ಕನಕಗಿರಿ ತಹಸೀಲ್ ಕಚೇರಿ ಸೇರಿ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಪಂ ಕಚೇರಿಗಳಿಗೆ ಗುರುವಾರ ಲೋಕಾಯುಕ್ತ ಪೊಲೀಸರು ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು.

ಕನಕಗಿರಿ: ಇಲ್ಲಿನ ತಹಸೀಲ್ ಕಚೇರಿ ಸೇರಿ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಪಂ ಕಚೇರಿಗಳಿಗೆ ಗುರುವಾರ ಲೋಕಾಯುಕ್ತ ಪೊಲೀಸರು ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು.

ಚಿತ್ರದುರ್ಗದ ಲೋಕಾಯುಕ್ತ ಡಿವೈಎಸ್‌ಪಿ ಕಲಾವತಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ಬಸವರಾಜ ಪಾಟೀಲ್ ಹಾಗೂ ಪಾಲಾಕ್ಷ ಅಧಿಕಾರಿಗಳ ತಂಡವು ಇಲ್ಲಿನ ತಹಸೀಲ್ ಕಚೇರಿಯ ಆಹಾರ ವಿಭಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು. ಪಡಿತರ ಚೀಟಿ ಕುರಿತು ಯಾವುದೇ ದಾಖಲೆಗಳನ್ನು ನಿರ್ವಹಿಸದಿರುವುದು ಕಂಡು ಬಂದಿದೆ. ತಾಲೂಕು ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳ ತಪಾಸಣೆಯ ದಾಖಲೆಗಳು ಇಲ್ಲದಿದ್ದರಿಂದ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ, ಗ್ರಾಹಕರು ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿಗಳ ವಿವರ ಸಹ ಇಲ್ಲದಿರುವ ಜತೆಗೆ ಜನ ಸಾಮಾನ್ಯರು ಕಚೇರಿಗೆ ಬಂದು ಮಾಹಿತಿ ಪಡೆಯಬೇಕೆಂದರೆ ಕಳೆದ ನಾಲ್ಕೈದು ದಿನಗಳಿಂದ ಕಂಪ್ಯೂಟರ್ ಕೆಟ್ಟಿರುವುದು ಕಂಡು, ಜನಸಾಮಾನ್ಯರ ಕೆಲಸಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಆಹಾರ ನಿರೀಕ್ಷಕ ಬಸವರಾಜ ಅಂಗಡಿ ಅವರನ್ನು ಡಿವೈಎಸ್‌ಪಿ ಕಲಾವತಿ ಪ್ರಶ್ನಿಸಿದರು.

ಲೋಕಾಯುಕ್ತರ ಪರಿಶೀಲನೆ ವೇಳೆ ಗಣಕಯಂತ್ರ ಸಹಾಯಕ ಗೈರಾಗಿದ್ದರು. ಆಹಾರ ಶಾಖೆಯಲ್ಲಿ ಹಲವು ಲೋಪಗಳು ಕಂಡು ಬಂದಿವೆ. ಅಕ್ರಮ ಅಕ್ಕಿ ಸಾಗಾಟನೆಗೆ ಸಂಬಂಧಿಸಿದಂತೆ ಆಹಾರ ನಿರೀಕ್ಷಕ ಬಸವರಾಜ ಅಂಗಡಿ ನಾಲ್ಕು ದೂರುಗಳನ್ನು ಸಲ್ಲಿಸಿದ್ದಾರೆ. ಕಂಡು ಬಂದಿರುವ ಲೋಪಗಳ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಡಿವೈಎಸ್‌ಪಿ ಕಲಾವತಿ ತಿಳಿಸಿದರು.

ಆನಂತರ ಇನ್‌ಸ್ಪೆಕ್ಟರ್‌ಗಳ ತಂಡ ಮುಸಲಾಪುರ ಹಾಗೂ ಕರಡೋಣ ಗ್ರಾಪಂ ಕಚೇರಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದೆ ಎಂಬ ಮಾಹಿತಿ ''''ಕನ್ನಡಪ್ರಭ''''ಕ್ಕೆ ಲಭ್ಯವಾಗಿದೆ.

ಸಿಬ್ಬಂದಿ ವೀರೇಶ, ಮಹಾಲಿಂಗಪ್ಪ, ಮಂಜುನಾಥ, ಶ್ರೀನಿವಾಸ, ಮಾರುತಿ ಇದ್ದರು.

ಆಹಾರ, ಸಮಾಜ ಕಲ್ಯಾಣ ಇಲಾಖೆಗಳಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ:

ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿವೆಯೇ ಹಾಗೂ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಲೋಕಾಯುಕ್ತ ಪೋಲಿಸ್‌ ಅಧಿಕಾರಿಗಳು ಗುರುವಾರ ಕುಷ್ಟಗಿ ಪಟ್ಟಣದ ಆಹಾರ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು.

ಆಹಾರ ಇಲಾಖೆಗೆ ಭೇಟಿ ನೀಡಿದ ವಿಜಯಪುರದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಆನಂದ ಡೋಣಿ ಹಾಗೂ ಖಾದರ್‌ ಮುಲ್ಲಾ ಅವರು ಇಲಾಖೆಯ ಕಡತಗಳನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಒದಗಿಸುತ್ತಿರುವ ಸೇವೆಗಳ ಕುರಿತು ಮಾಹಿತಿ ಪಡೆದರು. ಸಮಾಜ ಕಲ್ಯಾಣ ಇಲಾಖೆಗೆ ಭೇಟಿ ನೀಡಿದ ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ರಾಮಪ್ಪ ಸಾವಳಗಿ ಅವರು ದಾಖಲಾತಿಗಳನ್ನು ಪರಿಶೀಲಿಸಿ, ಸರ್ಕಾರದ ವಿವಿಧ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುವ ರೀತಿ ಹಾಗೂ ಇಲಾಖೆಗಳ ಮೂಲಕ ನಾಗರಿಕರಿಗೆ ದೊರೆಯಬೇಕಾದ ಸೌಲಭ್ಯಗಳ ಅನುಷ್ಠಾನದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆ ವೇಳೆ ಲೋಪ-ದೋಷಗಳು ಕಂಡುಬಂದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಮುಂದಿನ ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ವಿವಿಧ ಇಲಾಖೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಆಹಾರ ನಿರೀಕ್ಷಕ ರಮೇಶ ತಾಳಕೇರಿ, ಮಂಜುಳಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ ಉಪಸ್ಥಿತರಿದ್ದರು.