ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ವೈದ್ಯರಿಗೆ ಲೋಕಾಯಕ್ತ ತರಾಟೆ

| Published : Jul 30 2024, 01:31 AM IST / Updated: Jul 30 2024, 12:50 PM IST

ಬೆಂಗಳೂರು : ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ವೈದ್ಯರಿಗೆ ಲೋಕಾಯಕ್ತ ತರಾಟೆ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಸೇರಿದಂತೆ ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು.

 ಬೆಂಗಳೂರು :  ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಸೇರಿದಂತೆ ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯ ಹಿರಿಯ ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ನಡೆಯಿತು.

ಸೋಮವಾರ ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಹಾಗೂ ಉಪ ಲೋಕಾಯುಕ್ತರಾದ ನ್ಯಾ.ಫಣೀಂದ್ರ ನ್ಯಾ.ವೀರಪ್ಪ ಭೇಟಿ ನೀಡಿದರು. ವಿಕ್ಟೋರಿಯಾ ಆಸ್ಪತ್ರೆಯ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಲೋಕಾಯುಕ್ತರು ರೋಗಿಗಳ ಸಮಸ್ಯೆಯನ್ನು ಆಲಿಸಿದರು.

ಪರಿಶೀಲನೆ ವೇಳೆ ರೋಗಿಗಳಿಗೆ ರೋಗಗಳಿಗೆ ತಕ್ಕಂತೆ ಔಷಧ ಇಲ್ಲದಿರುವುದು, ವಾರ್ಡ್‌ಗಳಲ್ಲಿ ವೈದ್ಯರು ಇಲ್ಲದಿರುವುದು, ಹಾಜರಾತಿ ಪುಸ್ತಕದಲ್ಲಿರುವ ವಿವರದಂತೆ ಯಾರು ಇಲ್ಲದಿರುವುದು ಸೇರಿದಂತೆ ಹಲವು ನ್ಯೂನತೆಗಳನ್ನು ಗುರುತಿಸಲಾಯಿತು. ಈ ವೇಳೆ ಆಸ್ಪತ್ರೆಯ ವೈದ್ಯರು, ಹಿರಿಯ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಯಿತು.

ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್, ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರಕುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ದಿಢೀರ್‌ ಭೇಟಿ ನೀಡಲಾಗಿದೆ. ಪರಿಶೀಲನೆ ವೇಳೆ ಔಷಧ ನೀಡಿರುವ ಕುರಿತು ನೋಂದಣಿ ಪುಸ್ತಕದಲ್ಲಿ ಮಾಹಿತಿ ಇಲ್ಲ. ಜೀವ ಉಳಿಸುವ ತುರ್ತು ಔಷಧಗಳಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಔಷಧ ವಿತರಿಸುವ ಗುತ್ತಿಗೆದಾರರಿಗೆ ಹಣ ಬಾಕಿ ಇರುವುದರಿಂದ ಔಷಧ ಸರಬರಾಜಿಗೆ ತಡೆಯಾಗಿದೆ ಎನ್ನುವ ಮಾಹಿತಿ ಬಂದಿದೆ ಎಂದು ಅವ್ಯವಸ್ಥೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಹೊರರೋಗಿಗಳ ವಿಭಾಗದಲ್ಲಿ ಎಲ್ಲಾ ವೈದ್ಯರು ಇರಲಿಲ್ಲ, ಕಿರಿಯ ವೈದ್ಯರು ಮಾತ್ರ ಇದ್ದರು. ರೋಗಿಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡದಿರುವುದು ಕಂಡುಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ, ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯ ಅವ್ಯವಸ್ಥೆ ಕುರಿತು ಸಂಪೂರ್ಣ ವರದಿ ನೀಡಲಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.