ಬಸವರಾಜ ಹಿರೇಮಠ

ಧಾರವಾಡ: ಇದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ಬಡವರಿಗಾಗಿ ನಿರ್ಮಿಸಿದ ಬಡಾವಣೆ. ಅಧಿಕೃತವಾಗಿ ಹುಡಾ ನಿರ್ಮಿಸಿದ್ದರೂ, ಒಂದೂವರೆ ದಶಕದಿಂದ ಈ ಬಡಾವಣೆಯು ಹುಡಾ-ಮಹಾನಗರ ಪಾಲಿಕೆ ಮಧ್ಯೆ ಸಿಕ್ಕು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.

ಸುಮಾರು 200 ಕುಟುಂಬಗಳು ಇಲ್ಲಿ ವಾಸವಾಗಿದ್ದು, ಮೂಲಭೂತ ಸೌಕರ್ಯಗಳಿಲ್ಲದೇ ಇಲ್ಲಿಯ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಧಾರವಾಡ ಸಮೀಪದ ಲೋಹಿಯಾ ನಗರ ದುಸ್ಥಿತಿ ಇದು. ಇಲ್ಲಿಯ ನಿವಾಸಿಗಳಿಗೆ 2009ರಲ್ಲಿ ಹುಡಾ ಮನೆ ನಿರ್ಮಿಸಿಕೊಳ್ಳಲು ನಿವೇಶನ ನೀಡಿತ್ತು. ಅಲ್ಲದೇ 2015ರಲ್ಲಿ ಈ ನಿವೇಶನಗಳಲ್ಲಿ ಆರ್‌ಸಿಸಿ ಮನೆಗಳನ್ನೇ ನಿರ್ಮಿಸಿಕೊಳ್ಳಬೇಕೆಂಬ ಆದೇಶ ಹೊರಡಿಸಿತು. ಅನಿವಾರ್ಯವಾಗಿ ಈ ಬಡ ಕುಟುಂಬಗಳು ತಗಡು-ಹೆಂಚಿನ ಮನೆಗಳಿಗೆ ಸಾಲ ಮಾಡಿ ಆರ್‌ಸಿಸಿ ಮನೆಗಳಾಗಿ ಪರಿವರ್ತಿಸಿದ್ದಾರೆ.

ಮುಖ್ಯ ರಸ್ತೆಯೇ ಇಲ್ಲ


ಧಾರವಾಡ-ಕಲಘಟಗಿ ಮುಖ್ಯ ರಸ್ತೆಯಿಂದ ಸುಮಾರು 2 ಕಿಮೀ ಒಳದಾರಿಯಲ್ಲಿ ಹೋದರೆ ಲೋಹಿಯಾ ನಗರ ಸಿಗುತ್ತದೆ. ಮುಖ್ಯರಸ್ತೆಯಿಂದ ಲೋಹಿಯಾ ನಗರ ಸಂಪರ್ಕಿಸುವ 2 ಕಿಮೀ ದಾರಿ ಸವೆಸಲು ಹರಸಾಹಸ ಪಡಬೇಕು. ಕಲ್ಲು-ಮಣ್ಣಿನಿಂದ ತುಂಬಿದ ರಸ್ತೆಯಲ್ಲಿ ಸಂಚಾರ ದುಸ್ಸಾಹಸವೇ ಸರಿ. ಮಳೆಗಾಲದಲ್ಲಂತೂ ಇಲ್ಲಿಯ ಜನರು ತುಂಬಾ ತೊಂದರೆ ಅನುಭವಿಸಬೇಕಿದೆ. ಹದಗೆಟ್ಟ ರಸ್ತೆಯಿಂದಾಗಿ ಬೈಕ್‌ ಸವಾರರು ಬಿದ್ದು ಕೈ-ಕಾಲು ಮುರಿದುಕೊಂಡ ಉದಾಹರಣೆ ಸಾಕಷ್ಟಿವೆ.

ಕತ್ತಲು ನಗರ

ಇನ್ನು, ಇಡೀ ಬಡಾವಣೆಗೆ ಸಮರ್ಪಕ ಚರಂಡಿಗಳಿಲ್ಲ. ಇದ್ದ ಚರಂಡಿಗಳು ಕುಸಿದು ಬಿದ್ದಿವೆ. ಹೀಗಾಗಿ ಮನೆಯ ಹಾಗೂ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಲೋಹಿಯಾ ನಗರದಲ್ಲಿ ಬೀದಿದೀಪಕ್ಕೆ ಕಂಬಗಳಿವೆ. ವಿದ್ಯುತ್‌ ಸಂಪರ್ಕವಿಲ್ಲ. ರಾತ್ರಿ ಹೊತ್ತು ಮನೆ ಬಿಟ್ಟು ಹೊರ ಬರುವ ಸ್ಥಿತಿ ಇಲ್ಲ. ಹೀಗಾಗಿ ಲೋಹಿಯಾ ನಗರವಲ್ಲ, ಕತ್ತಲು ನಗರ ಎಂದು ಗುರುತಿಸಿಕೊಂಡಿದೆ. ಮಲಪ್ರಭಾ ನೀರೂ ಇಲ್ಲ. ಕೊಳವೆಬಾವಿ ನೀರು ಕುಡಿಯಲು ಅಲ್ಲ, ಬಳಸಲು ಯೋಗ್ಯವಲ್ಲ ಎಂಬ ವರದಿ ಇತ್ತೀಚೆಗೆ ಬಂದಿದೆ. ಹೀಗಾಗಿ ವಾರಕ್ಕೆ ಎರಡು ಟ್ಯಾಂಕ್‌ ಕುಡಿಯುವ ನೀರು ಪಡೆಯುತ್ತಿರುವುದೇ ನಮ್ಮ ದೊಡ್ಡ ಸಾಧನೆ ಎನ್ನುತ್ತಾರೆ ಬಡಾವಣೆಯ ಹಿರಿಯರಾದ ಶೇಖಪ್ಪ ಚೀಟಿಮನಿ, ಮೊಹಮ್ಮದ್‌ ಬಳ್ಳೊಳ್ಳಿ, ಈರಪ್ಪ ನಾಯ್ಕರ ಹಾಗೂ ಗಂಗಪ್ಪ ಸೇಬನ್ನವರ.

ಸೇತುವೆ ಕಾಮಗಾರಿ ಬಂದ್‌

ಲೋಹಿಯಾ ನಗರ ಸಂಪರ್ಕಿಸುವ ರಸ್ತೆ ಮಧ್ಯೆ ಮಳೆ ನೀರು ಬರುತ್ತಿದ್ದು, ಸೇತುವೆ ನಿರ್ಮಾಣ ಅರ್ಧಕ್ಕೆ ನಿಂತಿದೆ. ಮಳೆಗಾಲದಲ್ಲಿ ತೇಜಸ್ವಿನಗರ, ತಡಸಿಕನೊಪ್ಪ ಸೇರಿ ಮೇಲಿನ ಪ್ರದೇಶದಿಂದ ಹರಿದು ಬರುವ ನೀರು ರಸ್ತೆಯಲ್ಲಿಯೇ ಕೆರೆಯ ಆಕಾರದಲ್ಲಿ ನಿಲ್ಲುತ್ತದೆ. ಆಗ ಧಾರವಾಡದಿಂದ ನಮ್ಮ ನಗರಕ್ಕೆ ಸಂಪರ್ಕ ಬಂದ್‌ ಆಗುತ್ತದೆ. ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಸೇತುವೆ ಕಾಮಗಾರಿ ಆರಂಭವಾಗಿ ಇದೀಗ ಸ್ಥಗಿತಗೊಂಡಿದೆ. ಮಳೆಗಾಲದೊಳಗೆ ಈ ಕಾಮಗಾರಿ ಮುಗಿಸುವಂತೆಯೂ ಬಡಾವಣೆ ನಿವಾಸಿಗಳು ಆಗ್ರಹಿಸುತ್ತಾರೆ.

19ನೇ ವಾರ್ಡ್‌

ಈ ಸಮಸ್ಯೆ ಬಗ್ಗೆ ಹುಡಾ ಅಧಿಕಾರಿಗಳಿಗೂ ಗೊತ್ತು, ಮಹಾನಗರ ಪಾಲಿಕೆ ಹಾಗೂ ಶಾಸಕ ಅರವಿಂದ ಬೆಲ್ಲದ ಗಮನಕ್ಕೂ ಇದೆ. ಹಲವು ಬಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. 19ನೇ ವಾರ್ಡ್ ವ್ಯಾಪ್ತಿಗೆ ಬರುವ ಈ ಬಡಾವಣೆ ಇನ್ನೂ ಹುಡಾದಿಂದ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಆದ್ದರಿಂದ ನಾವು ಅಭಿವೃದ್ಧಿ ಮಾಡಿಲ್ಲ ಎಂದು ಪಾಲಿಕೆ ಸದಸ್ಯರಾದ ಲಕ್ಷ್ಮೀ ಹಿಂಡಸಗೇರಿ ಹೇಳುತ್ತಾರೆ. ಹುಡಾ-ಪಾಲಿಕೆ ಮಧ್ಯೆ ಲೋಹಿಯಾ ನಗರದ ಜನರು ಮಾತ್ರ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಪಾಲಿಕೆಗೆ ಮುತ್ತಿಗೆ

ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಕ್ಕಾಗಿ ಲೋಹಿಯಾ ನಗರದ ನಿವಾಸಿಗಳು ಪಟ್ಟ ಪರಿಪಾಟಲು ಸಾಕಷ್ಟು. ಬಡಾವಣೆ ಸಂಪರ್ಕಿಸಲು ಮುಖ್ಯ ರಸ್ತೆಯೇ ಇಲ್ಲ. ಬಡಜನತೆ ವಾಸಿಸುವ ಈ ನಗರಕ್ಕೆ ಯಾವ ಸೌಕರ್ಯ ನೀಡದಿದ್ದರೂ ಪಾಲಿಕೆ ಹಾಗೂ ಹುಡಾಕ್ಕೆ ಮಾತ್ರ ಪ್ರತಿ ವರ್ಷ ತೆರಿಗೆ ಕಟ್ಟುತ್ತಿರುವ ನತದೃಷ್ಟರು ನಾವಾಗಿದ್ದೇವೆ. ಕೂಡಲೇ ಮಹಾನಗರ ಪಾಲಿಕೆ ಈ ಬಗ್ಗೆ ಗಮನ ಹರಿಸದೇ ಇದ್ದಲ್ಲಿ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಸಜ್ಜಾಗಿದ್ದೇವೆ ಎಂದು ಲೋಹಿಯಾ ನಗರ ನಿವಾಸಿ ಸಂದೀಪ ಭಜಂತ್ರಿ ಹೇಳಿದ್ದಾರೆ.