ಸಾರಾಂಶ
ಬೆಂಗಳೂರು : ಜಿಟಿ ಜಿಟಿ ಮಳೆಯಿಂದಾಗಿ ಬೆಚ್ಚಗೆ ಮನೆಯಲ್ಲಿದ್ದ ಭ್ರಷ್ಟ್ರ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಬೆಳ್ಳಂಬೆಳ್ಳಗೆ ಬಿಸಿ ಮುಟ್ಟಿಸಿದ್ದು, ಬೆಂಗಳೂರಿನಲ್ಲಿ ಪಕ್ಕದ ಮನೆಗೆ ಚಿನ್ನಾಭರಣ ಎಸೆದ ಬ್ಯಾಗ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ, ಮತ್ತೊಬ್ಬ ಅಧಿಕಾರಿ ಬಳಿ ಬಂದೂಕು ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸರು 12 ಸರ್ಕಾರಿ ಅಧಿಕಾರಿಗಳಿಗೆ ಸೇರಿದ 60 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 1.20 ಕೋಟಿ ರು. ನಗದು ಸೇರಿ 49.85 ಕೋಟಿ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಶುಕ್ರವಾರ ದಾಳಿಗೊಳಗಾದ 12 ಅಧಿಕಾರಿಗಳ ಪೈಕಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಉಪನಿಯಂತ್ರಕ ಅತ್ಹರ್ ಅಲಿ ಬಳಿ ಹೆಚ್ಚಿನ ಅಕ್ರಮ ಸಂಪತ್ತು ಪತ್ತೆಯಾಗಿದೆ.
ಲೋಕಾಯುಕ್ತ ಪೊಲೀಸರು ದಾಳಿ ಪ್ರಕ್ರಿಯೆ ಆರಂಭಿಸುತ್ತಿದ್ದಂತೆ ಚಿನ್ನದ ಬ್ಯಾಗ್ ಅನ್ನು ಪಕ್ಷದ ಮನೆಗೆ ಎಸೆದರು. ಬ್ಯಾಗ್ ಎಸೆದ ಶಬ್ದವನ್ನು ಕೇಳಿದ ಲೋಕಾಯುಕ್ತ ಪೊಲೀಸರು ತಕ್ಷಣ ಪಕ್ಕದ ಮನೆಗೆ ತೆರಳಿ ಬ್ಯಾಗ್ ಪರಿಶೀಲಿಸಿದಾಗ ಚಿನ್ನ ಇರುವುದು ಖಚಿತವಾಗಿದೆ. ಬಳಿಕ 2 ಕೆಜಿಗೂ ಅಧಿಕ ಇರುವ ಚಿನ್ನವನ್ನು ವಶಕ್ಕೆ ಪಡೆದುಕೊಂಡರು.
ಬೆಂಗಳೂರಿನ ಕಲ್ಯಾಣ ನಗರದಲ್ಲಿನ ಎಚ್‌ಬಿಆರ್‌ಬಿ ಲೇಔಟ್‌ನಲ್ಲಿನ ನಿವಾಸದಲ್ಲಿ ಶೋಧ ನಡೆಸಿದಾಗ ಒಟ್ಟು 8.63 ಕೋಟಿ ರು. ಮೌಲ್ಯದ ಆಸ್ತಿ ಪತ್ತೆಯಾಗಿದೆ. 25 ಲಕ್ಷ ರು. ನಗದು, 2 ಕೋಟಿ ರು. ಮೌಲ್ಯದ ಚಿನ್ನಾಭರಣ ಸಿಕ್ಕಿದೆ. 4 ನಿವೇಶನ ಮತ್ತು 3 ಮನೆಗಳು ಸೇರಿ 5.82 ಕೋಟಿರು. ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ.
ನಂತರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚು ನಿರ್ದೇಶಕ ಸಿ.ಟಿ.ಮುದ್ದುಕುಮಾರ್ ಬಳಿ ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗಿದೆ. ಒಟ್ಟು 7.41 ಕೋಟಿ ರು. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ. 10 ಸ್ಥಗಳಲ್ಲಿ ಶೋಧ ಕಾರ್ಯ ನಡೆಸಲಾಗಿದ್ದು, ಬಂದೂಕು ಸಿಕ್ಕಿದೆ.
ಇನ್ನುಳಿದಂತೆ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಯಾದಗಿರಿ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬಲ್ಲ ಮೂಲಗಳಿಂದ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದರು.
ಉಳಿದಂತೆ ಮೈಸೂರು ವಿಭಾಗದ ಜಿಲ್ಲಾ ಕಾರ್ಮಿಕ ಅಧಿಕಾರಿ ಚೇತನ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್.ಆನಂದ್, ಕೆಐಎಡಿಬಿ ಎಫ್‌ಡಿಎ ಬಿ.ವಿ.ರಾಜ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಕುಮಾರ್, ಬೆಂಗಳೂರಿನ ಕಂದಾಯ ಸಹಾಯಕ ಆಯುಕ್ತ ಎಫ್‌ಡಿಎ ಟಿ.ಆರ್.ಮಂಜುನಾಥ್, ಹೆಬ್ಬಗೋಡಿ ನಗರಸಭೆ ಪೌರಾಯುಕ್ತ ಕೆ.ನರಸಿಂಹಮೂರ್ತಿ, ಶಿವಮೊಗ್ಗದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಎನ್.ಪ್ರಕಾಶ್, ಪಶುಸಂಗೋಪನೆ ಇಲಾಖೆ ನಿರೀಕ್ಷಿಕ ಆರ್.ಸಿದ್ದಪ್ಪ, ಶಿವಮೊಗ್ಗದ ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮಪಂಚಾಯಿತಿ ಅಧ್ಯಕ್ಷ ನಾಗೇಶ್, ಯಾದಗಿರಿ ಜಿಲ್ಲಾಪಂಚಾಯತ್ ಯೋಜನಾ ನಿರ್ದೇಶಕ ಬಲವಂತ್ ರಾಥೋಡ್ ದಾಳಿಗೊಳಗಾದ ಅಧಿಕಾರಿಗಳಾಗಿದ್ದಾರೆ. ಇವರಿಗೆ ಸೇರಿದ ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.