ಲಾರಿ ಡಿಕ್ಕಿ: ಬೈಕ್ ಸವಾರರು ಸ್ಥಳದಲ್ಲೇ ಸಾವು

| Published : Aug 02 2024, 12:50 AM IST

ಸಾರಾಂಶ

ಭವನ್ ಕುಮಾರ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದು, ಭಾನುಪ್ರಕಾಶ್ ಚೊಕ್ಕಹಳ್ಳಿ ಗೇಟ್‌ನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

ಚಿಂತಾಮಣಿ: ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಂತಾಮಣಿ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೇಕಲ್ಲಹಳ್ಳಿ ಗೇಟ್ ಬಳಿ ಬುಧವಾರ ರಾತ್ರಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ತಾಲೂಕಿನ ಕನಿಶೆಟ್ಟಿಹಳ್ಳಿಯ ಭವನ್‌ಕುಮಾರ್(೨೭), ಭಾನುಪ್ರಕಾಶ್(೨೩) ಎಂದು ಗುರುತಿಸಲಾಗಿದೆ. ಭವನ್ ಕುಮಾರ್ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದು, ಭಾನುಪ್ರಕಾಶ್ ಚೊಕ್ಕಹಳ್ಳಿ ಗೇಟ್‌ನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಗ್ರಾಮದ ಸ್ನೇಹಿತನೊಬ್ಬನ ಹುಟ್ಟುಹಬ್ಬದ ಸಮಾರಂಭಕ್ಕೆ ಇಬ್ಬರು ಸ್ನೇಹಿತರು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ ಕನಿಶೆಟ್ಟಿಹಳ್ಳಿಗೆ ಬರುತ್ತಿದ್ದಾಗ ಬುಧವಾರ ರಾತ್ರಿ ೯ ಗಂಟೆ ಸುಮಾರಿಗೆ ಸಂತೇಕಲ್ಲಹಳ್ಳಿ ಗೇಟ್ ಬಳಿ ಚಿಂತಾಮಣಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಸ್ಥಳಕ್ಕೆ ಡಿವೈಎಸ್ಪಿ ಮುರಳೀಧರ್, ಗ್ರಾಮಾಂತರ ಠಾಣೆಯ ಇನ್ಸ್ಸ್ಪೆಕ್ಟರ್ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.