ನಿಮ್ಮ ಕೆಲಸವನ್ನು ಪ್ರೀತಿಸಿ ಮುನ್ನಡೆಯಿರಿ

| Published : Sep 08 2025, 01:00 AM IST

ಸಾರಾಂಶ

ಸುಂದರ ನೆನಪು ಮೂಡಿಸುವ ಛಾಯಾಗ್ರಾಹಕರ ಕೆಲಸ ಪ್ರೀತಿಸಿ ಅನುಭವಿಸಿ ನಡೆಸಿಕೊಂಡು ಹೋಗುವಂತೆ ಶಸ್ತ್ರ ಚಿಕಿತ್ಸಕ ಡಾ.ಸುದರ್ಶನ್ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಸುಂದರ ನೆನಪು ಮೂಡಿಸುವ ಛಾಯಾಗ್ರಾಹಕರ ಕೆಲಸ ಪ್ರೀತಿಸಿ ಅನುಭವಿಸಿ ನಡೆಸಿಕೊಂಡು ಹೋಗುವಂತೆ ಶಸ್ತ್ರ ಚಿಕಿತ್ಸಕ ಡಾ.ಸುದರ್ಶನ್ ಕರೆ ನೀಡಿದರು.ಪಟ್ಟಣದ ಹೊರ ವಲಯದಲ್ಲಿನ ಹೇರೂರು ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂಬ ಗಾದೆಯಂತೆ ನಮ್ಮ ವೃತ್ತಿ ಗೌರವಿಸಿ ಬಂದ ಆದಾಯದಲ್ಲಿ ಬದುಕು ಕಟ್ಟಿಕೊಳ್ಳಿ ಅಲ್ಲಿ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಿಗುತ್ತದೆ ಎಂದು ಸಲಹೆ ನೀಡಿದರು.ಆರೋಗ್ಯ ವಿಮೆ ಜೊತೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಸವಲತ್ತು ಸರ್ಕಾರ ಒದಗಿಸಿದೆ. ಹಗಲಿರುಳು ದುಡಿಯುವ ಫೋಟೋಗ್ರಾಫರ್ ಗಳು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿ ಆರೋಗ್ಯದತ್ತ ಗಮನಹರಿಸುತ್ತಿಲ್ಲ. ಎಲ್ಲರಿಗೂ ಸ್ಮೈಲ್ ಎಂದು ಹೇಳುತ್ತಾ ತಮ್ಮ ಜೀವನದಲ್ಲಿ ನಗು ಮಾಯ ಮಾಡಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸಂಘವು ಪ್ರತಿ ವರ್ಷ ಎಲ್ಲಾ ಸದಸ್ಯರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸುವುದು ಸೂಕ್ತ ಎಂದರು.ಕಾರ್ಮಿಕ ಇಲಾಖೆಯ ನಿರೀಕ್ಷಕ ತಿಲಕ್ ಮಾತನಾಡಿ, ಅಸಂಘಟಿತ ಕಾರ್ಮಿಕರ ವಲಯಕ್ಕೆ ಬರುವ ಛಾಯಾಗ್ರಾಹಕರು ಇಲಾಖೆಯಲ್ಲಿ ನೋಂದಣಿ ಮಾಡಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಿ. ನಂತರ ಅಪಘಾತ, ಅಂಗವಿಕಲತೆಗೆ ಒಂದು ಲಕ್ಷ ಹಾಗೂ ಆಸ್ಪತ್ರೆಯ ವೆಚ್ಚ 50 ಸಾವಿರ ಹಾಗೂ ಸಹಜ ಸಾವಿಗೆ 10 ಸಾವಿರ ಹೀಗೆ ಅನೇಕ ಸವಲತ್ತು ಸಿಗಲಿದೆ. ಈ ಜತೆಗೆ ಸರ್ಕಾರ ಕಾರ್ಮಿಕರ ಮಕ್ಕಳಿಗೆ ಸಹಾಯ ಕೂಡಾ ಮಾಡುತ್ತದೆ ಎಂದರು.ಅಂಚೆ ಇಲಾಖೆ ಅಧಿಕಾರಿ ಸುಜಯ್ ಮಾತನಾಡಿ ಸಂತೋಷ ಸಿಗದಿದ್ದಾಗ ವ್ಯಸನಿಗಳಾಗುವ ಮಂದಿ ಹೆಚ್ಚಿದ್ದಾರೆ. ಇದರಿಂದ ದೂರ ಉಳಿಯಲು ಹವ್ಯಾಸಿ ಪೋಟೋ ತೆಗೆಯುವ ಮಂದಿ ಸಾಕಷ್ಟು ಇದ್ದಾರೆ. ಈ ಮಧ್ಯೆ ಫೋಟೋಗ್ರಾಫರ್ ಗಳು ನಮ್ಮ ಕುಟುಂಬ, ಹಿರಿಯರು, ಪೂರ್ವಜರ ನೆನಪು ಮೂಡಿಸುತ್ತಾರೆ. ಆದರೆ ಮೊಬೈಲ್ ಹಾವಳಿ, ಸಾಮಾಜಿಕ ಜಾಲತಾಣದ ಪ್ರಭಾವದಿಂದ ಛಾಯಾಗ್ರಾಹಕರ ಹುದ್ದೆಗೆ ಕಂಟಕ ಬಂದಿದೆ. ಆದರೂ ಶುಭ ಸಮಾರಂಭಕ್ಕೆ ಮೆರಗು ಕೊಡುವ ಈ ಕಾಯಕಕ್ಕೆ ಅಂಚೆ ಇಲಾಖೆ ವಿಮೆ ಪಾಲಿಸಿಯ ಅವಕಾಶ ನೀಡಿದೆ ಎಂದರು.ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲೇಶ್ ಮಾತನಾಡಿ, ಮೊಬೈಲ್ ಹಾವಳಿ ನಮ್ಮನ್ನು ಉಸಿರು ಕಟ್ಟಿಸಿದೆ. ಮದುವೆ ಗೃಹಪ್ರವೇಶ ಇನ್ನಿತರ ಕಾರ್ಯಕ್ರಮದಲ್ಲಿ ಸೆಲ್ಫಿ ಹುಚ್ಚು ನಮ್ಮ ತಾಳ್ಮೆ ಪರೀಕ್ಷೆ ಮಾಡುತ್ತದೆ. ನಮ್ಮಗಳ ಬದುಕು ಕಷ್ಟ ಎನಿಸಿದ್ದರೂ ವೃತ್ತಿ ಗೌರವಿಸಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಮತ್ತೊಂದು ವ್ಯವಹಾರ ಮೂಲಕ ಜೀವನ ಸರಿದೂಗಿಸುತ್ತಿದ್ದಾರೆ. ಇವರೆಲ್ಲರ ಮಧ್ಯೆ ಸಂಘ ಸದಸ್ಯರಿಗೆ ಅನುಕೂಲ ಮಾಡುವ ಕೆಲಸ ನಿರಂತರ ಮಾಡುತ್ತಿದೆ ಎಂದರು.ಇದೇ ಸಂದರ್ಭದಲ್ಲಿ ಫೋಟೋಗ್ರಾಫರ್ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು. ಹಿರಿಯ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಚಿದಾನಂದ ಅವರಿಂದ ವಿಡಿಯೋ ಕ್ಯಾಮರ ಬಗ್ಗೆ ಕಾರ್ಯಗಾರ ನಡೆಸಲಾಯಿತು. ಹೊಸ ಸದಸ್ಯತ್ವ ನೋಂದಣಿ ಹಾಗೂ ಸರ್ವ ಸದಸ್ಯರ ನಡೆಸಲಾಯಿತು.ವೇದಿಕೆಯಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಚನ್ನಪ್ಪ, ಉಪಾಧ್ಯಕ್ಷ ಈರಲಿಂಗಪ್ಪ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಸಿಂಗ್, ಸಹ ಕಾರ್ಯದರ್ಶಿ ನೂತನ್, ಖಜಾಂಚಿ ಅಂಜನ್ ಕುಮಾರ್, ಸಂಘಟನಾ ಕಾರ್ಯದರ್ಶಿ ಸಿದ್ದಗಂಗಯ್ಯ, ವೀರೇಶ್, ಉಮೇಶ್ ಸೇರಿದಂತೆ ಎಲ್ಲಾ ನಿರ್ದೇಶಕರು, ಸದಸ್ಯರು ಇದ್ದರು.