ರಾಜಕೀಯವಾಗಿ ಸಿಂಧನೂರು, ಮಸ್ಕಿ ಪುನರ್ ಜನ್ಮನೀಡಿವೆ

| Published : Mar 16 2024, 01:48 AM IST

ರಾಜಕೀಯವಾಗಿ ಸಿಂಧನೂರು, ಮಸ್ಕಿ ಪುನರ್ ಜನ್ಮನೀಡಿವೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರು ಹಾಗೂ ಮಸ್ಕಿ ತಾಲೂಕುಗಳು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಲು ನಿರೀಕ್ಷೆಗಿಂತಲೂ ಮೀರಿ ಬಹುಮತ ನೀಡಿವೆ. ಹೀಗಾಗಿ ಎರಡು ಕ್ಷೇತ್ರಗಳು ರಾಜಕೀಯವಾಗಿ ಪುನರ್ಜನ್ಮ ನೀಡಿವೆ.

ಸಿಂಧನೂರು: ಸಿಂಧನೂರು ಹಾಗೂ ಮಸ್ಕಿ ತಾಲೂಕುಗಳು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಲು ನಿರೀಕ್ಷೆಗಿಂತಲೂ ಮೀರಿ ಬಹುಮತ ನೀಡಿವೆ. ಹೀಗಾಗಿ ಎರಡು ಕ್ಷೇತ್ರಗಳು ರಾಜಕೀಯವಾಗಿ ಪುನರ್ಜನ್ಮ ನೀಡಿವೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

ಶುಕ್ರವಾರ ಸಿಂಧನೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ರೈಲ್ವೆ ನಿಲ್ದಾಣದ ಉದ್ಘಾಟನೆ ಹಾಗೂ ನೈರುತ್ಯ ರೈಲ್ವೆಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ಜಗತ್ತಿನ 14 ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿಯನ್ನು ಜಾಗತಿಕ ನಾಯಕನಾಗುವಂತೆ ಆಹ್ವಾನ ನೀಡುತ್ತಿವೆ. ಯಾರಿಗೆ ಆಗಲಿ ಅಧಿಕಾರ ಶಾಶ್ವತವಲ್ಲ. ಅಧಿಕಾರವಧಿಯಲ್ಲಿ ಮಾಡಿದ ಕೆಲಸಗಳು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತವೆ. 1196-97 ರ ಸುಮಾರಿಗೆ ಈ ರೈಲ್ವೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಸುಮಾರು ಮೂರು ದಶಕಗಳ ವರೆಗೆ ವಿವಿಧ ಹಂತಗಳಲ್ಲಿ ಕಾಮಗಾರಿಗಳು ನಡೆದಿವೆ. ರಾಜ್ಯ ಸರ್ಕಾರ ಸಮರ್ಪಕವಾಗಿ ಬಜೆಟ್‌ನಲ್ಲಿ ನಿಗದಿ ಪಡಿಸಿದ ಹಣವನ್ನು ಈ ಕಾಮಗಾರಿಗೆ ನೀಡಿದ್ದರೆ ಇನ್ನು ಎರಡ್ಮೂರು ವರ್ಷಗಳ ಮುಂಚೆಯೆ ಸಿಂಧನೂರಿನಿಂದ ರೈಲ್ವೆ ಸಂಚಾರ ಆರಂಭಗೊಳ್ಳುತ್ತಿತ್ತು ಎಂದು ಹೇಳಿದರು.

ಸಿಂಧನೂರು ತಾಲೂಕಿನ ಜನತೆಯ ಮೂರು ದಶಕಗಳ ಕನಸು ಇಂದು ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದಾಗಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಅದರಲ್ಲಿ ಗಿಣಿಗೇರ-ಮಹಿಬೂಬನಗರ ರೈಲ್ವೆ ಕಾಮಗಾರಿ ಸೇರಿದೆ. ಸುಮಾರು 3,260 ಕೋಟಿ ಅನುದಾನವನ್ನು ಈ ಕಾಮಗಾರಿಗೆ ಇಡಲಾಗಿತ್ತು. ಅದರಲ್ಲಿ ಈವರೆಗೆ 1,991 ಕೋಟಿ ರು. ಖರ್ಚಾಗಿದೆ. ಇನ್ನು ಮಹಿಬೂಬನಗರದ ವರೆಗೆ ರೈಲ್ವೆ ಲೈನ್ ಪೂರ್ಣಗೊಳ್ಳಬೇಕಿದೆ ಎಂದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮನವೊಲಿಸಿ ಸಿಂಧನೂರಿಗೆ ಮೆಡಿಕಲ್ ಕಾಲೇಜನ್ನು ತೆಗೆದುಕೊಂಡು ಬನ್ನಿ, ಜನ ನಿಮ್ಮ ಭಾವಚಿತ್ರವನ್ನು ಹಾಕುತ್ತಾರೆ ಎಂದು ಸಂಗಣ್ಣ ವೇದಿಕೆ ಮೇಲಿದ್ದ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಸಲಹೆ ನೀಡಿದರು.

ಈಗಾಗಲೆ ಸಿಂಧನೂರಿನ ಹೊಸಳ್ಳಿ ಕ್ಯಾಂಪ್ನಿಂದ ಬೂತಲದಿನ್ನಿ ರಸ್ತೆಗೆ ಹೊಂದಿಕೊಳ್ಳುವಂತೆ ಬೈಪಾಸ್ ರಸ್ತೆ ಮಂಜೂರಾಗಿದ್ದು, ಭೂಸ್ವಾಧಿನದ ಪ್ರಕ್ರಿಯೆ ನಡೆಯಬೇಕಿದೆ. ಯಲಬುರ್ಗ-ಕುಕುನೂರಿಗೆ ಎರಡು ಬೈಪಾಸ್ ರಸ್ತೆಗಳು ಮಂಜೂರಾಗಿವೆ. ಕೇಂದ್ರಿಯ ವಿದ್ಯಾಲಯವನ್ನು ಸಿಂಧನೂರಿಗೆ ತರಬೇಕಾಗಿದೆ. ಕಳೆದ ಏಳು ವರ್ಷದ ಪರಿಶ್ರಮದಿಂದಾಗಿ ಗದಗ-ವಾಡಿ ರೈಲು ಪ್ರಾರಂಭವಾಗಿದೆ. ಅಂಚೆ ಇಲಾಖೆಯು ಲೋಕಸಭಾ ವ್ಯಾಪ್ತಿಯಲ್ಲಿ ಅನೇಕ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಆರಂಭಿಸಲು ಸಾಕಷ್ಟು ನೆರವು ನೀಡಿವೆ ಎಂದು ತಮ್ಮ ಕಾಮಗಾರಿಗಳನ್ನು ಸ್ಮರಿಸಿಕೊಂಡರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಮಾಡಿದ ಟೀಕೆಗಳು ತಮಗೆ ಆಶೀರ್ವಾದವಿದ್ದಂತೆ ಅವರ ಬಗ್ಗೆ ಟೀಕೆ ಮಾಡಲು ಹೋಗುವುದಿಲ್ಲ. ಆದರೆ ನೂತನವಾಗಿ ಪದಗ್ರಹಣ ಮಾಡಲು ಮುಂದಾಗಿದ್ದ ಅಧ್ಯಕ್ಷರುಗಳೇ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಆಹ್ವಾನಿಸದ ಕಾರ್ಯಕ್ರಮಕ್ಕೆ ಹೇಗೆ ಬರಲಿ ಎಂದು ಟಾಂಗ್ ನೀಡಿದರು.

ಶಾಸಕ ಹಂಪನಗೌಡ ಬಾದರ್ಲಿ,ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ರೌಡಕುಂದ ಮಠದ ಸದಾನಂದ ಶರಣರು ಮಾತನಾಡಿದರು.

ಬಿಜೆಪಿ ಮುಖಂಡರಾದ ಅಮರೇಗೌಡ ವಿರೂಪಾಪುರ, ರಾಜೇಶ ಹಿರೇಮಠ, ಮಧ್ವರಾಜ ಆಚಾರ್ಯ, ನಿರುಪಾದೆಪ್ಪ ಜೋಳದರಾಶಿ, ಯಂಕೋಬ ನಾಯಕ, ಹನುಮೇಶ ಸಾಲಗುಂದಾ, ಮಲ್ಲಿಕಾರ್ಜುನ ಜೀನೂರು, ಹುಬ್ಬಳ್ಳಿಯ ರೈಲ್ವೆ ವಿಭಾಗಿಯ ಅಧಿಕಾರಿ ದೇವಯಾನಿ, ಎಇಇ ಉಮಾ ಮಹೇಶ್ವರ, ಭೂ ಸ್ವಾಧಿನಿ ಅಧಿಕಾರಿ ಶೃತಿ ಇದ್ದರು.