ಸಾರಾಂಶ
ದೇವರಹಿಪ್ಪರಗಿ: ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೂಲ ದೇವಸ್ಥಾನದಿಂದ ಬೆಳಗ್ಗೆ ಗಂಗಾ ಸ್ಥಾನ ಮುಗಿಸಿ ಗ್ರಾಮದೇವತೆಗೆ ಎತ್ತಿನ ಬಂಡಿಯಲ್ಲಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿ, ರಥದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗ್ರಾಮ ದೇವತೆಯನ್ನು ಹೊತ್ತ ರಥ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆದಿದ್ದು, ಗ್ರಾಮದ ಪ್ರಮುಖರು, ಕುಂಭ ಹೊತ್ತು ಮಹಿಳೆಯರು, ಗ್ರಾಮದೇವತೆ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಕ್ತರು ಗ್ರಾಮದೇವತೆ ರಥೋತ್ಸವವಕ್ಕೆ ಚಾಲನೆ ನೀಡಿದರು.ಮುಖ್ಯಬೀದಿಗಳಲ್ಲಿ ದೇವಿ ರಥ ಸಂಚರಿಸುತ್ತಿದ್ದಂತೆ ಭಣಕ್ತರಿಂದ ಜಯಘೋಷಗಳು ಮೊಳಗಿದವು. ಈ ವೇಳೆ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು. ಗ್ರಾಮದೇವತೆ ರಥದ ಜೊತೆಯಲ್ಲಿ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತಕ್ಕೆ ಆಗಮಿಸಿ ಗ್ರಾಮ ದೇವತೆಗೆ ಗಂಗಾ ಸ್ನಾನ ಹಾಗೂ ಪೂಜಾ ವಿಧಿ ವಿಧಾನ ನೆರವೇರಿಸಿ ಗ್ರಾಮದೊಳಗೆ ಪ್ರವೇಶ ಮಾಡಿದ್ದು, ಹನುಮಾನ ದೇವಸ್ಥಾನದ ಬಳಿ ರಥಕ್ಕೆ ಪೂಜೆ ಸಲ್ಲಿಸಲಾಯಿತು. ಬುಧವಾರ ಬೆಳಗ್ಗೆ ಮೂಲಸ್ಥಾನ ಗ್ರಾಮದೇವತೆ ದೇವಸ್ಥಾನಕ್ಕೆ ದೇವಿಯ ರಥ ತೆರಳಿ ಗ್ರಾಮ ದೇವತೆಗೆ ಪೂಜೆ ನೈವೇದ್ಯ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ.
ಗ್ರಾಮ ದೇವತೆ ಜಾತ್ರೆ ನಿಮಿತ್ತ ಡೊಳ್ಳು ಕುಣಿತ, ಹುಲಿ ಕುಣಿತ, ನಂದಿ ಕುಣಿತ, ಹಾಸ್ಯ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಪುನೀತರಾದರು.