ಯುದ್ಧದ ಕಾರಣದಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ, ಎಲ್ಲವೂ ಸಮರ್ಪಕವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಉಪ್ಪಿನಂಗಡಿ ಪರಿಸರದಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆಯಿದ್ದು, ಹೋಟೆಲ್ ಮಾಲೀಕರು ಸೇರಿದಂತೆ ವಾಣಿಜ್ಯ ಅನಿಲ ಬಳಕೆದಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ವಿಶೇಷ ವರದಿ
ಕನ್ನಡಪ್ರಭವಾರ್ತೆ ಉಪ್ಪಿನಂಗಡಿಯುದ್ಧದ ಕಾರಣದಿಂದ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ, ಎಲ್ಲವೂ ಸಮರ್ಪಕವಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಉಪ್ಪಿನಂಗಡಿ ಪರಿಸರದಲ್ಲಿ ವಾಣಿಜ್ಯ ಸಿಲಿಂಡರ್ ಕೊರತೆಯಿದ್ದು, ಹೋಟೆಲ್ ಮಾಲೀಕರು ಸೇರಿದಂತೆ ವಾಣಿಜ್ಯ ಅನಿಲ ಬಳಕೆದಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಅಮೇರಿಕಾ ಇರಾನ್ ನಡುವಣ ಯುದ್ಧದ ಮೊದಲು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಯಥೇಚ್ಛವಾಗಿ ದೊರೆಯುತ್ತಿತ್ತು. ಅಲ್ಲದೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆ ಬೆಲೆಗೆ ಸ್ಪರ್ಧಾತ್ಮಕವಾಗಿ ಲಭಿಸುತ್ತಿತ್ತು. ಈ ವ್ಯವಸ್ಥೆಯಿಂದಾಗಿ ಹಲವಾರು ವಾಣಿಜ್ಯ ಸಂಸ್ಥೆಗಳು ಲಕ್ಷಾಂತರ ಮೊತ್ತ ಸಾಲ ಬಾಕಿ ಇರಿಸಿಯೂ ವಾಣಿಜ್ಯ ಬಳಕೆಯ ಅಡುಗೆ ಅನಿಲವನ್ನು ನಿರಾಂತಕವಾಗಿ ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ಯುದ್ದ ಪ್ರಾರಂಭವಾದ ಬಳಿಕ ವಾಣಿಜ್ಯ ಅಡುಗೆ ಅನಿಲ ಸರಬರಾಜಿನಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ. ಯುದ್ದದ ಮೊದಲು ಯಾವುದೇ ರೀತಿಯ ನೋಂದಣಿಯೂ ಇಲ್ಲದೆ ಅನಿಲ ಜಾಡಿಗಳು ದೊರಕುತ್ತಿತ್ತು. ಆದರೆ ಹೊಸ ನಿಯಮಾವಳಿಯಿಂದಾಗಿ ಹೊಸ ಸಂಪರ್ಕ ನೋಂದಣಿ ಮಾಡಲಾಗದ ಸ್ಥಿತಿ ಉಂಟಾಗಿದೆ.೪೦೦೦ ರು. ಕ್ಕೂ ಮಿಕ್ಕಿದ ದರ
ಪ್ರಸಕ್ತ ಯುದ್ದದ ಕಾರಣಕ್ಕೆ ಅಡುಗೆ ಅನಿಲ ಸರಬರಾಜಿನಲ್ಲಿ ಉಂಟಾಗಿರುವ ಅಡೆತಡೆಗಳಿಂದಾಗಿ ಕೊಂಚ ಏರಿಕೆ ಕಂಡ ವಾಣಿಜ್ಯ ಉದ್ದೇಶದ ಅನಿಲ ಜಾಡಿಗಳ ದರವನ್ನು ಪ್ರಸಕ್ತ ೨೦೪೩ ರು.ಗೆ ನಿಗದಿಗೊಳಿಸಲಾಗಿದೆ. ಆದರೆ ಅಗತ್ಯದಷ್ಟು ವಾಣಿಜ್ಯ ನೆಲೆಯ ಅನಿಲ ಜಾಡಿಗಳು ಸರಬರಾಜಾಗುತ್ತಿಲ್ಲ ಎಂಬ ಕಾರಣಕ್ಕೆ ಗ್ರಾಹಕ ವರ್ಗವೂ ಅನಿಲ ಸಿಗದೆ ತಲ್ಲಣಗೊಂಡಿದೆ. ಹಲವಾರು ಹೋಟೇಲ್, ಕ್ಯಾಂಟೀನ್ ನಂತಹ ಉದ್ಯಮಗಳು ಸಂಕಷ್ಟಕ್ಕೀಡಾಗಿದೆ. ಈ ಮಧ್ಯೆ ೪೦೦೦ ರು. ಕ್ಕೂ ಮಿಕ್ಕಿದ ದರದಲ್ಲಿ ವಾಣಿಜ್ಯ ಸಿಲಿಂಡರ್ ಬಿಕರಿಯಾಗುತ್ತಿವೆ ಎಂಬ ದೂರು ಕೇಳಿಬರುತ್ತಿದೆ. ದುಬಾರಿ ದರ: ಉಪ್ಪಿನಂಗಡಿಯಲ್ಲಿ ಸಣ್ಣ ಕ್ಯಾಂಟೀನ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ವಸಂತ ಎಂಬವರು ವಾಣಿಜ್ಯ ಅಡುಗೆ ಅನಿಲವಿಲ್ಲದೆ ಸಂಕಷ್ಟಕ್ಕೀಡಾಗಿದ್ದು, ದುಬಾರಿ ಬೆಲೆಯ ಅನಿಲ ಜಾಡಿಗಳನ್ನು ಬಳಸಿ ಇಂದಿನ ಸ್ಪರ್ಧಾತ್ಮಕ ದರದಲ್ಲಿ ತಿಂಡಿಗಳನ್ನು ಮಾಡಿಕೊಡಲು ಸಾಧ್ಯವಿಲ್ಲ. ಗೃಹ ಬಳಕೆಯ ಅನಿಲ ದೊರಕುವಂತೆ ವಾಣಿಜ್ಯ ಉದ್ದೇಶದ ಅನಿಲವೂ ವ್ಯವಸ್ಥಿತ ರೀತಿಯಲ್ಲಿ ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ. ಬ್ಲ್ಯಾಕ್‌ನಲ್ಲಿ ಇದೆ: ಅಧಿಕೃತ ಗ್ಯಾಸ್ ಏಜೆನ್ಸಿಯವರು ಸರಬರಾಜಿನ ಕಾರಣ ನೀಡಿ ವಾಣಿಜ್ಯ ಸಿಲಿಂಡರ್ ಇಲ್ಲ ಎನ್ನುತ್ತಿದ್ದಾರೆ. ಇದೇ ವೇಳೆ ಬ್ಲ್ಯಾಕ್ ಮಾರ್ಕೆಟ್ ನಲ್ಲಿ ದುಬಾರಿ ಬೆಲೆಗೆ ಅನಿಲ ಜಾಡಿ ಲಭಿಸುತ್ತಿದ್ದು, ಇದು ವ್ಯವಸ್ಥೆಯ ಬಗ್ಗೆ ಶಂಖೆ ಮೂಡಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ನಿಗಾವಿರಿಸಬೇಕೆಂದು ಉದ್ಯಮಿ ಯು. ರಾಮ ಒತ್ತಾಯಿಸಿದ್ದಾರೆ.ಖಾಸಗಿ ಜಾಡಿಗಳಿಗೆ ಹೆಚ್ಚು ದರವಿದೆ: ಶಿರಸ್ತೆದಾರ್
ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆ ಬಗ್ಗೆ ಕಂದಾಯ ಇಲಾಖೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಅಧಿಕಾರಿ, ಶಿರಸ್ತೆದಾರ್ ಸರಸ್ವತಿ ಅವರನ್ನು ಸಂಪರ್ಕಿಸಿದಾಗ ಪ್ರಸಕ್ತ ಜಾಗತಿಕ ವಿದ್ಯಮಾನಗಳಿಂದಾಗಿ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು ಸರ್ಕಾರ ಗೃಹ ಬಳಕೆಯ ಅನಿಲ , ಮತ್ತು ಶಾಲೆ, ಆಸ್ಪತ್ರೆಗಳಂತಹ ಅವಶ್ಯಕ ಕ್ಷೇತ್ರಗಳಿಗೆ ಮೊದಲ ಆದ್ಯತೆಯಲ್ಲಿ ಗ್ಯಾಸ್ ಸಿಲಿಂಡರ್ ಪೂರೈಸುತ್ತಿದ್ದೇವೆ. ವ್ಯವಸ್ಥೆ ಸಹಜ ಸ್ಥಿತಿಗೆ ಬರುವ ವರೆಗೆ ಹೊಸ ಸಂಪರ್ಕ ನೀಡಲು ಆದೇಶವಿಲ್ಲ. ಮಾರುಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಅನಿಲ ಜಾಡಿಗಳು ಮಾರಾಟವಾಗುತ್ತಿವೆ ಎಂಬ ದೂರಿನ ಹಿಂದೆ ಖಾಸಗಿ ಸ್ವಾಮ್ಯದ ಅಡುಗೆ ಅನಿಲ ಸಂಸ್ಥೆಗಳ ಜಾಡಿಗಳನ್ನು ಪಡೆದು ಅದನ್ನು ಸರ್ಕಾರಿ ಗ್ಯಾಸ್ ಕಂಪನಿಗಳ ಗ್ಯಾಸ್ ಸಿಲಿಂಡರ್‌ಗೆ ತುಂಬಿಸುವ ದಂಧೆಯ ಕಾರಣವಿರಬಹುದು. ಅದೇ ರೀತಿ ಖಾಸಗಿ ಸ್ವಾಮ್ಯದ ಸಂಸ್ಥೆಗಳ ಅನಿಲ ಜಾಡಿಗಳಿಗೆ ದರ ನಿಗದಿ ಪಡಿಸುವ ಅಧಿಕಾರ ಅವರದ್ದೇ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ಅಡುಗೆ ಅನಿಲಕ್ಕಿಂತ ಹೆಚ್ಚಿನ ದರಕ್ಕೆ ಅಡುಗೆ ಅನಿಲ ಸಿಲಿಂಡರ್ ಮಾರಾಟವಾಗುತ್ತಿದೆ ತಿಳಿಸಿದ್ದಾರೆ.