ಮಾ.9ರಂದು ಬೀದರ್‌ನಲ್ಲಿ ಲೋಕ ಅದಾಲತ್: ನ್ಯಾ.ಎಸ್.ಕೆ.ಕನಕಟ್ಟೆ

| Published : Feb 22 2024, 01:46 AM IST

ಸಾರಾಂಶ

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಅದಾಲತ್‌ ಆಯೋಜನೆ ಮಾಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಧೀಶ ಎಸ್.ಕೆ.ಕನಕಟ್ಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಮಾ.9ರಂದು ಬೀದರ್‌ನಲ್ಲಿ ಬೃಹತ್ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ.ಕನಕಟ್ಟೆ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ್‌, ವಿದ್ಯುತ್ ಪ್ರಕರಣಗಳು, ಕಂದಾಯ ಅಪರಾಧಿಕ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವಂತಹ ಪ್ರಕರಣಗಳು, ಕಾರ್ಮಿಕರ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆ. ಇದರ ಸದುಪಯೋಗವನ್ನು ಜಿಲ್ಲೆಯ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.

2023ರ ಲೋಕ ಅದಾಲತ್‌ನಲ್ಲಿ 90,785 ಪ್ರಕರಣ ಇತ್ಯರ್ಥ:

2023ರಲ್ಲಿ ನಾಲ್ಕು ರಾಷ್ಟ್ರೀಯ ಲೋಕ ಅದಾಲತ್‌ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಾದ್ಯಾಂತ ಒಟ್ಟು (ಬಾಕಿಯಿರುವ) 7844 ಪ್ರಕರಣಗಳು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳಲ್ಲಿ 82941 ಪ್ರಕರಣಗಳನ್ನು ಅದಾಲತ್‌ನಲ್ಲಿ ಇತ್ಯರ್ಥಗೊಳಿಸಲಾಗಿದೆ. ಹೀಗೆ ಒಟ್ಟು 2023ರ ಅದಾಲತ್‌ನಲ್ಲಿ 90,785 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

2023ರ ನಾಲ್ಕು ಲೋಕ ಅದಾಲತ್‌ನಲ್ಲಿ ಒಟ್ಟು ಮೊತ್ತ 73,71,53,801 ರು. ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ. ಜಿಲ್ಲೆಯಾದ್ಯಾಂತ 2023ರ ಲೋಕ ಆದಾಲತ್‌ನಲ್ಲಿ ಒಟ್ಟು 18 ಜೋಡಿಗಳು ರಾಜಿ ಸಂಧಾನದ ಮೂಲಕ ಒಂದಾಗಿರುತ್ತಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ 30,830 ಪ್ರಕರಣಗಳು ಬಾಕಿ:

ಈ ಬಾರಿಯ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ (ಪೆಂಡಿಂಗ್‌) ಇರುವ ಪ್ರಕರಣಗಳನ್ನು ಹೆಚ್ಚು ಹೆಚ್ಚು ಇತ್ಯರ್ಥಗೊಳಿಸಲು ಯೋಜನೆ ರೂಪಿಸಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ.

ಫೆ.20ರ ವರೆಗೆ ಬೀದರ್‌ನಲ್ಲಿ ಒಟ್ಟು 30,830 ಪ್ರಕರಣಗಳು ಬಾಕಿ ಇದ್ದು, ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಿದ್ದೇವೆ. ಪ್ರಕರಣ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯ ಶುಲ್ಕ ವಾಪಸ್ ಸಿಗಲಿದೆ. ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ. ಇಬ್ಬರೂ ಕಕ್ಷಿಗಾರರು ತಮ್ಮ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದುವ ಅವಕಾಶ ಇರುತ್ತದೆಂದರು.

ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಕರಣ ವಿಲೇವಾರಿಗೊಳಿಸುವ ಗುರಿ ಇದ್ದು, ಮಾ.9ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ಜಿಲ್ಲೆಯ ಹೆಚ್ಚಿನ ಜನರು ಅದಾಲತ್‌ನಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಈ ಪತ್ರಿಕಾಗೋಷ್ಠಿಯಲ್ಲಿ ಜಗದೀಶ್ವರ ದೊರೆ, ಆಕಾಶ ಸಜ್ಜನ, ರಾಹುಲ, ಜೀವನ, ಮೋಹನ ಸೇರಿದಂತೆ ಇತರರು ಉಪಸ್ಥಿತರಿದ್ದರು.