ್ಗೇಕರ ಎಚ್ಚರಿಕೆ ನೀಡಿದರು.
ವಾಣಿಜ್ಯ ಬಂದರು ವಿರೋಧಿ ಗ್ರಾಮಸ್ಥರ ವಿಶೇಷ ಸಭೆಯಲ್ಲಿ ಮಾತನಾಡಿ, ಈಗಾಗಲೇ ಜಯರಾಮ ಅವರು ಮೀನುಗಾರರ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಮಾಣ ಕಾಮಗಾರಿ ಆರಂಭಿಸಿದ್ದೇವೆ. ಕೇಣಿ ಬಂದರಿನ ಮೀನುಗಾರ ಮುಖಂಡರು ಇದಕ್ಕೆ ಸಮ್ಮತಿಸಿದ್ದಾರೆ ಎನ್ನುವ ಬಾಲಿಶ ಹೇಳಿಕೆ ನೀಡಿದ್ದು, ಮೀನುಗಾರರು ಇನ್ನಷ್ಟು ರೊಚ್ಚಿಗೇಳುವ ಪರಿಸ್ಥಿತಿ ಉಂಟು ಮಾಡಿದ್ದಾರೆ. ಕೇಂದ್ರ ಸರ್ಕಾರದ ಬಂದರು ಹಡಗು ಮತ್ತು ಜಲಮಾರ್ಗ ಸಚಿವಾಲಯದ ನಿರ್ದೇಶನದಂತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿಕೆ ನೀಡಿದ್ದಾರೆ. ಮೀನುಗಾರರು ಫೆ. 5ರಂದು ಸಭೆಗೆ ಹಾಜರಿರದಿದ್ದರೂ ಹಾಜರಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ. ಇದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಒಂದು ವೇಳೆ ಇಲ್ಲಿ ಮೀನುಗಾರಿಕಾ ಬಂದರು ದಬ್ಬಾಳಿಕೆ ಮೇಲೆ ನಿರ್ಮಾಣ ಮಾಡಿದರೆ ಉಗ್ರ ಸ್ವರೂಪದ ಹೋರಾಟ ನಡೆಸಬೇಕಾದಿತು ಎಂದರು.ಸಂಜೀವ ಬಲೇಗಾರ ಮಾತನಾಡಿ, ಮೀನುಗಾರರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಬಂದರು ನಿರ್ಮಾಣವಾದರೆ ಸುತ್ತಮುತ್ತಲಿನ ಹಳ್ಳಿಗಳಿಗೆ ಸಮುದ್ರ ಕೊರೆತ ಆಗುತ್ತದೆ. ಬಂದರಿನಿಂದ ಆಮದು ರಫ್ತಾಗುವ ರಾಸಾಯನಿಕಗಳಿಂದ ಊರಿನಲ್ಲಿ ಕಾಯಿಲೆಗಳು ಹರಡುತ್ತವೆ. ಬಂದರು ನಿರ್ಮಾಣವಾದರೆ ಇಲ್ಲಿಯ ಮೀನುಗಾರರು ನಶಿಸಿ ಹೋಗುತ್ತಾರೆ ಎಂದರು.
ಮೀನುಗಾರ ಪ್ರಮುಖ ಹೂವಾ ಖಂಡೇಕರ ಮಾತನಾಡಿ, ಕೇಣಿಯಲ್ಲಿ ಮೀನುಗಾರಿಕೆ ಬಂದರಿನಲ್ಲಿ ವಾಣಿಜ್ಯ ಬಂದರು ಬೇಡ ಎಂದು ಹೋರಾಟ ಆರಂಭಿಸಿದ ದಿನದಿಂದ ಇದುವರೆಗೂ ಯಾವೊಬ್ಬ ರಾಜಕೀಯ ಪಕ್ಷದ ಮುಖಂಡರು ಇಲ್ಲಿಗೆ ಬಂದು ನಮಗೆ ಬೆಂಬಲ ನೀಡಲಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ನಮ್ಮ ಬಳಿ ಬರುತ್ತಾರೆ. ಇಂತಹ ಸಂದರ್ಭದಲ್ಲಿಯೂ ನಮ್ಮ ಬೆಂಬಲಕ್ಕೆ ನಿಲ್ಲದಿದ್ದರೆ ಮುಂದಿನ ದಿನದಲ್ಲಿ ಯಾವುದೇ ಚುನಾವಣೆ ಬಂದರೂ ಬಹಿಷ್ಕಾರ ಹಾಕುತ್ತೇವೆ ಎಂದರು.ಈ ಸಂದರ್ಭದಲ್ಲಿ ಸರೀತಾ ಬಲೇಗಾರ ಜ್ಞಾನೇಶ್ವರ ಹರಿಕಂತ್ರ, ರಾಜೇಶ್ವರಿ ಕೇಣಿಕರ, ಸ್ಮೀತಾ ಹರಿಕಂತ್ರ, ರಾಮಾ ದುರ್ಗೇಕರ, ಚಂದ್ರಕಾಂತ ಹರಿಕಂತ್ರ, ರಮೇಶ ಹರಿಕಂತ್ರ, ಲಕ್ಷ್ಮೀ ಹರಿಕಂತ್ರ, ನವೀನ ಹರಿಕಂತ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಯಕ ಶರಣರ ಜಯಂತ್ಯುತ್ಸವಮುಂಡಗೋಡ: ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ ಕಾಯಕ ಶರಣರ ಜಯಂತ್ಯುತ್ಸವವನ್ನು ಆಚರಿಸಲಾಯಿತು. ಶಾಸಕ ಶಿವರಾಮ ಹೆಬ್ಬಾರ ಅವರು ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಶಂಕರ ಗೌಡಿ, ಉಪತಹಸೀಲ್ದಾರ್ ಜಿ.ಬಿ. ಭಟ್, ಚಿದಾನಂದ ಹರಿಜನ, ಬಾಬಣ್ಣ ಕೋಣನಕೇರಿ, ಬಸವರಾಜ ಸಂಗಮೇಶ್ವರ, ಕೆಂಜೋಡಿ ಗಲಬಿ ಮುಂತಾದವರು ಉಪಸ್ಥಿತರಿದ್ದರು.