ಹಾಸನ ಜಿಲ್ಲೆಯಲ್ಲಿ ಮತದಾನ ಬಹುತೇಕ ಶಾಂತಿಯುತ, ಕೆಲವೆಡೆ ಗಲಾಟೆ

| Published : Apr 27 2024, 01:20 AM IST

ಹಾಸನ ಜಿಲ್ಲೆಯಲ್ಲಿ ಮತದಾನ ಬಹುತೇಕ ಶಾಂತಿಯುತ, ಕೆಲವೆಡೆ ಗಲಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯು ಬಹುತೇಕ ಶಾಂತಿಯುತವಾಗಿತ್ತು. ಬೆಳಿಗ್ಗೆ ಬಿರುಸಿನಿಂದ ಆರಂಭವಾದ ಮತದಾನ ಸಂಜೆ ಹೊತ್ತಿಗೆ ಮುಕ್ತಾಯವಾಯಿತು. ಸಂಜೆಯಾದರೂ ಮತದಾರರು ಮತಗಟ್ಟೆಗಳತ್ತ ದಾಂಗುಡಿ ಇಡುತ್ತಿದ್ದರು. ಕೆಲವೆಡೆ ಮತಯಂತ್ರ ಕೈಕೊಟ್ಟಿದ್ದವು.

ಸಂತೆಪೇಟೆಯಲ್ಲಿ ೨ ಬಾರಿ ಕೆಟ್ಟ ಮತಯಂತ್ರ । ಬಿಸಿಲಿನ ತಾಪ ತಡೆಯಲಾರದೆ ವಾಪಸ್ ತೆರಳಿದ ಮತದಾರರು । ಗಣ್ಯರ ಮತದಾನ

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯು ಬಹುತೇಕ ಶಾಂತಿಯುತವಾಗಿತ್ತು. ಬೆಳಿಗ್ಗೆ ಬಿರುಸಿನಿಂದ ಆರಂಭವಾದ ಮತದಾನ ಸಂಜೆ ಹೊತ್ತಿಗೆ ಮುಕ್ತಾಯವಾಯಿತು. ಸಂಜೆಯಾದರೂ ಮತದಾರರು ಮತಗಟ್ಟೆಗಳತ್ತ ದಾಂಗುಡಿ ಇಡುತ್ತಿದ್ದರು. ಕೆಲವೆಡೆ ಮತಯಂತ್ರ ಕೈಕೊಟ್ಟಿದ್ದವು.

ಲೋಕಸಭಾ ಚುನಾವಣೆ ಶುಕ್ರವಾರ ಶಾಂತಿಯುತವಾಗಿ ನಡೆಯಲೆಂದು ಪೂರ್ಣ ತಯಾರಿ ಮಾಡಿಕೊಂಡಿದ್ದರೆ ನಗರದ ಸಂತೆಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ಮತಗಟ್ಟೆ ಸಂಖ್ಯೆ ೧೮೯ರಲ್ಲಿ ಎರಡು ಬಾರಿ ಮತಯಂತ್ರ ಕೆಟ್ಟು ನಿಂತಿದೆ. ಇನ್ನು ಚಿಪ್ಪಿನಕಟ್ಟೆ ಭಾಗದ ಮತಯಂತ್ರ ಕೂಡ ಇದೇ ಸಮಸ್ಯೆ ಆಗಿ ಮತದಾರರು ಆಕ್ರೋಶ ವ್ಯಕ್ತಪಡಿಸಿ ವಾಪಸ್ ಹೋಗಿದ್ದಾರೆ.

ಏ.೨೬ರ ಶುಕ್ರವಾರ ಲೋಕಸಭಾ ಚುನಾವಣೆಯ ಮತದಾನ ಬೆಳಿಗ್ಗೆ ೭ ಗಂಟೆಗೆ ಪ್ರಾರಂಭವಾಗಿದ್ದು, ನಗರದ ಸಂತೇಪೇಟೆ, ವಲ್ಲಭಾಯಿ ರಸ್ತೆ ಬಳಿ ಇರುವ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ೧೮೯ ಮತಗಟ್ಟೆ ಸಂಖ್ಯೆಯಲ್ಲಿ ೭ ಗಂಟೆಯಲ್ಲಿ ಮತಯಂತ್ರ ಕೆಟ್ಟು ನಿಂತಿದೆ. ಒಂದು ಗಂಟೆಗಳ ಕಾಲ ಸರಿಯಾಗಲಿಲ್ಲ. ನಂತರ ಸರಿ ಮಾಡಲಾಯಿತು. ಇದಾದ ನಂತರ ಮಧ್ಯಾಹ್ನ ಸುಮಾರು ೨ ಗಂಟೆಯ ಸಮಯದಲ್ಲಿ ಮತ್ತೆ ಮತಯಂತ್ರ ಕೈಕೊಟ್ಟಿದೆ. ಮತ್ತೊಮ್ಮೆ ಅದನ್ನು ಸರಿಪಡಿಸಲಾಯಿತು. ಬೆಳಗಿನಿಂದ ಎರಡು ಬಾರಿ ಒಂದೇ ಮತಗಟ್ಟೆಯಲ್ಲಿ ಮತಯಂತ್ರ ಕೈಕೊಟ್ಟಿದ್ದು, ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಮತಯಂತ್ರ ಕೆಲಸ ಮಾಡಲಿಲ್ಲ.

ಬಿಸಿಲು ಇರುವುದರಿಂದ ನೆರಳಿನಲ್ಲಿ ನಿಲ್ಲಲು ಹೋದರೆ ಅರೆ ಸೇನಾ ಪಡೆ ಅವರನ್ನು ಹೊರಗೆ ತಳ್ಳಿದರು. ಬಿಸಿಲು ಇದೆ ನೆರಳಿನಲ್ಲಿ ಇರಲು ಅವಕಾಶ ಕೊಡಿ ಎಂದು ಕೇಳಿದರೂ ಅರೆ ಸೇನಾ ಪಡೆಯವರು ಕರುಣೆ ತೋರದೆ ಅಲ್ಲಿಂದ ಕಳುಹಿಸಿದರು. ಸರದಿ ಸಾಲಿನಲ್ಲಿ ನಿಂತ ಅನೇಕರು ಬಿಸಿಲಿನ ತಾಪ ತಾಳಲಾರದೆ ಮನೆಗೆ ವಾಪಸ್ ಹೋಗಬೇಕಾಯಿತು. ಎರಡು ಗಂಟೆಗಳ ಕಾಲ ಯಾವ ಮತದಾನ ಆಗದೆ ಇರುವುದರಿಂದ ಮತದಾನ ಮಾಡಲು ನಿಗದಿ ಸಮಯಕ್ಕಿಂತ ಹೆಚ್ಚಿನ ಸಮಯ ನೀಡುವಂತೆ ಸರದಿ ಸಾಲಿನಲ್ಲಿದ್ದವರು ಮನವಿ ಮಾಡಿದರು.

ಅಬ್ದುಲ್ ಮುಜಾಮಿಲ್ ಮಾಧ್ಯಮದೊಂದಿಗೆ ಮಾತನಾಡಿ, ‘೨೮ನೇ ವಾರ್ಡ್ ಬೂತ್ ಸಂಖ್ಯೆ ೧೮೯ರಲ್ಲಿ ಬೆಳಿಗ್ಗೆ ೭ ರಿಂದ ೮.೩೦ರ ವರೆಗೂ ಮತಯಂತ್ರ ಸಮಸ್ಯೆ ಆಗಿದ್ದು, ಇದನ್ನು ಸರಿಪಡಿಸಲು ಅಧಿಕಾರಿಗಳು ಕೂಡ ಬೇಗ ಬರಲಿಲ್ಲ. ನಂತರ ಬಂದು ದುರಸ್ತಿಪಡಿಸಿದರು. ಈಗ ಮಧ್ಯಾಹ್ನ ಮತ್ತೆ ಕೆಟ್ಟು ನಿಂತಿದೆ. ಈ ಬಗ್ಗೆ ಕರೆ ಮಾಡಿದರೂ ಯಾರು ಕೂಡ ಸ್ಪಂದಿಸುತ್ತಿಲ್ಲ. ಜನರು ಎಲ್ಲಾ ವಾಪಸ್ ಹೋಗುತ್ತಿದ್ದಾರೆ. ಬದಲಿ ವ್ಯವಸ್ಥೆ ತಕ್ಷಣ ಮಾಡಬೇಕು. ೩ರ ವರೆಗೂ ಶೇಕಡ ಶೇ ೪೩ ಮತದಾನವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸರದಿ ಸಾಲಿನಲ್ಲಿ ನಿಂತವರು ಬಿಸಿಲಿನ ತಾಪ ತಾಳಲಾರದೆ ವಾಪಸ್ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮತದಾನ ನಮ್ಮ ಹಕ್ಕು ಎಂದು ಹೇಳುತ್ತಾರೆ. ಆದರೆ ಅಧಿಕಾರಿಗಳು ಈ ರೀತಿ ಮಾಡಿದರೆ ಸಾಮಾನ್ಯ ಜನರು ಏನು ಮಾಡಬೇಕು ಎಂದು ಪ್ರಶ್ನಿಸಿದರು. ನಿಗದಿ ಸಮಯಕ್ಕಿಂತ ಒಂದು ಗಟೆಗಳ ಕಾಲ ಸಮಯ ನೀಡಬೇಕು. ಇಲ್ಲಿರುವ ಸೇನಾ ಪಡೆಯವರಿಗೆ ಕನ್ನಡ ಬರಲ್ಲ. ಹಿಂದಿ ಮಾತನಾಡುತ್ತಾರೆ. ನೆರಳಿಗಾಗಿ ಮೇಲೆ ಹೋದರೆ ದಬ್ಬಾಳಿಕೆ ಮಾಡಿ ಬಿಸಿಲಿಗೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಚಿಪ್ಪಿನಕಟ್ಟೆಯಲ್ಲಿರುವ ಎರಡು ಬೂತ್‌ಗಳಲ್ಲೂ ಇದೇ ಸಮಸ್ಯೆ. ಮತಯಂತ್ರ ನಿಂತು ಅನೇಕ ಸಮಯದ ನಂತರ ಸರಿಪಡಿಸಲಾಗಿದೆ. ಮತಯಂತ್ರದ ತೊಂದರೆ ಎಲ್ಲೆಲ್ಲಿ ಆಗಿದೆ ಆ ಭಾಗದಲ್ಲಿ ಹೆಚ್ಚಿನ ಸಮಯ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಮತದಾರರ ಆಗ್ರಹಿಸಿದರು.

ವಲ್ಲಭಭಾಯಿ ರಸ್ತೆ ಬಳಿ ಇರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ೧೮೯ ಮತಗಟ್ಟೆ ಸಂಖ್ಯೆಯಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ಮಾಡಲು ಬಂದವರು ಕಾದು ನಿಲ್ಲಬೇಕಾಯಿತು. ಶಾಸಕ ಸ್ವರೂಪ್ ದಂಪತಿ ಮತದಾನ

ಕನ್ನಡಪ್ರಭ ವಾರ್ತೆ ಹಾಸನ

ಹೇಮಾವತಿ ನಗರದಲ್ಲಿರುವ ರಾಯಲ್ ಅಪೋಲೊ ಶಾಲೆಯಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಮತ್ತು ಪತ್ನಿ ಜೊತೆ ಬಂದು ಮತದಾನ ಮಾಡಿದರು. ಪತ್ನಿ ಹೆಸರನ್ನು ಮತದಾರರ ಪಟ್ಟಿಯಲ್ಲಿ ಹುಡುಕಲು ಪರದಾಡಿದ ಬಗ್ಗೆ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.

ಮತದಾನ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿ, ‘ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಿಗ್ಗೆ ೭ ಗಂಟೆಗೆ ತನ್ನ ಪತ್ನಿ ಜೊತೆ ಬಂದು ಮತದಾನ ಮಾಡಲಾಗಿದೆ. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಜನರು ಒಲವು ತೋರಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮ್ಮ ಹಕ್ಕು. ಯಾರು ಕೂಡ ಮತದಾನ ಮಾಡದೇ ಹೊರಗೆ ಉಳಿಯಬಾರದು’ ಎಂದು ಮನವಿ ಮಾಡಿದರು.

ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ನೂರಕ್ಕೆ ನೂರು ಭಾಗ ಗೆಲುವು ಪಡೆಯುತ್ತಾ. ಇನ್ನು ರಾಜ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಮೂರು ಕಡೆ ಸ್ಪರ್ಧೆ ಮಾಡಲಾಗಿದ್ದು, ರಾಜ್ಯದಲ್ಲಿ ೨೮ ಸ್ಥಾನಕ್ಕೆ ೨೮ ಕೂಡ ಗೆಲ್ಲುತ್ತಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಅಭಿವೃದ್ಧಿ ಗೆಲುವಿಗೆ ಪೂರಕವಾಗಿದೆ ಎಂದು ಹೇಳಿದರು.

‘ಹಾಸನ ಕ್ಷೇತ್ರದಲ್ಲಿ ೨೦ ಸಾವಿರ ಅಂತರದಲ್ಲಿ ಹೆಚ್ಚಿನ ಮತಗಳು ಸಿಗಲಿದೆ. ನನ್ನ ಕ್ಷೇತ್ರದಲ್ಲಿ ರಾಯಲ್ ಅಪೋಲೊ ಶಾಲೆ ಆವರಣದಲ್ಲಿ ನಾನು ಮತ್ತು ಪತ್ನಿ ಮತ ಹಾಕಲು ಬಂದಾಗ ಇಲ್ಲಿರುವ ನಾಲ್ಕು ಮತಗಟ್ಟೆಗಳಲ್ಲಿ ೮ ಗಂಟೆ ಆದರೂ ಇನ್ನೂ ಕೂಡ ಇಬ್ಬರೂ ಬಿಎಲಒಗಳು ಕರ್ತವ್ಯಕ್ಕೆ ಹಾಜರಾಗಿಲ್ಲ. ಈ ಕಾರಣದಿಂದಲೇ ಸ್ವಲ್ಪ ಗೊಂದಲದ ವಾತಾವರಣ ಉಂಟಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೃದ್ಧರು ಬಂದಾಗಲೂ ಇದೇ ಪರಿಸ್ಥಿತಿ ಉಂಟಾಯಿತು. ಬಿಸಿಲಿನಲ್ಲಿ ನಿಂತಿದ್ದ ವೃದ್ಧರನ್ನು ಪೊಲೀಸರು ತಮ್ಮ ಚೇರ್‌ನಲ್ಲಿ ಕೂರಿಸಿದ ಪ್ರಸಂಗ ನಡೆಯಿತು.

ಮತದಾನ ಮಾಡಿ ಹೊರಬಂದ ಶಾಸಕ ಸ್ವರೂಪ್‌ ದಂಪತಿ. ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಮತದಾನ

ಕನ್ನಡಪ್ರಭ ವಾರ್ತೆ ಹಾಸನ

ಕಾಂಗ್ರೆಸ್ ಪಕ್ಷದ ಮುಖಂಡ ಬನವಾಸೆ ರಂಗಸ್ವಾಮಿ ಅವರು ವಿದ್ಯಾನಗರದಲ್ಲಿರುವ ನೇತಾಜಿ ಶಾಲೆಗೆ ಬಂದು ಸರದಿಯಂತೆ ನಿಯಮ ಪ್ರಕಾರ ಮತದಾನ ಮಾಡಿ ನಗೆ ಬೀರಿ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಪಡೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಧ್ಯಮದೊಂದಿಗೆ ಮಾತನಾಡಿ, ‘೨೦೨೪ರ ಲೋಕಸಭಾ ಚುನಾವಣೆಯಲ್ಲಿ ನಾನು ವಿಧಾನಸಭಾ ಪರಾಜಿತ ಅಭ್ಯರ್ಥಿಯಾಗಿ, ಒಬ್ಬ ಮತದಾರರಾಗಿ ನನ್ನ ಹಕ್ಕನ್ನು ಚಲಾಯಿಸಲಾಗಿದೆ. ಮತದಾರರು ಉತ್ಸಾಹದಿಂದ ಮತ ಹಾಕಲು ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೆಲಸ ನೋಡಿ ಎಲ್ಲರೂ ಮತ ಹಾಕಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು ೨ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಪಡೆಯಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲೆಯ ಎಲ್ಲಾ ತಾಲೂಕು ಉದ್ದಗಲಕ್ಕೂ ಕೂಡ ಕಾಂಗ್ರೆಸ್ ಪರವಾದ ಅಲೆ ಮತ್ತು ಧ್ವನಿ ಹೆಚ್ಚಾಗಿದೆ. ಎಲ್ಲರೂ ಕೂಡ ತಪ್ಪದೆ ಮಾತದಾನ ಮಾಡಿ, ಮುಂದಿನ ದಿನಗಳಲ್ಲಿ ಐಟಿಬಿಟಿ, ಎಜುಕೇಶನ್ ಆಗಿರಬಹುದು, ಎಲ್ಲವನ್ನೂ ಅಭ್ಯರ್ಥಿ ಮೂಲಕ ಸಂಘಟನೆ ಮಾಡಿ ಜನರಿಗೆ ಒಳ್ಳೆಯ ಕೆಲಸ ಮಾಡೋಣ. ಕಾಂಗ್ರೆಸ್ ಪಕ್ಷದಲ್ಲಿ ಕೊಟ್ಟಂತೆ ಜನಪ್ರಿಯ ಯೋಜನೆಗಳು, ಒಳ್ಳೆತನ ಸೇರಿ ನುಡಿದಂತೆ ನಡೆದ ಸರ್ಕಾರ ಆಗಿರುವುದರಿಂದ ಇವರಿಗೆ ಅವಕಾಶ ಉತ್ತಮವಾಗಿದೆ’ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ೧೮ ವರ್ಷದವರ ಮೊದಲ ಮತದಾನ

ಹಾಸನ: ಲೋಕಸಭಾ ಚುನಾವಣೆ ೨೦೨೪ ಶುಕ್ರವಾರ ನಡೆದಿದ್ದು, ೧೮ ವರ್ಷ ತುಂಬಿದ ಸುಪ್ರಿತ್, ಸ್ಫೂರ್ತಿ ಪ್ರಮೋದ್ ಇಬ್ಬರೂ ಮೊದಲ ಬಾರಿಗೆ ಮತದಾನ ಮಾಡಿ ಹರ್ಷದಿಂದ ಹೊರ ಬಂದು ಕೈಬೆರಳಿಗೆ ಹಚ್ಚಿದ ಶಾಹಿಯನ್ನು ಪ್ರದರ್ಶಿಸಿದರು.

ಮೊದಲ ಬಾರಿ ಮತದಾನ ಮಾಡಿದ ಸ್ಪೂರ್ತಿ ಪ್ರಮೋದ್ ಮಾತನಾಡಿ, ಮೊದಲ ಬಾರಿಗೆ ನಾನು ಮತದಾನ ಮಾಡುತ್ತಿರುವುದು ಮೊದಲ ಅನುಭವವಾಗಿದೆ. ನಮಗೆ ತುಂಬ ಸಂತೋಷವಾಯಿತು. ಯಾರು ಯಾರಿಗೆ ಮತದಾನ ಮಾಡುವ ಅರ್ಹತೆ ಇದೆ ಅವರು ತಪ್ಪದೆ ಮತದಾನ ಮಾಡಿ ತಮ್ಮ ಹಕ್ಕನು ಚಲಾಯಿಸಬೇಕು. ಒಳ್ಳೆಯ ನಾಯಕ ಅಧಿಕಾರಕ್ಕೆ ಬರಬೇಕಾದರೆ ಒಂದೊಂದು ಮತವು ಕೂಡ ಅತ್ಯಮೂಲ್ಯ ಎಂದು ಹೇಳಿದರು.

ಪ್ರೀತಂಗೌಡ ದಂಪತಿ ಮತದಾನ

ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಬಿ.ಜಿ.ಎಸ್. ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ ೯೦ಕ್ಕೆ ಆಗಮಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪ್ರೀತಂ ಜೆ. ಗೌಡ ಮತ್ತು ಪತ್ನಿ ಕಾವ್ಯ ಪ್ರೀತಂ ದಂಪತಿ ಮತದಾನ ಮಾಡಿ ಹೊರ ಬಂದ ಮೇಲೆ ಕೈಗೆ ಹಚ್ಚಿದ ಶಾಹಿ ಗುರುತನ್ನು ಪ್ರದರ್ಶಿಸಿ ನಗೆ ಬೀರಿದರು. ಹಾಸನದ ಎಂ.ಜಿ. ರಸ್ತೆ ಬಳಿ ಇರುವ ಬಿ.ಜಿ.ಎಸ್. ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ ೯೦ಕ್ಕೆ ಆಗಮಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪ್ರೀತಂ ಜೆ. ಗೌಡ ಮತ್ತು ಪತ್ನಿ ಕಾವ್ಯ ಪ್ರೀತಂ ದಂಪತಿ ಮತದಾನ ಮಾಡಿದರು. ಈ ವೇಳೆ ಅನೇಕ ಬಿಜೆಪಿ ನಾಯಕರು ಸಹಕಾರ ನೀಡಿದರು.