ಭಾರಿ ಮಳೆಗೆ ತಗ್ಗು ಪ್ರದೇಶದ ಮನೆಗಳು ಜಲಾವೃತ

| Published : May 21 2024, 12:47 AM IST

ಸಾರಾಂಶ

ತಡ ರಾತ್ರಿ ಇದ್ದಕ್ಕಿದ್ದಂತೆ ಶುರು ಇಟ್ಟ ಮಳೆಯು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಒಮ್ಮೆಲೆ ಸುರಿದ ಮಳೆಯಿಂದಾಗಿ ನಿದ್ದೆಗೆ ಜಾರುತ್ತಿದ್ದ ಜನರು ಎದ್ದು ಕುಳಿತುಕೊಳ್ಳುವಂತೆ ಆಯಿತು. ಆದರೆ ತಗ್ಗು ಪ್ರದೇಶದ ನಿವಾಸಿಗಳ ಪರಿಸ್ಥಿತಿ ಬೇರೆಯೇ ಆಗಿತ್ತು. ಮಳೆ ಸುರಿಯುತ್ತಿದ್ದರಿಂದ ಮಳೆ ನೀರು ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ್ದರಿಂದ ಕೆಲ ಹೊತ್ತು ಆತಂಕದಲ್ಲಿ ಕಾಲ ಕಳೆದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಮಳೆ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಇತ್ತೀಚೆಗೆ ಬಿದ್ದ ಮಳೆಯಿಂದ ಕೊಂಚ ನೆಮ್ಮದಿ ನೀಡಿದ್ದರೂ ತಡರಾತ್ರಿ ಸುರಿದ ಭರ್ಜರಿ ಮಳೆಯಿಂದಾಗಿ ತಗ್ಗು ಪ್ರದೇಶದ ಕಟ್ಟಡಗಳಿಗೆ ನೀರು ನುಗ್ಗಿ ಕೆಲಹೊತ್ತು ಆತಂಕ ಮೂಡಿಸಿತು. ಸಂಜೆ ಆಗುತ್ತಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಕತ್ತಲಾಗುತ್ತಿದ್ದಂತೆ ತಂಪು ಗಾಳಿ ಆರಂಭವಾಗಿ ತಣ್ಣಗಾಯಿತು. ಆದರೆ ತಡ ರಾತ್ರಿ ಇದ್ದಕ್ಕಿದ್ದಂತೆ ಶುರು ಇಟ್ಟ ಮಳೆಯು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು. ಒಮ್ಮೆಲೆ ಸುರಿದ ಮಳೆಯಿಂದಾಗಿ ನಿದ್ದೆಗೆ ಜಾರುತ್ತಿದ್ದ ಜನರು ಎದ್ದು ಕುಳಿತುಕೊಳ್ಳುವಂತೆ ಆಯಿತು. ಆದರೆ ತಗ್ಗು ಪ್ರದೇಶದ ನಿವಾಸಿಗಳ ಪರಿಸ್ಥಿತಿ ಬೇರೆಯೇ ಆಗಿತ್ತು. ಮಳೆ ಸುರಿಯುತ್ತಿದ್ದರಿಂದ ಮಳೆ ನೀರು ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ್ದರಿಂದ ಕೆಲ ಹೊತ್ತು ಆತಂಕದಲ್ಲಿ ಕಾಲ ಕಳೆದರು. ಪಟ್ಟಣದ ಚನ್ನಗಿರಿ ರಸ್ತೆ, ಮಿಯಾಜಾನ್ ಕಾಲನಿ, ಅಂಬೇಡ್ಕರ್ ನಗರ ಮುಖ್ಯ ರಸ್ತೆಯ ಒಂದೆಡೆ ಚರಂಡಿ ವ್ಯವಸ್ಥೆ ಇಲ್ಲದೆ ಮೇಲ್ಭಾಗದಲ್ಲಿರುವ ಚರಂಡಿಯಲ್ಲಿ ಕಸ ತುಂಬಿಕೊಂಡು ನೀರು ಮುಂದೆ ಸಾಗದೆ ಚರಂಡಿ ನೀರೆಲ್ಲ ರಸ್ತೆ ಮೇಲೆ ಹರಿದು ತಗ್ಗಿನಲ್ಲಿರುವ ಕಟ್ಟಡಗಳಿಗೆ ನುಗ್ಗಲಾರಂಭಿಸಿತು. ಇದರಿಂದ ಮಳೆಗಾಗಿ ಪ್ರಾರ್ಥಿಸಿದ್ದ ಜನರು ಮಳೆ ಕಡಿಮೆ ಆಗುವಂತೆ ಭಗವಂತನಿಗೆ ಬೇಡಿಕೊಳ್ಳುವಂತಾಯಿತು.

ಮಳೆಗಾಲ ಆರಂಭಕ್ಕೂ ಮುನ್ನಾ ಮಳೆ ಆವಾಂತರ ಸೃಷ್ಟಿಯಾಗಿದೆ. ಮಳೆಗಾದಲ್ಲಿ ಇದು ಇನ್ನಷ್ಟು ಸಂಕಷ್ಟ ತಂದೊಡ್ಡಲಿದೆ. ಆದ್ದರಿಂದ ಸ್ಥಳೀಯ ಪಟ್ಟಣ ಪಂಚಾಯಿತಿಯವರು ಪ್ರಮುಖವಾಗಿ ಚನ್ನಗಿರಿ ರಸ್ತೆಯಲ್ಲಿ ತಕ್ಷಣ ಚರಂಡಿ ವ್ಯವಸ್ಥೆ ಕಲ್ಪಿಸಿ ಮಳೆಯಿಂದಾಗಿ ಆಗಬಹುದಾದ ಅನಾಹುತ ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಾಗುವ ನಷ್ಟಕ್ಕೆ ಪಂಚಾಯಿತಿ ಅಧಿಕಾರಿಗಳೆ ಹೊಣೆಗಾರರಾಗುತ್ತಾರೆ ಎಂದು ಸಂತ್ರಸ್ತರು ಎಚ್ಚರಿಸಿದ್ದಾರೆ. ಶಿವಮೊಗ್ಗದಲ್ಲಿ ಮುಂದುವರಿದ ಮಳೆ ಅಬ್ಬರ

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದ್ದು, ಶಿವಮೊಗ್ಗ ನಗರ ರಸ್ತೆಗಳು ಜಲಾವೃತಗೊಂಡಿವೆ. ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ನಗರದ ಬಿ.ಎಚ್‌.ರಸ್ತೆ ತುಂಬಾ ನೀರು ಹರಿದು ಕರೆಯಂತಾಗಿತ್ತು. ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಪ್ರಮುಖ ರಸ್ತೆಯಲ್ಲಿ ನೀರು ತುಂಬಿ ಸಾರ್ವಜನಿಕರು, ವಾಹನ ಸವಾರರು, ಸ್ಥಳೀಯರು ಪರದಾಡಿದರು. ಕೇವಲವೊಂದು ಮಳೆಗೆ ರಸ್ತೆಗಳು ಜಲಾವೃತಗೊಳ್ಳುತ್ತಿವೆ. ಇನ್ನೂ ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುತ್ತಿದೆ. ಮಳೆಗಾಲದಲ್ಲಿ ಇನ್ಯಾವ ಸ್ಥಿತಿ ಇರತ್ತೋ ಎಂದು ಸಾರ್ವಜನಿಕರು ಸ್ಮಾರ್ಟ್‌ಸಿಟಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಭಾನುವಾರ ಸುರಿದ ಕಾಶಿಪುರದ ಕುವೆಂಪು ಬಡಾವಣೆಯಲ್ಲಿ ಚರಂಡಿಯಲ್ಲಿ ಮಳೆಯ ನೀರು ಮನೆಗೆ ನುಗ್ಗಿ ಜಲಾವೃತಗೊಂಡಿತ್ತು. ಸೋಮವಾರ ಸುರಿದ ಮಳೆಯಿಂದಾಗಿ ಆರ್‌ಎಂಎಲ್‌ ನಗರದ ಕೆಲ ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರದಲ್ಲೂ ಮಳೆ ಸುರಿದಿದೆ.