ಲೋಕಸಭಾ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

| Published : Mar 18 2024, 01:45 AM IST

ಲೋಕಸಭಾ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬರುವ ಏಪ್ರಿಲ್‌ 26 ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹೇಳಿದ್ದಾರೆ.

ಜಿಲ್ಲೆಯ ನಾಲ್ಕು ಕ್ಷೇತ್ರ ಉಡುಪಿಗೆ, ಒಂದು ಕ್ಷೇತ್ರ ಹಾಸನ ವ್ಯಾಪ್ತಿಯಲ್ಲಿದೆ । 22 ಕಡೆ ಚೆಕ್‌ ಪೋಸ್ಟ್‌: ಡಿಸಿ ಮೀನಾ ನಾಗರಾಜ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬರುವ ಏಪ್ರಿಲ್‌ 26 ರಂದು ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಹೇಳಿದ್ದಾರೆ.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಶೃಂಗೇರಿ ಕ್ಷೇತ್ರಗಳು ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ. ಕಡೂರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದೆ ಎಂದು ಮಾಹಿತಿ ನೀಡಿದರು.ನೆರೆಯ ಉಡುಪಿ ಹಾಗೂ ಹಾಸನ ಜಿಲ್ಲಾ ಕೇಂದ್ರಗಳು ನಾಮಪತ್ರ ಸ್ವೀಕಾರ ಕೇಂದ್ರಗಳು. ಮಾ. 28 ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏ. 4 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಏ. 5 ರಂದು ನಾಮಪತ್ರ ಪರಿಶೀಲನೆ, ಏ. 8 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಏ.26 ರಂದು ಮತದಾನ, ಜೂ. 4 ರಂದು ಮತ ಎಣಿಕೆ, ಜೂ. 6 ರಂದು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 762558 ಪುರುಷರು, 810362 ಮಹಿಳೆಯರು ಸೇರಿದಂತೆ ಒಟ್ಟು 1572958 ಮತದಾರರು ಇದ್ದಾರೆ. 1842 ಮತಗಟ್ಟೆಗಳಿವೆ ಎಂದ ಅವರು, ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 207134 ಮತದಾರರು ಇದ್ದು, ಈ ಒಂದು ಕ್ಷೇತ್ರದಲ್ಲಿ 253 ಮತಗಟ್ಟೆಗಳಿವೆ ಎಂದರು.17959 ವಿಕಲಚೇತನರು, 21521 ಹಿರಿಯ ನಾಗರಿಕರು, 29906 ಯುವ ಮತದಾರರು ಇದ್ದಾರೆ. ಕಡೂರು ಕ್ಷೇತ್ರದಲ್ಲಿ 2836 ವಿಕಲಚೇತನರು, 3214 ಹಿರಿಯ ನಾಗರೀಕರು, 3201 ಯುವ ಮತದಾರರು ಇದ್ದಾರೆ ಎಂದ ಅವರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 1842 ಹಾಗೂ ಕಡೂರು ಕ್ಷೇತ್ರದಲ್ಲಿ 253 ಮತಗಟ್ಟೆಗಳಿವೆ. ಚಿಕ್ಕಮಗಳೂರು ಜಿಲ್ಲೆ ಯೊಂದರಲ್ಲೇ 1229 ಮತಗಟ್ಟೆಗಳಿವೆ. ಚುನಾವಣೆಯಲ್ಲಿ ಯಾವುದೇ ರೀತಿಯಲ್ಲೂ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಹೊರ ಜಿಲ್ಲೆಯಿಂದ ಬರುವ ಹಾಗೂ ಜಿಲ್ಲೆಯ ಒಳಗಿನ ವಾಹನಗಳು ಸೇರಿದಂತೆ ಸೂಕ್ತ ಪರಿಶೀಲನೆಗೆ ಅನುವಾಗುವಂತೆ ಒಟ್ಟು 22 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಹೇಳಿದರು.ಉಡುಪಿ ಹಾಗೂ ಹಾಸನ ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಯಾಗಿದ್ದು, ಶೃಂಗೇರಿ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಎಸ್‌.ಜಿ. ಕೊರವರ, ಮೂಡಿಗೆರೆಗೆ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜಿತ್‌ಕುಮಾರ್‌, ಚಿಕ್ಕಮಗಳೂರು ಕ್ಷೇತ್ರಕ್ಕೆ ಜಿಪಂನ ಉಪ ಕಾರ್ಯದರ್ಶಿ (1) ಜಯಲಕ್ಷ್ಮಮ್ಮ, ತರೀಕೆರೆಗೆ ಉಪ ವಿಭಾಗಾಧಿಕಾರಿ ಡಾ. ಕೆ.ಜೆ. ಕಾಂತರಾಜ್‌, ಕಡೂರು ಕ್ಷೇತ್ರಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.ಜಿಲ್ಲೆಯಲ್ಲಿ 19 ಮಂದಿ ಜಿಲ್ಲಾ ನೋಡಲ್‌ ಅಧಿಕಾರಿಗಳು ಹಾಗೂ ಎಫ್‌ಎಸ್‌ಟಿ, ಎಸ್‌ಎಸ್‌ಟಿ, ಎಸ್‌ಓ, ವಿವಿಟಿ, ವಿಎಸ್‌ಟಿ, ಎಂಸಿಸಿ, ಎಇಓ ಹಾಗೂ ಎಟಿ ತಂಡಗಳನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.80 ವರ್ಷ ಮೇಲ್ಪಟ್ಟವರು ಮನೆಯಲ್ಲಿಯೇ ಮತದಾನ ಮಾಡಲು ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ನೀಡಲಾಗಿತ್ತು. ಆದರೂ ಹಿರಿಯ ನಾಗರಿಕರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದ್ದರು. ಈ ಬಾರಿ 85 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೆ ಮತದಾನಕ್ಕೆಅವಕಾಶ ನೀಡಲಾಗಿದೆ ಎಂದರು.ಶೃಂಗೇರಿ ಕ್ಷೇತ್ರದಲ್ಲಿ 4, ಮೂಡಿಗೆರೆ ಕ್ಷೇತ್ರದಲ್ಲಿ 5, ಚಿಕ್ಕಮಗಳೂರು ಕ್ಷೇತ್ರದಲ್ಲಿ 3, ತರೀಕೆರೆಯಲ್ಲಿ 4, ಕಡೂರು ಕ್ಷೇತ್ರದಲ್ಲಿ 6 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದರು.--- ಬಾಕ್ಸ್‌--ಸೂಕ್ತ ಬಂದೋಬಸ್ತ್‌: ಡಾ. ವಿಕ್ರಂ ಅಮಟೆಜಿಲ್ಲೆಯಲ್ಲಿ 1229 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈಗಾಗಲೇ 42 ಸೂಕ್ಷ್ಮ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.ಜಿಲ್ಲೆಯಲ್ಲಿ ಸುಮಾರು 10 ಸಾವಿರ ಪರವಾನಗಿ ಹೊಂದಿರುವ ಬಂದೂಕುಗಳು ಇವೆ. ಅವುಗಳನ್ನು ಪೊಲೀಸ್‌ ಠಾಣೆಗಳಲ್ಲಿ ಡಿಪಾಜಿಟ್ ಮಾಡಬೇಕು. ರೈಫಲ್‌ ಅಸೋಸಿಯೇಷನ್‌, ಬ್ಯಾಂಕ್‌, ಚಿನ್ನಾಭರಣ ಅಂಗಡಿಗಳು ಹಾಗೂ ಸ್ವಯಂ ರಕ್ಷಣೆಗೆ ಪಡೆದಿರುವ ಬಂದೂಕುಗಳಿಗೆ ವಿನಾಯ್ತಿ ನೀಡಲಾಗುವುದು. ಈ ಸಂಬಂಧ ಅರ್ಜಿ ಸಲ್ಲಿಸಬೇಕು ಎಂದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಶೇ. 67ಕ್ಕಿಂತ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಮಾದರಿ ನೀತಿ ಸಂಹಿತೆ ಉದ್ದೇಶವಾಗಿದೆ ಎಂದು ಹೇಳಿದರು. 17 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಸಬಾಂಗಣದಲ್ಲಿ ಭಾನುವಾರ ಡಿಸಿ ಮೀನಾ ನಾಗರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಸ್ಪಿ ಡಾ. ವಿಕ್ರಂ ಅಮಟೆ, ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.