ಸಾರಾಂಶ
ಖಾಸಗಿ ಸಾರಿಗೆ ಸಂಘಟನೆಗಳ ನಂತರ ಇದೀಗ ಲಾರಿ ಮಾಲೀಕರ ಸಂಘದಿಂದ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿಡಿ) ಅಳವಡಿಕೆಗೆ ವಿರೋಧ ವ್ಯಕ್ತವಾಗಿದ್ದು, ವಿಎಲ್‌ಟಿಡಿ ಅಳವಡಿಸುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಸರಕು ಸಾಗಣೆ ಲಾರಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಖಾಸಗಿ ಸಾರಿಗೆ ಸಂಘಟನೆಗಳ ನಂತರ ಇದೀಗ ಲಾರಿ ಮಾಲೀಕರ ಸಂಘದಿಂದ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್‌ಟಿಡಿ) ಅಳವಡಿಕೆಗೆ ವಿರೋಧ ವ್ಯಕ್ತವಾಗಿದ್ದು, ವಿಎಲ್‌ಟಿಡಿ ಅಳವಡಿಸುವ ಆದೇಶವನ್ನು ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಸರಕು ಸಾಗಣೆ ಲಾರಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿವೆ.ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದಾಗಿ ಸಾರ್ವಜನಿಕ ಸೇವೆ ನೀಡುವ ಕ್ಯಾಬ್, ಶಾಲಾ ವಾಹನಗಳು, ಬಸ್ ಸೇರಿದಂತೆ ಯೆಲ್ಲೋ ಬೋರ್ಡ್ ಅಳವಡಿಸಿರುವ ವಾಹನಗಳು ವಿಎಲ್‌ಟಿಡಿ ಅಳವಡಿಸಿಕೊಳ್ಳುವ ಗಡುವು ಮುಗಿದಿದೆ. ಹೀಗಾಗಿ ವಿಎಲ್‌ಟಿಡಿ ಅಳವಡಿಸಿಕೊಳ್ಳದ ವಾಹನಗಳಿಗೆ ದಂಡ ವಿಧಿಸುವುದರ ಜತೆಗೆ, ಫಿಟ್‌ನೆಸ್ ಪ್ರಮಾಣಪತ್ರ ನೀಡದಿರಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಆದರೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸಾರಿಗೆ ಇಲಾಖೆ ವಾಹನಗಳ ವಿರುದ್ಧ ಕ್ರಮ ಕೈಗೊಂಡರೆ ಆರ್‌ಟಿಒ ಕಚೇರಿ ಬಳಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟಿಸುವ ಎಚ್ಚರಿಕೆ ನೀಡಿದೆ. ಇದೀಗ ಲಾರಿ ಮಾಲೀಕರ ಸಂಘದ ಪ್ರಮುಖರು, ಸಾರಿಗೆ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ರಾಜ್ಯಾದ್ಯಂತ ಸರಕು ಸಾಗಣೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಹೇಳಿದ್ದಾರೆ.ಲಾರಿಗಳು ಯೆಲ್ಲೋ ಬೋರ್ಡ್ ಅಳವಡಿಸಿಕೊಂಡಿದ್ದರೂ, ಯಾವುದೇ ಸಾರ್ವಜನಿಕ ಸಾರಿಗೆ ಸೇವೆ ನೀಡುತ್ತಿಲ್ಲ. ಲಾರಿಗಳಲ್ಲಿ ಚಾಲಕರು ಮತ್ತು ಕ್ಲೀನರ್‌ಗಳು ಮಾತ್ರ ಸಂಚರಿಸುತ್ತಾರೆ. ಹೀಗಾಗಿ ಲಾರಿಗಳಿಗೆ ವಿಎಲ್‌ಟಿಡಿ ಅಳವಡಿಕೆ ಅವಶ್ಯಕತೆಯಿಲ್ಲ. ಆದರೂ, ಲಾರಿಗಳ ವಿರುದ್ಧವೂ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸದಿದ್ದರೆ ಮುಷ್ಕರ ನಡೆಸಲಾಗುವುದು ಹಾಗೂ ಸಾರಿಗೆ ಇಲಾಖೆ ಕಚೇರಿಗಳ ಬಳಿ ಲಾರಿಗಳನ್ನು ನಿಲ್ಲಿಸಲಾಗುವುದು ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.