ಪಟ್ಟಣದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ತಂಡದಿಂದ ದಾಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಪಟ್ಟಣದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ತಂಡದಿಂದ ದಾಳಿ ನಡೆದಿದೆ.ಸಿದ್ಧಾಪುರದ ಕೋಲ ಸಿರ್ಸಿ ಗ್ರೂಪ್‌ನ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಸಿಇಒ ಮಾರುತಿ ಯಶ್ವಂತ ಮಾಳ್ವಿಯವರ ಪಟ್ಟಣದಲ್ಲಿರುವ ಮನೆ ಹಾಗೂ ವಾಣಿಜ್ಯ ಮಳಿಗೆ ಮೇಲೆ ದಾಳಿ ನಡೆದಿದೆ.
ಆದಾಯಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವ ಆರೋಪದಡಿ ಪಟ್ಟಣದಲ್ಲಿರುವ ಮನೆ ಹಾಗೂ ಸೇವೆ ಸಲ್ಲಿಸುತ್ತಿರುವ ಸಿದ್ದಾಪುರದ ತಾಲೂಕಿನಲ್ಲಿ ಏಕಕಾಲದಲ್ಲಿ ಲೋಕಾ ತಂಡದಿಂದ ದಾಳಿ ನಡೆದಿದೆ.ದಾಳಿಯ ಸಮಯದಲ್ಲಿ ಮಾಳ್ವಿಯವರು ಇದ್ದಿರಲಿಲ್ಲ, ಅವರು ನಾಲ್ಕು ದಿನಗಳ ಹಿಂದೇ ಪತ್ನಿಯ ಜೊತೆ ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.
ಮೂಲತಃ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದವರಾದ ಮಾರುತಿ ಯಶ್ವಂತ ಮಾಳ್ವಿಯವರು ಹಳಿಯಾಳ ಪಟ್ಟಣದಲ್ಲಿ ಬೆಳಗಾವಿ ರಾಜ್ಯ ಹೆದ್ದಾರಿಯ ಪಕ್ಕದ ಬಡಾವಣೆಯಲ್ಲಿ ಬೆಲೆಬಾಳುವ ವಾಣಿಜ್ಯ ಮಳಿಗೆಯನ್ನು ಹಾಗೂ ಅದರ ಪಕ್ಕದಲ್ಲಿಯೇ ಭವ್ಯ ಬಂಗಲೆ ಹೊಂದಿದ್ದರು ಎನ್ನಲಾಗಿದೆ. ವಾಣಿಜ್ಯ ಮಳಿಗೆಯಲ್ಲಿ ಶ್ರೀ ಯಶಲಕ್ಷ್ಮೀ ಸಿಲ್ಕ್ ಆ್ಯಂಡ್ ಸಾರಿಸ್ ಎಂಬ ಜವಳಿ ಮಾಲ್ ಆರಂಭಿಸಿ ಸಾರ್ವಜನಿಕರ ಕಣ್ಣಿಗೆ ತುತ್ತಾಗಿದ್ದರು.ಹಳಿಯಾಳದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ್ ಮುಂದಾಳತ್ವದಲ್ಲಿ ದಾಳಿ ನಡೆಯಿತು. ದಾಳಿಯ ಸಮಯದಲ್ಲಿ ದಾಖಲೆ ಪರಿಶೀಲನೆ ಹಾಗೂ ನಗದು ಹಾಗೂ ಆಸ್ತಿ ಸಂಬಂಧಿತ ವಿವರಗಳ ಸಂಗ್ರಹ ಕಾರ್ಯ ರಾತ್ರಿಯವರೆಗೆ ಮುಂದುವರೆದಿತ್ತು.
ದಾಳಿಯ ಕುರಿತು ಅಧಿಕೃತ ವಿವರ ಲಭ್ಯವಾಗಲಿಲ್ಲ.ಸಿದ್ದಾಪುರದಲ್ಲೂ ದಾಳಿ:ಸಿದ್ದಾಪುರ ತಾಲೂಕಿನ ಕೋಲಸಿರ್ಸಿ ಸೇವಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಮಾಳ್ವಿಯವರ ಕುರಿತಾದ ಮಾಹಿತಿಗಳನ್ನು ಪಡೆಯಲು ಲೋಕಾಯುಕ್ತ ಪೊಲೀಸರ ತಂಡ ಸೇವಾ ಸಹಕಾರಿ ಸಂಘಕ್ಕೆ ಮಂಗಳವಾರ ಬೆಳಗ್ಗೆ ಬಂದಿದ್ದಾಗಿ ತಿಳಿದುಬಂದಿದೆ. ಕಾರ್ಯನಿರ್ವಹಣಾಧಿಕಾರಿಯಾಗಿ ಯಾವಾಗಿನಿಂದ ಕಾರ್ಯನಿರ್ವಹಿಸುತ್ತಿದ್ದರು ಎನ್ನುವ ಹಾಗೂ ಅವರ ವೇತನದ ಕುರಿತಾದ ಮಾಹಿತಿಯನ್ನು ಸಂಗ್ರಹಿಸಿಕೊಂಡಿದ್ದು ಇನ್ನುಳಿದಂತೆ ಅವರ ಕುರಿತಾದ ಯಾವ ಮಾಹಿತಿಗಳು ಇಲ್ಲಿ ದೊರಕಿಲ್ಲ.