ಸಾರಾಂಶ
ಮಯೂರ್ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಉಪನಗರ ರೈಲ್ವೆ ಯೋಜನೆಯಲ್ಲಿ ಆರಂಭಿಕ ಹಂತದಲ್ಲಿ ಮೂರು ಬೋಗಿಯ ರೈಲು ಓಡಿಸಲು ನಿರ್ಧರಿಸಿರುವ ಕೆ-ರೈಡ್, ಕಾಲಕ್ರಮೇಣ ಹೆಚ್ಚಿನ ಬೋಗಿ ಅಳವಡಿಕೆಗೂ ಅವಕಾಶ ಇಟ್ಟುಕೊಳ್ಳಲು ಯೋಜಿಸಿದೆ.
ಮೊದಲ ಹಂತದ ಒಟ್ಟಾರೆ 148 ಕಿಮೀ ಉಪನಗರ ರೈಲ್ವೆಯಲ್ಲಿ ಸುಮಾರು 2.50 ಕಿಮೀ ಅಂತರದಲ್ಲಿ ಒಂದು ನಿಲ್ದಾಣ ತಲೆ ಎತ್ತಲಿದೆ. ನಿಲ್ದಾಣಗಳು 6 ಅಥವಾ 9 ಬೋಗಿ ನಿಲುಗಡೆಗೆ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಮಾಣ ಆಗಲಿದೆ.
ಮೂರು ಬೋಗಿ ರೈಲು ಸಂಚಾರದಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲ ಆಗಲಿದೆ. ಜೊತೆಗೆ ನಿರ್ವಹಣೆಯೂ ಸುಲಲಿತ. ಎಲ್ಲ ನಿಲ್ದಾಣಗಳು ಆರಂಭದಲ್ಲೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ಹೊಂದಿರಲಿವೆ ಎಂದು ಕೆ-ರೈಡ್ ಅಧಿಕಾರಿಗಳು ಹೇಳಿದ್ದಾರೆ.
ಸಿಬಿಟಿಸಿ ಸಿಗ್ನಲಿಂಗ್: ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ರೈಲಿನಂತೆ ಉಪನಗರ ರೈಲು ಸಿಬಿಟಿಸಿ (ಕಮ್ಯೂನಿಕೇಶನ್ ಬೇಸ್ಡ್ ಸಿಗ್ನಲಿಂಗ್ ಸಿಸ್ಟಂ) ಆಧಾರದಲ್ಲಿ ಸಂಚರಿಸಲಿವೆ. ಅಂದರೆ ರೈಲಿನ ರಿಯಲ್ ಟೈಂ ಮಾಹಿತಿ ಕಂಟ್ರೋಲ್ ಸೆಂಟರ್‌ಗೆ ತಲುಪಲಿದೆ.
ಸುಮಾರು 200 ಮೀ. ಅಂತರದಲ್ಲಿ ಟ್ರ್ಯಾಕ್‌ನಲ್ಲಿ ಅಳವಡಿಕೆ ಆಗುವ ಸಿಬಿಟಿಸಿ ಡಿವೈಸ್ ರೈಲಿನ ವೇಗ, ತೊಂದರೆಗಳನ್ನು ಕೇಂದ್ರಕ್ಕೆ ತಿಳಿಸಬಲ್ಲದು. ಈ ಮೂಲಕ 90 ಸೆಕೆಂಡ್ ಅಂತರದಲ್ಲಿ ಎರಡು ರೈಲುಗಳನ್ನು ನಿರ್ವಹಣೆ ಮಾಡಬಹುದು.
ಆದರೆ ಕೆಲ ತಾಂತ್ರಿಕ ಕಾರಣಕ್ಕೆ ಸಬ್‌ಅರ್ಬನ್ ರೈಲಿಗೆ ಡ್ರೈವರ್‌ಲೆಸ್ ರೈಲು ಬೇಡವೆಂದು ಸದ್ಯಕ್ಕೆ ನಿರ್ಧರಿಸಿದ್ದೇವೆ ಎಂದು ಕೆ-ರೈಡ್ ತಾಂತ್ರಿಕ ಪರಿಣಿತರು ತಿಳಿಸಿದ್ದಾರೆ.
ಬೋಗಿ ಹೇಗಿರಲಿದೆ: ಉಪನಗರ ರೈಲಿನ ಮೂರು ಬೋಗಿಯಲ್ಲಿ ಏಕಕಾಲಕ್ಕೆ 300 ಜನ ಪ್ರಯಾಣಿಸಬಹುದು. ಇದರಲ್ಲಿ ಶೇ. 75ರಷ್ಟು ಜನ ಆಸನಗಳಲ್ಲೆ ಕುಳಿತು ಹೋಗುವಂತೆ ವ್ಯವಸ್ಥೆ ಇರಲಿದೆ.
ಈ ಬೋಗಿಗಳು ಮೆಟ್ರೋಗಿಂತಲೂ ಹೆಚ್ಚು ಸ್ಥಳಾವಕಾಶ ಹೊಂದಿರಲಿದೆ. ನಿಂತು ಪ್ರಯಾಣಿಸುವವರಿಗೂ ಆರಾಮದಾಯಕ ಎನಿಸುವ ವ್ಯವಸ್ಥೆ ಇರಲಿದೆ. ಎಸಿ ಬೋಗಿಗಳನ್ನು ಹೊಂದಿರುತ್ತದೆ.
ಮಹಿಳೆಯರಿಗೆ ಮೀಸಲು: ಮೆಟ್ರೋದಂತೆ ಇಕ್ಕೆಲದ ಬೆಂಚ್ ಮಾದರಿ ಬದಲು ಪ್ರಯಾಣಿಕರ ಅನುಕೂಲತೆಗೆ ಬಸ್ ರೀತಿಯ ಸೀಟನ್ನಿಡಲು ಯೋಜಿಸಲಾಗಿದೆ. ಇದಿನ್ನೂ ಪ್ರಸ್ತಾವನೆ ಹಂತದಲ್ಲಿದ್ದು ಅನುಮೋದನೆ ಸಿಗಬೇಕಿದೆ.
ಮೆಟ್ರೋದಂತೆ ರೈಲಿನ ಮಾರ್ಗಸೂಚಿ ಮಾಹಿತಿ ಸ್ಕ್ರೀನ್‌ಗಳಲ್ಲಿ ಬಿತ್ತರವಾಗಲಿದೆ. ಜೊತೆಗೆ ಅರ್ಧ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಕೆ-ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.
18 ತಿಂಗಳಲ್ಲಿ ಬೋಗಿ: ಉಪನಗರ ರೈಲ್ವೇ ಯೋಜನೆ ರೋಲಿಂಗ್ ಸ್ಟಾಕ್‌ಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕರೆದಿದ್ದ ಟೆಂಡರ್ (ಆರ್‌ಎಫ್‌ಕ್ಯೂ) ತಾಂತ್ರಿಕ ಅರ್ಹತೆ ಬಿಡ್‌ನಲ್ಲಿ ಭಾರತ್ ಅರ್ಥ್ ಮೂವರ್ಸ್ ಲಿ., ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ., ಹಾಗೂ ಸಿಎಎಫ್ ಸ್ಥಾನ ಪಡೆದು ಹಣಕಾಸು ಬಿಡ್‌ಗೆ (ಆರ್‌ಎಫ್‌ಪಿ) ಅರ್ಹತೆ ಪಡೆದಿವೆ.
ಬಹುತೇಕ ಮೇ 27ರ ಸುಮಾರಿಗೆ ಕಂಪನಿಗಳು ಆರ್‌ಎಫ್‌ಪಿ ( ಪ್ರಸ್ತಾವನೆ ) ಸಲ್ಲಿಸಲಿದ್ದು ಟೆಂಡರ್ ಆಗಲಿದೆ. ಗುತ್ತಿಗೆ ಪಡೆದ ಕಂಪನಿ ಸಾಮಾನ್ಯವಾಗಿ ಮುಂದಿನ 18 ತಿಂಗಳಲ್ಲಿ ಬೋಗಿಗಳನ್ನು ಒದಗಿಸಬೇಕಿದೆ ಎಂದು ಕೆ-ರೈಡ್ ಮೂಲಗಳು ತಿಳಿಸಿವೆ.