ಇಂದೇ ಲೋಕ ಚುನಾವಣೆ ಘೋಷಣೆ: ಖಚಿತಗೊಳ್ಳದ ಅಭ್ಯರ್ಥಿಗಳು

| Published : Mar 16 2024, 01:48 AM IST

ಸಾರಾಂಶ

ಭಾರತವಷ್ಟೇ ಅಲ್ಲ ಇಡೀ ಪ್ರಪಂಚವೇ ಎದುರು ನೋಡುತ್ತಿರುವ ಬಹುನಿರೀಕ್ಷಿತ ದೇಶದ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ ಆಯೋಗವು ಶುಕ್ರವಾರ ಮುಹೂರ್ತ ಫಿಕ್ಸ್‌ ಮಾಡಿದ್ದು, ಇನ್ನು ರಾಯಚೂರು ಲೋಕಸಭಾ ಕ್ಷೇತ್ರದಿಂದ ಯಾವ ಅಭ್ಯರ್ಥಿಯೂ ಖಚಿತಗೊಳ್ಳದೇ ಇರುವುದು ಉಭಯ ಪಕ್ಷದವರಲ್ಲಿ ಕಸಿವಿಸಿಯನ್ನುಂಟು ಮಾಡುತ್ತಿದೆ.

ರಾಮಕೃಷ್ಣ ದಾಸರಿ

ರಾಯಚೂರು: ಭಾರತವಷ್ಟೇ ಅಲ್ಲ ಇಡೀ ಪ್ರಪಂಚವೇ ಎದುರು ನೋಡುತ್ತಿರುವ ಬಹುನಿರೀಕ್ಷಿತ ದೇಶದ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ ಆಯೋಗವು ಶುಕ್ರವಾರ ಮುಹೂರ್ತ ಫಿಕ್ಸ್‌ ಮಾಡಿದ್ದು, ಇನ್ನು ರಾಯಚೂರು ಲೋಕಸಭಾ ಕ್ಷೇತ್ರದಿಂದ ಯಾವ ಅಭ್ಯರ್ಥಿಯೂ ಖಚಿತಗೊಳ್ಳದೇ ಇರುವುದು ಉಭಯ ಪಕ್ಷದವರಲ್ಲಿ ಕಸಿವಿಸಿಯನ್ನುಂಟು ಮಾಡುತ್ತಿದೆ.

ಒಂದು ಕಡೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅಗತ್ಯವಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತ್ತೊಂದು ಕಡೆ ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯನ್ನು ಕೊಂಚ ಹಿನ್ನಡೆಯನ್ನು ಅನುಭವಿಸಿವೆ ಎಂದು ಹೇಳಬಹುದು ಇದಕ್ಕೆ ಕಾರಣ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳಿಂದ ಇನ್ನೂ ಅಭ್ಯರ್ಥಿಗಳು ಯಾರು ಎಂದು ಖಚಿತಗೊಳ್ಳದೇ ಇರುವುದಾಗಿದೆ.

ಕಾಂಗ್ರೆಸ್‌ನ ಮೊದಲ ಅದೇ ರೀತಿ ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಘೋಷಣೆಯ ನಿರೀಕ್ಷೆಯು ಹುಸಿಯಾಗಿದ್ದು, ಇದೀಗ ಶುಕ್ರವಾರವೇ ಚುನಾವಣೆ ಘೋಷಣೆಯಾಗುತ್ತಿರುವುದರಿಂದ ಮುಂದಿನ ಪಟ್ಟಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಬಿಜೆಪಿಯಲ್ಲಿ ಪೈಪೋಟಿ: ಪಕ್ಕದ ಯಾದಗಿರಿಯ ಮೂರು ಹಾಗೂ ರಾಯಚೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ರಾಯಚೂರು ಲೋಕಸಭಾ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕಾಂಗ್ರೆಸ್‌ನಲ್ಲಿದ್ದ ಬಿ.ವಿ.ನಾಯಕ ಅವರನ್ನು ಸೋಲಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ ಮತ್ತೊಮ್ಮೆ ಸ್ಪರ್ಧಿಸುವ ಇರಾದೆಯನ್ನು ಹೊಂದಿದ್ದಾರೆ. ಈ ನಡುವೆ ಹಾಲಿ ಸಂಸದರಿದ್ದರು ಸಹ ಮಾಜಿ ಸಂಸದ ಬಿ.ವಿ.ನಾಯಕ,ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್ ಅವರು ಬಿಜೆಪಿ ಟಿಕೆಟ್‌ ಪೈಪೋಟಿಯಲ್ಲಿದ್ದಾರೆ.

ಕಾಂಗ್ರೆಸ್‌ ಪಕ್ಷದಿಂದ ಈಗಾಗಲೇ ಹೈಕಮಾಂಡ್‌ಗೆ ಕಳುಹಿಸಿರುವ ಏಕೈಕ ಹೆಸರಿನ ಪಟ್ಟಿಯಲ್ಲಿ ರಾಯಚೂರು ಕ್ಷೇತ್ರದಿಂದ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರ ಹೆಸರಿದೆ. ಆದರೂ ಸಹ ಕೈ ಪಕ್ಷದಲ್ಲಿ ದೇವಣ್ಣ ನಾಯಕ, ರವಿ ಪಾಟೀಲ್‌ ಟಿಕೆಟ್‌ ಪ್ರಯತ್ನ ನಡೆಸಿದ್ದು, ಹಂತಿಮ ಪಟ್ಟಿಯಲ್ಲಿ ಯಾರಿಗೆ ಅದೃಷ್ಠ ಹೊಲಿಯಲಿದೆಯೋ ಶೀಘ್ರದಲ್ಲಿಯೇ ತಿಳೀಯಲಿದೆ.

ಕಾದು ನೋಡುವ ತಂತ್ರಗಾರಿಕೆ: ರಾಯಚೂರು ಟಿಕೆಟ್‌ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಕಾದು ನೋಡುವ ತಂತ್ರಗಾರಿಕೆಗೆ ಮೊರೆ ಹೋದಂತೆ ಮೇಲ್ನೋಟಕ್ಕೆ ಬಾಸವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಬಿಜೆಪಿಯ ಆಕಾಂಕ್ಷಿಗಳು ಟಿಕೆಟ್‌ ಕೈತಪ್ಪಿದರೆ ಕಾಂಗ್ರೆಸ್‌ ಕದತಟ್ಟಲಿದ್ದಾರೆ ಎನ್ನುವ ಗುಮಾನಿ ಕ್ಷೇತ್ರದಲ್ಲಿ ದಟ್ಟವಾಗಿ ಹಬ್ಬಿದೆ. ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಮಾಜಿ ಸಂಸದ ಬಿ.ವಿ.ನಾಯಕ ಅವರು ಈ ಮುಂಚೆ ಕಾಂಗ್ರೆಸ್‌ ಪಕ್ಷದಲ್ಲಿದ್ದವರೇ ಇದೀಗ ಬಿಜೆಪಿ ಟಿಕೆಟ್‌ಗಾಗಿ ಇಬ್ಬರ ನಡುವೆ ತೀವ್ರ ಪೂಪೋಟಿ ಸೃಷ್ಠಿಗೊಂಡಿದ್ದು, ಬಿಜೆಪಿಯ ಟಿಕೆಟ್‌ ವಂಚಿತರು ಕೈ ಕಡೆ ಮುಖ ಮಾಡುವ ಸಾಧ್ಯತೆಗಳಿರುವುದರಿಂದ ಉಭಯ ಪಕ್ಷಗಳು ಪರಸ್ಪರ ಕಾದು ನೋಡುವ ಅಸ್ತ್ರವನ್ನು ಪ್ರಯೋಗಿಸಿದ್ದರಿಂದಲೆಯೇ ಅಭ್ಯರ್ಥಿ ಖಚಿತತೆ ಇಲ್ಲದೇ ಅತಂತ್ರತೆ ನಿರ್ಮಾಣಗೊಂಡಿದ್ದು ಶುಕ್ರವಾರವೇ ಚುನಾವಣೆ ಘೊಷಣೆಯಾಗುತ್ತಿರುವುದರಿಂದ ತಕ್ಷಣವೇ ಉಭಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಅದಕ್ಕಾಗಿ ಎಲ್ಲರೂ ಮೂರ್ನಾಲ್ಕು ದಿನಗಳ ಕಾಲ ಕಾಯಬೇಕಿದೆ.