ಸಾರಾಂಶ
ತುಳುಭಾಷೆಗೆ ಸ್ಥಾನಮಾನ ನೀಡುವ ಕುರಿತು ವಿವಿಕ್ಷ ಕ್ಷೇತ್ರ, ಪಕ್ಷ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ಬುಧವಾರ ನಗರದ ತುಳು ಭವನದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತುಳು ಭಾಷೆಯನ್ನು ರಾಜ್ಯಭಾಷೆ ಹಾಗೂ 8ನೇ ಪರಿಚ್ಚೇದಕ್ಕೆ ಸೇರಿಸುವ ಹೋರಾಟ ಇನ್ನಷ್ಟು ಪ್ರಬಲಗೊಂಡಿದೆ. ಮಾಜಿ ಶಾಸಕ ಮೊಹಿಯುದ್ದೀನ್ ಬಾವ ನೇತೃತ್ವದಲ್ಲಿ ತುಳುಭಾಷೆಗೆ ಸ್ಥಾನಮಾನ ನೀಡುವ ಕುರಿತು ವಿವಿಕ್ಷ ಕ್ಷೇತ್ರ, ಪಕ್ಷ ಸಂಘಟನೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ಬುಧವಾರ ನಗರದ ತುಳು ಭವನದಲ್ಲಿ ನಡೆಯಿತು.
ಈ ಹಿಂದೆ ತುಳುವಿಗೆ ಸ್ಥಾನಮಾನ ನೀಡುವಂತೆ ಮೊಹಿಯುದ್ದೀನ್ ಬಾವ ಸಿಎಂ, ಪಿಎಂಗೆ ಅಂಚೆ ಅಭಿಯಾನ ಆಯೋಜಿಸಿದ್ದರು. ಅದರ ಮುಂದುವರಿದ ಭಾಗವಾಗಿ ಈ ಸಮಾಲೋಚನಾ ಸಭೆ ಏರ್ಪಡಿಸಿದ್ದಾರೆ. ಇದರಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಟೀಲು ದೇವಸ್ಥಾನ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಕೇರಳ ರಾಜ್ಯಸಭೆ ಸದಸ್ಯ ಸಂತೋಷ್ ಸೇರಿದಂತೆ ತುಳು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತಾಯ:ಸಭೆಯಲ್ಲಿ ತುಳುಭಾಷೆಗೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿ ತುಳು ಭಾಷೆಗೆ ಮಾನ್ಯತೆ ನೀಡುವ ಭರವಸೆಯನ್ನು ಸೇರಿಸಲು ಒತ್ತಾಯಿಸಲಾಯಿತು. ಈ ಕುರಿತು ಎಲ್ಲ ರಾಜಕೀಯ ನಾಯಕರಿಗೆ ಹಕ್ಕೊತ್ತಾಯ ಮಂಡನೆ ಮಾಡಲಾಯಿತು.
ಸಭೆಯಲ್ಲಿ ಮಾತನಾಡಿದ ಕೇರಳದ ರಾಜ್ಯಸಭಾ ಸದಸ್ಯ ಸಂತೋಷ್ ಕುಮಾರ್, ತುಳು ಭಾಷೆಯನ್ನು 20 ಲಕ್ಷಕ್ಕೂ ಅಧಿಕ ಜನರು ತುಳು ಮಾತನಾಡುತ್ತಾರೆ. 8ನೇ ಪರಿಚ್ಚೇದಕ್ಕೆ ಸೇರಿಸಲು ಎಲ್ಲ ಅರ್ಹತೆಗಳಿವೆ. ಈಗಾಗಲೇ 22 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಿದ್ದು, 23ನೇ ಭಾಷೆಯಾಗಿ ತುಳು ಸೇರುವಂತಾಗಬೇಕು. ಈ ಹೋರಾಟದಲ್ಲಿ ತಾನು ಭಾಗಿಯಾಗುವುದಾಗಿ ತಿಳಿಸಿದರು.ಉಪವಾಸ ಸತ್ಯಾಗ್ರಹಕ್ಕೂ ಸಿದ್ಧ: ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಈಗಾಗಲೇ ಮೋಹನ್ ಆಳ್ವ ನೇತೃತ್ವದ ನಿಯೋಗದ ವರದಿ ಪ್ರಕ್ರಿಯೆ ನಡೆದಿದೆ. ತುಳುನಾಡಿನ ಎಲ್ಲ ಪಕ್ಷಗಳ ಮುಖಂಡರು ಪಕ್ಷ ಭೇದ ಬದಿಗಿಟ್ಟು ತುಳು ಭಾಷೆಯ ಸ್ಥಾನಮಾನಕ್ಕಾಗಿ ಹೋರಾಟ ಮಾಡುತ್ತೇವೆ. ತುಳುವಿಗಾಗಿ ಉಪವಾಸ ಸತ್ಯಾಗ್ರಹ ಹಾಗೂ ಯಾವುದೇ ಹೋರಾಟಕ್ಕೂ ಬದ್ಧ ಎಂದರು.ನಟ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಮಾತನಾಡಿ, ಪಕ್ಷಭೇದ ಮರೆತು ನಡೆಸಿದ ಯಾವ ಹೋರಾಟದಲ್ಲಿಯೂ ನಾವು ಸೋತಿಲ್ಲ, ಅದಕ್ಕೆ ಕಂಬಳ ಉದಾಹರಣೆಯಾಗಿದೆ. 8ನೇ ಪರಿಚ್ಚೇದಕ್ಕೆ ತುಳು ಯಾಕೆ ಸೇರಬೇಕು, ಇದರಿಂದ ಪ್ರಯೋಜನವೇನು ಎಂಬುದನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು, ಆಗ ಖಂಡಿತಾ ತುಳುವರು ನಮ ಹೋರಾಟಕ್ಕೆ ಪ್ರತಿ ಮನೆಯಿಂದ ಬರುತ್ತಾರೆ ಎಂದು ಹೇಳಿದರು.ಕಾರ್ಯಕ್ರಮ ಸಂಘಟಕ ಮೊಹಿಯುದ್ದೀನ್ ಬಾವ, ತುಳು ಆಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಇದ್ದರು.ಕರಾವಳಿಯಲ್ಲಿ ಬೋರ್ಡ್ ತೆರವು ಅಭಿಯಾನ
ಮಾಡಿದರೆ ಕೋಮುಗಲಭೆ ಆದೀತು: ಬಾವಕನ್ನಡ ಸಂಘಟನೆಗಳ ಬೋರ್ಡ್ ತೆರವು ಅಭಿಯಾನದ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಮೊಹಿಯುದ್ದೀನ್ ಬಾವ, ಈಗಾಗಲೇ ದ.ಕ ಮತ್ತು ಉಡುಪಿ ಕೋಮು ಸೂಕ್ಷ್ಮ ಜಿಲ್ಲೆಗಳೆಂಬ ಕುಖ್ಯಾತಿ ಪಡೆದಿವೆ. ಮುಸ್ಲಿಮರ ಅಂಗಡಿಯ ಬೋರ್ಡನ್ನು ಹಿಂದೂ ತೆಗೆದರೆ ಗಲಾಟೆ ಆಗಬಹುದು. ಹಿಂದೂವಿನ ಬೋರ್ಡ್ ಮುಸ್ಲಿಂ ತೆಗೆದರೂ ಗಲಾಟೆ ಆಗಬಹುದು. ಕೋಮು ಗಲಭೆ ನಡೆಯಬಹುದು. ಕನ್ನಡ ಸಂಘಟನೆಗಳಲ್ಲಿ ಹಿಂದೂ, ಮುಸ್ಲಿಂ ಕಾರ್ಯಕರ್ತರು ಇರ್ತಾರೆ. ಹೀಗಾಗಿ ಎರಡೂ ಜಿಲ್ಲೆಯ ಎಸ್ಪಿ, ಡಿಸಿಯವರಲ್ಲಿ ಮನವಿ ಮಾಡುತ್ತೇನೆ. ತುಳುನಾಡಿನಲ್ಲಿ ಬೋರ್ಡ್ ಕಿತ್ತು ಹಾಕೋದು ಬೇಡ, ಅವರಿಗೆ ಮನವಿ ಮಾಡಿ ಕನ್ನಡ ಬೋರ್ಡ್ ಹಾಕುವ ಕೆಲಸ ಮಾಡಲಿ. ಮುಂದೆ ತುಳು ಲಿಪಿ ಬಂದರೆ ತುಳುವಿನಲ್ಲಿ ಬೋರ್ಡ್ ಹಾಕೋಣ ಎಂದು ಹೇಳಿದರು.