ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ರಾಜ್ಯದಿಂದ ಓಡಿಸುವವರೆಗೂ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶಪ್ಪ ಹೇಳಿದರು.ಪಟ್ಟಣ ಗಾಂಧಿ ವೃತ್ತದಲ್ಲಿ ಮಂಡಲ ಯುವ ಮೋರ್ಚಾ ಹಾಗೂ ರೈತ ಮೋರ್ಚಾದ ಸಹಯೋಗದಲ್ಲಿ ಹಮ್ಮಿಕೊಂಡಿದ ಶಿವಮೊಗ್ಗ - ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಯಲ್ಲಿ ಮಾತನಾಡಿ ರಾಜ್ಯದ ಜನರ ಅಭಿವೃದ್ಧಿ ಮಾಡಬೇಕಾದ ಸರ್ಕಾರ ಬಡವ, ಹಿಂದುಳಿದ ಮತ್ತು ದಲಿತರಿಗೆ ಮೀಸಲಿಟ್ಟಿರುವಂತಹ ಹಣ ಲೂಟಿ ಮಾಡುತ್ತಿದೆ. ಕೆಲವು ಅಲ್ಪ ಪ್ರಮಾಣದ ಗ್ಯಾರಂಟಿ ಯೋಜನೆಗಳ ತರಾತುರಿಯಲ್ಲಿ ಜಾರಿ ಮಾಡಿ ಜನತೆಯ ಮೂಗಿಗೆ ತುಪ್ಪ ಸವರಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದರಿಂದ ಯಾರೊಬ್ಬರು ನೆಮ್ಮದಿಯಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದರು.
ವಾಲ್ಮೀಕಿ ಎಸ್ಟಿ ನಿಗಮದಿಂದ ಅನಾಮಧೇಯ ಖಾತೆಗೆ ನೂರಾರು ಕೋಟಿ ರುಪಾಯಿಗಳ ಅಕ್ರಮ ವರ್ಗಾವಣೆ ಮಾಡಿ ಇಡೀ ಎಸ್ಟಿ ಸಮುದಾಯದ ಜನರಿಗೆ ಅನ್ಯಾಯ ಮಾಡಲಾಗಿದೆ. ಆದ್ದರಿಂದ ಸಚಿವ ನಾಗೇಂದ್ರ ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.ಲೋಕಸಭೆ ಚುನಾವಣೆ ಫಲಿತಾಂಶ ನಂತರ ರಾಜ್ಯ ಸರ್ಕಾರ ಪತನವಾಗುವುದರಲ್ಲಿ ಎರಡು ಮಾತಿಲ್ಲ. ಹಿಂದುಳಿದ ನಿಗಮದ ₹187 ಕೋಟಿ ಹಣ ಲೂಟಿ ಮಾಡಿ ಇಕ್ಕಟಿಗೆ ಸಿಲುಕಿದೆ. ಕೋಮು ಭಾವನೆಗಳಿಗೆ ಪ್ರಚೋದನೆ ನೀಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಜನತೆಯ ಸಾಮರಸ್ಯದ ಬದುಕು ಬೀದಿಗೆ ಬರುತ್ತಿದೆ. ಅನಾದಿ ಕಾಲದಿಂದಲೂ ಲೂಟಿ ಹೊಡೆಯುವ ಭಾಗ್ಯಗಳಿಗೆ ಹಣ ಬಳಕೆ ಮಾಡುತ್ತಿದೆ. ಭ್ರಷ್ಟ ಮಂತ್ರಿಗಳ ಕೂಡಲೇ ಸಂಪುಟದಿಂದ ಕೈ ಬಿಡಬೇಕು. ಲಜ್ಜೆಗೆಟ್ಟ ಸರ್ಕಾರದಿಂದ ಜನತೆ ಯಾವುದು ನಿರೀಕ್ಷಿಸಲು ಸಾಧ್ಯವಿಲ್ಲ. ಬಿತ್ತನೆ ಬೀಜ ಸೇರಿ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಅಧಿಕಾರದ ಮದದಲ್ಲಿ ಜನ ಹಿತ ಮರೆತಿರುವ ಸರ್ಕಾರ ಅನ್ನದಾತನ ಬೆನ್ನು ಮುರಿಯುವ ಕೆಲಸ ಮಾಡುತ್ತಿದೆ ಎಂದರು.
ಯುವ ಮೋರ್ಚಾ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ ಹಿಂದೂಗಳ ಬಲಿದಾನಕ್ಕೆ ತಕ್ಕ ಉತ್ತರ ನೀಡಲಾಗುವುದು. ರಾಜ್ಯ ಕೋಮು ಗಲಭೆಯ ಫ್ಯಾಕ್ಟರಿ ಯಂತಾಗುತ್ತಿದೆ. ಕಾಂಗ್ರೆಸ್ ತೊಲಗುವವರೆಗೆ ರಾಜ್ಯಕ್ಕೆ ಉಳಿಗಾಲವಿಲ್ಲ. ರಾಜ್ಯದ ಜನತೆಯ ನೆಮ್ಮದಿಗೆ ಬೆಂಕಿ ಹಚ್ಚಿ ಭಾಗ್ಯಗಳ ನೀಡಿದರೆ ಫಲವೆನು ಬಂತು ಎಂದರು.ಮುಖಂಡರಾದ ಕೆ.ಪಿ ಕಿರಣ್ ಕುಮಾರ್, ಉಜ್ಜಿನಪ್ಪ, ವೆಂಕಟೇಶ್, ರಮೇಶ್, ಹಾಲೇಶಪ್ಪ, ಸಿದ್ದಪ್ಪ, ಕಾಂತರಾಜ್, ಚಂದ್ರಪ್ಪ, ಗಿರೀಶ್, ಜಯಮ್ಮ, ಕುಮಾರ್ ನಾಯ್ಡು. ಯೋಗೀಶ್, ಚಂದ್ರುಕುಮಾರ್, ಜೆ.ಜನಾರ್ದನ, ವಿಜಯ್ ರಾವ್, ನಾಗರಾಜ್ ರಾವ್ ಸೇರಿ ಇತರರಿದ್ದರು.