ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಅನೇಕ ಚುನಾವಣೆಗಳು ಬರುತ್ತವೆ, ಆದರೆ ಇದು ದೇಶದ ಭವಿಷ್ಯದ ಚುನಾವಣೆ. ಇಲ್ಲಿ ಅಭ್ಯರ್ಥಿಗಿಂತ ಪಕ್ಷ ಮತ್ತು ದೇಶವನ್ನು ನೋಡಬೇಕು ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 70 ವರ್ಷಗಳ ಕಾಂಗ್ರೆಸ್ ಆಳ್ವಿಕೆಯಲ್ಲಿ ಮರ ನಿಲ್ಲಿಸಿದರೂ ಗೆಲ್ಲುತ್ತೇವೆ ಎನ್ನುತ್ತಿದ್ದರು. ಈಗ ಕಾಲ ಬದಲಾಗಿದ್ದು, ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಗೆಲ್ಲುತ್ತಾನೆ. ಕಳೆದ 40 ವರ್ಷಗಳಿಂದ ಜನತೆ ಇಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ. ಈ ದೇಶದಲ್ಲಿ ಹುಟ್ಟಿಬೆಳೆದು ವಿರೋಧಿ ದೇಶಕ್ಕೆ ಜೈಕಾರ ಹಾಕುವವರು, ದೇಶದಲ್ಲಿ ಉಗ್ರ ಕೃತ್ಯ ನಡೆಸುವವರನ್ನು ತಡೆಯಲು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ ರೋಡ್‌ಶೋ ಪಕ್ಷ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತರಲಿದೆ ಎಂದರು.ಮುಖಂಡರಾದ ನಿತಿನ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ಮಂಜುಳಾ, ದಿನೇಶ್ ಪುತ್ರನ್, ಸತೀಶ್ ಆರ್ವಾರ್, ಜಗದೀಶ್ ಶೇಣವ ಇದ್ದರು.
ಆಗ ಬಿಲ್ಲವ ಪ್ರತಿನಿಧಿ, ಈಗ ಪಕ್ಷದ ಸಿಪಾಯಿ‘ಮೂಲ್ಕಿಯಲ್ಲಿ ನಡೆದ ಬಿಲ್ಲವ ರಾಷ್ಟ್ರೀಯ ಸಮಾವೇಶದಲ್ಲಿ ಬಿಲ್ಲವ ಸಮಾಜದ ಪ್ರತಿನಿಧಿಯಾಗಿ ನಾನು ಬಿಲ್ಲವರನ್ನು ಚುನಾವಣೆಯಲ್ಲಿ ಬೆಂಬಲಿಸುವ ವಿಚಾರದಲ್ಲಿ ಮಾತನಾಡಿದ್ದೇನೆ. ಆದರೆ ಇದು ಪಕ್ಷದ ವೇದಿಕೆ, ಜಾತಿಯ ಪ್ರಶ್ನೆ ಇಲ್ಲ. ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಆರ್‌ಎಸ್‌ಎಸ್‌ನ ಶಿಸ್ತಿನ ಸಿಪಾಯಿ’ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಬಿಲ್ಲವ ಅಭ್ಯರ್ಥಿಗಳನ್ನು ಬೆಂಬಲಿಸುವ ಅವರ ಹೇಳಿಕೆಯ ವಿಡಿಯೋ ವೈರಲ್ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಬಿಲ್ಲವ ಸಂಘದ ಕಾರ್ಯಕ್ರಮದಲ್ಲಿ ಜಾತಿ ಬಗ್ಗೆ ಮಾತನಾಡಬೇಕಿರುವುದು ನನ್ನ ಕರ್ತವ್ಯ. ಇದು ಬಿಲ್ಲವ ಸಂಘದ ಕಾರ್ಯಕ್ರಮವಲ್ಲ, ಬಿಜೆಪಿ ಪಕ್ಷದಲ್ಲಿ ಎಲ್ಲರೂ ಒಂದೇ, ಜಾತಿ ಭೇದ ಇಲ್ಲ. ನಳಿನ್ ಕುಮಾರ್‌ಗೆ ಪ್ರಥಮವಾಗಿ ಟಿಕೆಟ್ ನೀಡಿದಾಗ ಅವರು ಯಾರು ಎಂದೇ ಗೊತ್ತಿರಲಿಲ್ಲ. ಆಲದ ಮರದಂತಹ ಜನಾರ್ದನ ಪೂಜಾರಿ ಎದುರು ನಳಿನ್ ಕುಮಾರ್ ಸ್ಪರ್ಧಿಸಿದಾಗ ಜನತೆ ಜಾತಿ ನೋಡಿಲ್ಲ. ಧನಂಜಯ ಕುಮಾರ್, ಡಿ.ವಿ.ಸದಾನಂದ ಗೌಡ ಕೂಡ ಗೆದ್ದಿದ್ದಾರೆ. ಆಗ ಜಾತಿ ನೋಡದ ಜನತೆ ಈಗ ಜಾತಿ ನೋಡಿ ಮತ ಹಾಕುತ್ತಾರೆಯೇ ಎಂದು ಉಮಾನಾಥ ಕೋಟ್ಯಾನ್ ಮರು ಪ್ರಶ್ನಿಸಿದರು.
ಬ್ರಹ್ಮಶ್ರೀ ನಾರಾಯಣಗುರು ಲೋಕ ಸಂತ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶ ನೀಡಿದ್ದಾರೆ. ಬಿಜೆಪಿಗೆ ಮುಸ್ಲಿಂ, ಕ್ರಿಶ್ಚಿಯನ್, ಬಂಟರು, ಬಿಲ್ಲವರು, ಕುಲಾಲರು ಸೇರಿದಂತೆ ಪ್ರತಿಯೊಂದು ಸಮಾಜದ ಓಟು ಹಾಕುತ್ತದೆ.