ಸಾರಾಂಶ
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಲೋಕಸಭೆ ಚುನಾವಣೆ ವೇಳೆ ಶಾಂತಿ, ಸುವ್ಯವಸ್ಥೆ ಕಾಪಾಡುವ ಸದುದ್ದೇಶದಿಂದ ಹಾಗೂ ನೀತಿ ಸಂಹಿತೆ ಉಲ್ಲಂಘನೆ ತಡೆಯಲು ನಿಯೋಜನೆಗೊಂಡಿದ್ದ ಗೃಹರಕ್ಷಕರಿಗೆ ಈ ವರೆಗೂ ಅಬಕಾರಿ ಇಲಾಖೆಯಿಂದ ನೀಡಬೇಕಾಗಿದ್ದ ವೇತನ ಪಾವತಿಯಾಗಿಲ್ಲ. ತಮಗೆ ನೀಡಬೇಕಿದ್ದ ಅತ್ಯಲ್ಪ ವೇತನ ನೀಡದ ಸರ್ಕಾರದ ವಿರುದ್ಧ ಗೃಹರಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ ಅಂಗವಾಗಿ ಮಾರ್ಚ್ 16ರಿಂದ ಮೇ 7ರ ವರೆಗೆ ಜಿಲ್ಲೆಯ ಗಡಿಭಾಗಗಳಲ್ಲಿ ಹಾಕಲಾಗಿದ್ದ ಚೆಕ್ ಪೋಸ್ಟ್ ಮತ್ತಿತರ ಕಡೆ ಪೊಲೀಸರೊಂದಿಗೆ ಕಾರ್ಯ ನಿರ್ವಹಿಸಲು, ಅಬಕಾರಿ ಅಕ್ರಮ ತಡೆಯಲು ರಾಜ್ಯಾದ್ಯಂತ ಗೃಹರಕ್ಷಕರನ್ನು ಕೆಲಸಕ್ಕೆ ನಿಯೋಜನೆ ಮಾಡಲಾಗಿತ್ತು.ಬಿಸಿಲು, ಮಳೆ ಲೆಕ್ಕಿಸದೇ ನಿತ್ಯವೂ 8-10 ಗಂಟೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಗೃಹರಕ್ಷಕರಿಗೆ ಅಬಕಾರಿ ಇಲಾಖೆಯಿಂದ ಬರಬೇಕಿದ್ದ ವೇತನ ಈ ವರೆಗೂ ಬಂದಿಲ್ಲ. ಗೃಹರಕ್ಷಕರು ನಿತ್ಯವೂ ಕಚೇರಿಗೆ ಅಲೆಯುವಂತಾಗಿದೆ.
1545 ಗೃಹರಕ್ಷಕರು:ಲೋಕಸಭಾ ಚುನಾವಣಾ ನಿಮಿತ್ತ ರಾಜ್ಯದ ಅಬಕಾರಿ ಇಲಾಖೆಗೆ ಪಾವತಿ ಆಧಾರದ ಮೇಲೆ ಮಾರ್ಚ್ 16ರಿಂದ ಚುನಾವಣೆ ನೀತಿ ಸಂಹಿತೆ ಮುಕ್ತಾಯಗೊಳ್ಳುವ ವರೆಗೆ ರಾಜ್ಯಾದ್ಯಂತ 1,545 ಗೃಹರಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿತ್ತು. ಧಾರವಾಡ ಜಿಲ್ಲೆಯಲ್ಲೂ 30 ಗೃಹರಕ್ಷಕರನ್ನು ಗಡಿಭಾಗದಲ್ಲಿ ತೆರೆಯಲಾಗಿದ್ದ ಚೆಕ್‌ಪೋಸ್ಟ್‌ಗಳಲ್ಲಿ ಕೆಲಸ ನಿರ್ವಹಿಸಲು ನೇಮಕ ಮಾಡಲಾಗಿತ್ತು.
3 ತಿಂಗಳಾದರೂ ವೇತನವಿಲ್ಲ:ಚುನಾವಣಾ ಕಾರ್ಯ ಪೂರ್ಣಗೊಂಡು 3 ತಿಂಗಳು ಕಳೆದರೂ ವೇತನ ನೀಡಿಲ್ಲ. ವೇತನ ಬಿಡುಗಡೆಗೆ ಒತ್ತಾಯಿಸಿ ಗೃಹರಕ್ಷಕ ದಳ, ಅಬಕಾರಿ ಇಲಾಖೆಯಿಂದಲೂ ಹಲವಾರು ಬಾರಿ ಮೌಖಿಕವಾಗಿ ಮನವಿ ಮಾಡಿದರೂ ಯಾವುದೇ ಸ್ಪಂದನೆಯಿಲ್ಲ. ಒಂದು ವಾರದ ಹಿಂದೆ ಗೃಹರಕ್ಷಕದಳದ ಕಚೇರಿಯಿಂದ ಅಬಕಾರಿ ಕಚೇರಿಗೆ, ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಜಿಲ್ಲೆಯಲ್ಲಿ 778 ಗೃಹರಕ್ಷಕರು:ಜಿಲ್ಲೆಯಲ್ಲಿ 778ಕ್ಕೂ ಹೆಚ್ಚು ಗೃಹ ರಕ್ಷಕರಿದ್ದಾರೆ. ಇದರಲ್ಲಿ 448 ಮಂದಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೃಹ ರಕ್ಷಕರು ಪೊಲೀಸ್ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದರೆ ಅವರಿಗೆ ದಿನಕ್ಕೆ ₹800 ನೀಡಲಾಗುತ್ತದೆ. ಇತರೆ ಇಲಾಖೆಗಳಡಿ ಕೆಲಸ ನಿರ್ವಹಿಸಿದರೆ ₹500 ನೀಡಲಾಗುತ್ತದೆ.
ವೇತನವೂ ಕಡಿಮೆ:ಪೊಲೀಸ್ ಇಲಾಖೆ ಮತ್ತು ಇತರ ಇಲಾಖೆಗಳಾದ ಆರ್‌ಟಿಒ, ಅಬಕಾರಿ ಇಲಾಖೆಯಲ್ಲಿ ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸುತ್ತಾ ಬರಲಾಗುತ್ತಿದೆ. ಆದರೆ, ಹಲವು ಬಾರಿ ಇಂತಹ ತುರ್ತು ಸಂದರ್ಭಗಳಲ್ಲಿ ನಿಯೋಜನೆಯಾಗುವ ಗೃಹರಕ್ಷಕರಿಗೆ ವೇತನ ನೀಡುವುದೇ ಇಲ್ಲ. ಅಲ್ಲದೇ ಯಾವುದೇ ಸೇವಾ ಭದ್ರತೆ ಇಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಪ್ರತಿ ಕರ್ತವ್ಯಕ್ಕೆ ₹500 ರಿಂದ ₹700ರ ವರೆಗೆ ಅತ್ಯಲ್ಪ ವೇತನ ನೀಡಲಾಗುತ್ತದೆ. ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಗೃಹ ರಕ್ಷಕರಿಗೆ ನೀಡಬೇಕಾದ ಹಣ ಬಿಡುಗಡೆಗೊಳಿಸುವಂತೆ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಎಲ್ಲ ಜಿಲ್ಲೆಗಳೂ ಇದೇ ಸಮಸ್ಯೆ ಎದುರಿಸುತ್ತಿವೆ. ಸರ್ಕಾರದಿಂದ ಈ ವರೆಗೂ ಅನುದಾನ ನೀಡಿಲ್ಲ ಎಂದು ಅಬಕಾರಿ ಇಲಾಖೆಯ ಉಪಆಯುಕ್ತ ಪ್ರಶಾಂತಕುಮಾರ ಹೇಳಿದರು.