ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾ. 16 ರ ಶನಿವಾರ ನಗರಕ್ಕೆ ಆಗಮಿಸಲಿದ್ದಾರೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ದಶ ದಿಕ್ಕುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ವಿಶೇಷ ರಕ್ಷಣಾ ಪಡೆ ಸಿಬ್ಬಂದಿ ಅದಾಗಲೇ ಕಲಬರಗಿ ಸುತ್ತುವರಿದಿದ್ದಾರೆ. ಇವರೊಂದಿಗೆ ಸ್ಥಳೀಯ ಪೊಲೀಸರ ಸಾಥ್ ನೀಡಿದ್ದಾರೆ. ನಗರದ ಎನ್.ವಿ.ಮೈದಾನದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಪಕ್ಷದ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಕಲಬುರಗಿ ಲೋಕಸಭಾ ಕ್ಷೇತ್ರದ ಉಸ್ತುವಾರಿಯಾದ ರಾಜುಗೌಡ ಅವರು, ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.ತೆಲಂಗಾಣದಿಂದ ನೇರವಾಗಿ ಕಲಬುರಗಿ ಏರ್ಪೋರ್ಟ್‍ಗೆ ಆಗಮಿಸಲಿರುವ ಮೋದಿ, ಪೊಲೀಸ್ ಮೈದಾನದಿಂದ 10 ರಿಂದ 12 ನಿಮಿಷ ರೋಡ್ ಶೋ ಮಾಡಲಿದ್ದಾರೆ. ಬಳಿಕ 40 ನಿಮಿಷ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕಲಬುರಗಿ ಹಾಗೂ ಬೀದರ್ ಕ್ಷೇತ್ರದ ಜನ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜುಗೌಡ ತಿಳಿಸಿದ್ದಾರೆ.
ನಗರದಲ್ಲಿ ಬಿಗಿ ಭದ್ರತೆ:ಪ್ರಧಾನಿ ಮೋದಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ತಿಳಿಸಿದ್ದಾರೆ.
ಬಿಗಿ ಬಂದೋಬಸ್ತ್- ಬಾಂಬ್ ಸ್ಕ್ವ್ಯಾಡ್ ಪರಿಶೀಲನೆ:ಪೊಲೀಸ್ ಪರೇಡ್ ಮೇದಾನದಿಂದ ಎನ್‌ವಿ ರಸ್ತೆಯವರೆಗೂ ಮೋದಿ ರೋಡ್ ಷೋ ನಡೆಯೋ ಸಾಧ್ಯತೆ ಇದೆ. ಇದಕ್ಕಾಗಿ ಸಿದ್ಧತೆಗಳು ಸಾಗಿದ್ದು, ಆರಂಭದಲ್ಲೇ ಪೊಲೀಸ್ ಬಾಂಬ್ ಪತ್ತೆ ದಳದವರು ರೋಡ್ ಷೋ ಮಾರ್ಗದುದ್ದಕ್ಕೂ ಶ್ವಾನಗಳೊಂದಿಗೆ, ಬಾಂಬ್ ಪತ್ತೆ ಯಂತ್ರಗಳೊಂದಿಗೆ ಶೋಧಕಾರ್ಯದಲ್ಲಿ ತೊಡಗಿದ್ದಾರೆ.
ರಸ್ತೆಯುದ್ದಕ್ಕೂ ಇರುವ ಚರಂಡಿ, ಮಳಿಗೆ, ಮುಂಗಟ್ಟು, ಇತರೆಲ್ಲ ಸ್ಥಳಗಳಲ್ಲಿ ಶೋಧಕಾರ್ಯ ಸಾಗಿದೆ.