ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಮತ್ತು ಇತರ ಅನ್ಯ 4 ಬೇಡಿಕೆಗಳನ್ನು ಮುಂದಿಟ್ಟು ಮಧ್ಯರಾತ್ರಿಯಿಂದ ಲಾರಿ ಮುಷ್ಕರ ಆರಂಭ

| N/A | Published : Apr 15 2025, 12:45 AM IST / Updated: Apr 15 2025, 09:00 AM IST

ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಮತ್ತು ಇತರ ಅನ್ಯ 4 ಬೇಡಿಕೆಗಳನ್ನು ಮುಂದಿಟ್ಟು ಮಧ್ಯರಾತ್ರಿಯಿಂದ ಲಾರಿ ಮುಷ್ಕರ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಮತ್ತು ಇತರ ಅನ್ಯ 4 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕು ಸಾಗಣೆ ಲಾರಿ ಮಾಲೀಕರು ಸೋಮವಾರ ಮಧ್ಯರಾತ್ರಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ 10ಕ್ಕೂ ಹೆಚ್ಚಿನ ಸಂಘಟನೆಗಳು ಬೆಂಬಲ  

 ಬೆಂಗಳೂರು : ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಮತ್ತು ಇತರ ಅನ್ಯ 4 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕು ಸಾಗಣೆ ಲಾರಿ ಮಾಲೀಕರು ಸೋಮವಾರ ಮಧ್ಯರಾತ್ರಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ 10ಕ್ಕೂ ಹೆಚ್ಚಿನ ಸಂಘಟನೆಗಳು ಬೆಂಬಲ ಘೋಷಿಸಿದ್ದು, ಮಂಗಳವಾರದಿಂದ ರಾಜ್ಯಾದ್ಯಂತ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ.

ಕಳೆದ 7 ತಿಂಗಳಲ್ಲಿ ಡೀಸೆಲ್‌ ಬೆಲೆಯನ್ನು 5.50 ರು. ಹೆಚ್ಚಳ ಮಾಡಿದ್ದನ್ನು ವಿರೋಧಿಸಿ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ನೇತೃತ್ವದಲ್ಲಿ ಏ.14ರ ಮಧ್ಯರಾತ್ರಿ 12 ಗಂಟೆಯಿಂದಲೇ ರಾಜ್ಯಾದ್ಯಂತ ಸರಕು ಸಾಗಣೆ ಸ್ಥಗಿತಗೊಳಿಸಲಾಗಿದೆ. ಮುಷ್ಕರಕ್ಕೆ ಕೇವಲ ಸರಕು ಸಾಗಣೆ ಲಾರಿ ಮಾಲೀಕರಷ್ಟೇ ಅಲ್ಲದೆ, ಮಧ್ಯಮ ವಾಣಿಜ್ಯ ಗೂಡ್ಸ್ ವಾಹನಗಳು, ಪೆಟ್ರೋಲ್ ಬಂಕ್‌ ಪಂಪ್ ಅಸೋಸಿಯೇಷನ್, ಎಲ್‌ಪಿಜಿ ಟ್ಯಾಂಕರ್ಸ್‌ ಅಸೋಸಿಯೇಷನ್‌ ಸೇರಿದಂತೆ 11 ಸಂಘಟನೆಗಳು ಬೆಂಬಲ ಘೋಷಿಸಿವೆ. ಇದರಿಂದಾಗಿ ದಿನಸಿ ವಸ್ತುಗಳು, ತರಕಾರಿ, ಹಣ್ಣು, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಆದರೆ, ಹಾಲು, ಪತ್ರಿಕೆ ಸೇರಿದಂತೆ ಇನ್ನಿತರ ವಸ್ತುಗಳ ಸರಬರಾಜಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಘೋಷಿಸಿದೆ.

5 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ:

ಡೀಸೆಲ್‌ ಬೆಲೆ ಏರಿಕೆಯನ್ನು ಪ್ರಮುಖವಾಗಿಟ್ಟು ಇನ್ನೂ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಾರಿ ಮುಷ್ಕರ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಪದೇಪದೇ ಡೀಸೆಲ್‌ ಮೇಲಿನ ತೆರಿಗೆ ಹೆಚ್ಚಳ ಮಾಡುತ್ತಿರುವುದರಿಂದ ಕಳೆದ 7 ತಿಂಗಳಲ್ಲಿ 5.50 ರು. ದರ ಏರಿಕೆಯಾಗಿದೆ. ಇದರಿಂದಾಗಿ ಲಾರಿ ಸೇರಿದಂತೆ ಎಲ್ಲ ವಾಹನಗಳ ಮಾಲೀಕರಿಗೆ ಸಮಸ್ಯೆಯಾಗುವಂತಾಗಿದೆ. ಕೂಡಲೇ ಬೆಲೆ ಇಳಿಕೆ ಮಾಡಬೇಕು. ಅದರ ಜತೆಗೆ ರಾಜ್ಯ ಹೆದ್ದಾರಿಗಳಲ್ಲಿ ಅಳವಡಿಸಲಾಗಿರುವ 46 ಟೋಲ್‌ ಪ್ಲಾಜಾಗಳನ್ನು ರದ್ದು ಮಾಡಬೇಕು, ಸಾರಿಗೆ ಇಲಾಖೆ ರಾಜ್ಯದ ಗಡಿ ಭಾಗದಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳನ್ನು ರದ್ದು ಮಾಡಬೇಕು, ಲಾರಿ ಸೇರಿದಂತೆ ಇನ್ನಿತರ ವಾಹನಗಳ ಫಿಟ್‌ನೆಸ್‌ ಪ್ರಮಾಣಪತ್ರ ಶುಲ್ಕವನ್ನು ಇಳಿಸಬೇಕು ಹಾಗೂ ಸರಕು ಸಾಗಣೆ ವಾಹನಗಳ ನಗರ ಪ್ರದೇಶಕ್ಕೆ ಪ್ರವೇಶಕ್ಕಿರುವ ನಿರ್ಬಂಧ ತೆರವು ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಲಾಗುತ್ತಿದೆ.

ಪಡಿತರ ಅಭಾವ ಸಾಧ್ಯತೆ:

ಮುಷ್ಕರಕ್ಕೆ 2 ಲಕ್ಷಕ್ಕೂ ಹೆಚ್ಚಿನ ಸರಕು ಸಾಗಣೆ ಲಾರಿಗಳ ಜತೆಗೆ, ಆ ಸರಕುಗಳನ್ನು ವಿವಿಧ ನಗರಗಳಿಗೆ ಸಾಗಿಸುವ 3 ಲಕ್ಷ ಮಧ್ಯಮ ಗೂಡ್ಸ್‌ ವಾಹನಗಳ ಮಾಲೀಕರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಪಿಎಂಸಿ ವರ್ತಕರು ಮುಷ್ಕರಕ್ಕೆ ಬೆಂಬಲ ನೀಡಿದ ಕಾರಣಕ್ಕಾಗಿ ದಿನಸಿ, ತರಕಾರಿ, ಹಣ್ಣು, ಹೂವು ಸೇರಿದಂತೆ ಇನ್ನಿತರ ವಸ್ತುಗಳ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಅದರ ಜತೆಗೆ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪೂರೈಕೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆಗಳಿವೆ. ಪೆಟ್ರೋಲ್‌ ಬಂಕ್‌ ಮಾಲೀಕರು, ಎಲ್‌ಪಿಜಿ ಟ್ಯಾಂಕರ್ಸ್‌ ಅಸೋಸಿಯೇಷನ್‌ ಬೆಂಬಲ ನೀಡಿರುವ ಕಾರಣದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಕಾಣಿಸಿಕೊಳ್ಳಲಿದೆ.

ಸಾರಿಗೆ ಸಚಿವರ ಸಂಧಾನ ವಿಫಲ:

ಕಳೆದ 10 ದಿನಗಳ ಹಿಂದೆಯೇ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ ಮುಷ್ಕರ ಘೋಷಿಸಿತ್ತು. ಅಲ್ಲದೆ, ಏ. 14ರೊಳಗೆ ಸಂಘದೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಕೆಗೆ ಸರ್ಕಾರ ಭರವಸೆ ನೀಡುವಂತೆಯೂ ಆಗ್ರಹಿಸಲಾಗಿತ್ತು. ಆದರೆ, ಸರ್ಕಾರದಿಂದ ಯಾವುದೇ ಸಭೆ ನಡೆಯಲಿಲ್ಲ. ಬದಲಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಂಘದ ಪದಾಧಿಕಾರಿಗಳಿಗೆ 2 ಬಾರಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿ ಮುಷ್ಕರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದರು. ಅಲ್ಲದೆ, ಕೇಂದ್ರ ಸರ್ಕಾರದ ಹೆಚ್ಚಳ ಮತ್ತು ಸದ್ಯ ರಾಜ್ಯದಲ್ಲಿನ ಡೀಸೆಲ್‌ ದರದ ಕುರಿತಂತೆ ವಿವರಣೆಯನ್ನೂ ನೀಡಿದ್ದರು. ಆದರೆ, ಅದಕ್ಕೊಪ್ಪದ ಸಂಘದ ಪದಾಧಿಕಾರಿಗಳು, ಡೀಸೆಲ್‌ ಬೆಲೆ ಇಳಿಕೆ ಮಾಡುವವರೆಗೆ ಮುಷ್ಕರ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಏ. 14ರ ಮಧ್ಯರಾತ್ರಿ 12 ಗಂಟೆಯಿಂದ ಮುಷ್ಕರ ನಡೆಸುತ್ತಿದ್ದಾರೆ.---

ಯಾವೆಲ್ಲ ವಸ್ತುಗಳ ಪೂರೈಕೆ ವ್ಯತ್ಯಯ?

ದಿನಸಿ, ತರಕಾರಿ, ಹಣ್ಣು, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಪೆಟ್ರೋಲಿಯಂ ಉತ್ಪನ್ನಗಳು, ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ, ಬೆಂಗಳೂರಿನ ಕೆಂಪೇಗೌಡ ವಿಮಾನನಿಲ್ದಾಣದ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಕಳೆದ 7 ತಿಂಗಳಲ್ಲಿ 5.50 ರು. ಡೀಸೆಲ್‌ ಬೆಲೆ ಹೆಚ್ಚಳ ಮಾಡಲಾಗಿದೆ. ಪದೇಪದೇ ಡೀಸೆಲ್‌ ಬೆಲೆ ಹೆಚ್ಚಳದಿಂದಾಗಿ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ರಾಜ್ಯ ಸರ್ಕಾರ ಲಾರಿ ಮಾಲೀಕರು ಮತ್ತು ಉದ್ಯಮದ ಕಾರ್ಮಿಕ ಹಿತದೃಷ್ಟಿಯಿಂದಾಗಿ ಡೀಸೆಲ್‌ ಬೆಲೆ ಇಳಿಸಬೇಕು. ಅದರ ಜತೆಗೆ ಇನ್ನಿತರ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಅನಿದಿಷ್ಟಾವಧಿ ಮುಷ್ಕರ ಮಾಡಲಾಗುತ್ತಿದೆ. ಇದರಿಂದ ಜನರಿಗೆ ತೊಂದರೆಯಾದರೆ ಸರ್ಕಾರವೇ ಹೊಣೆಯಾಗಲಿದೆ.

ಜಿ.ಆರ್‌. ಷಣ್ಮುಗಪ್ಪ -  ಅಧ್ಯಕ್ಷ, ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘ

ಮುಷ್ಕರಕ್ಕೆ ಬೆಂಬಲ ನೀಡಿರುವ ಸಂಘಟನೆಗಳು

* ಆಲ್‌ ಇಂಡಿಯಾ ಮೋಟಾರು ಟ್ರಾನ್ಸ್‌ಪೋರ್ಟ್‌ ಕಾರ್ಪೋರೇಷನ್‌, ಸೌತ್‌ ಇಂಡಿಯಾ ಮೋಟಾರು ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌, ಬೆಂಗಳೂರು ಸಿಟಿ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌, ಕರ್ನಾಟಕ ಗೂಡ್ಸ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌, ಬೆಂಗಳೂರು ಸಿಟಿ ಲೋಕಲ್‌ ಟ್ಯಾಕ್ಸಿ ಅಸೋಸಿಯೇಷನ್‌, ಎಲ್‌ಪಿಜಿ ಟ್ಯಾಂಕರ್‌ ಅಸೋಸಿಯೇಷನ್‌, ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘ, ಎಲ್‌ಪಿಜಿ ಟ್ಯಾಂಕರ್ ಅಸೋಸಿಯೇಷನ್‌, ಏರ್‌ಪೋರ್ಟ್‌ ಟ್ಯಾಕ್ಸಿ ಅಸೋಸಿಯೇಷನ್‌, ಬೆಂಗಳೂರು ಪ್ರವಾಸಿ ಟೆಂಪೋ ಮಾಲೀಕರ ಸಂಘ, ಕರ್ನಾಟಕ ಟ್ರಾನ್ಸ್‌ಪೋರ್ಟ್‌ ಮೋಟಾರ್‌ ಓನರ್ಸ್‌ ವೆಲ್ಫೇರ್‌ ಅಸೋಸಿಯೇಷನ್‌, ಆಲ್‌ ಡಿಸ್ಟ್ರಿಕ್ಟ್‌ ಲಾರಿ ಅಸೋಸಿಯೇಷನ್‌.